ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಎಫೆಕ್ಟ್‌: ರೈತರಿಗೆ ಖಾರವಾದ ಮೆಣಸಿನಕಾಯಿ ಬೆಳೆ

ಬ್ಯಾಡಗಿ, ಗುಂಟೂರ ಮೆಣಸಿನಕಾಯಿ ಧಾರಣಿ ಕುಸಿತ
Last Updated 19 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಶಹಾಪುರ (ಯಾದಗಿರಿ ಜಿಲ್ಲೆ):ಚೀನಾದಲ್ಲಿ ಕೊರೊನಾ ವೈರಸ್ (ಕೋವಿಡ್ 19) ತಲ್ಲಣದಿಂದಾಗಿ ಮೆಣಸಿನಕಾಯಿ ರಫ್ತು ಸ್ಥಗಿತಗೊಂಡಿದ್ದು, ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರು ಬೆಲೆಕುಸಿತದಿಂದ ಕಂಗಾಲಾಗಿದ್ದಾರೆ.

ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಬಿತ್ತನೆ ಮಾಡಿದ ಬ್ಯಾಡಗಿ ಹಾಗೂ ಗುಂಟೂರ ಮೆಣಸಿನಕಾಯಿ ಬೆಳೆ ಕೈಗೆ ಬಂದಿದೆ. ಆದರೆ ಬೆಲೆ ಕುಸಿತದಿಂದ ಮೆಣಸಿನಕಾಯಿ ಬೆಳೆಗಾರರಿಗೆ ಖಾರವಾಗಿ ಪರಿಣಮಿಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಲಾಭದಾಯಕ ಹಾಗೂ ವಾಣಿಜ್ಯ ಬೆಳೆಯಾಗಿರುವ ಮೆಣಸಿನಕಾಯಿ ಬೆಳೆಯನ್ನು ಕಳೆದ ಅಗಸ್ಟ್ ತಿಂಗಳಲ್ಲಿ ಬಿತ್ತನೆ ಮಾಡಿದ್ದರು. ಆರಂಭದಲ್ಲಿ ಉತ್ತಮ ಬೆಳೆ ಬಂದಿತು ನಂತರ ವಾತಾವರಣದಲ್ಲಿ ಏರುಪೇರಾಗಿ ಬೆಳೆಗೆ ಹೆಚ್ಚಿನ ರೋಗ ಕಾಣಿಸಿಕೊಂಡಿತು. ಅದನ್ನು ಮೆಟ್ಟಿ ನಿಂತು ಮುನ್ನಡೆಯಬೇಕು ಎನ್ನುವಷ್ಟರಲ್ಲಿ ಮತ್ತೆ ರೋಗದ ಭಾಧೆಯಿಂದ ಬೆಳೆ ನರಳುವಂತೆ ಆಯಿತು. ಕೂಲಿ ಕಾರ್ಮಿಕರ ಮೇಲೆ ಕಾಯಿ ಕೀಳುವುದನ್ನು ಅವಲಂಬಿಸಿದ್ದರಿಂದ ಹೆಚ್ಚಿನ ಕೂಲಿ ನೀಡುವಂತೆ ಆಗಿದೆ. ಸಂಕಷ್ಟದ ನಡುವೆ ಬೆಳೆಯನ್ನು ಸಂರಕ್ಷಣೆ ಮಾಡಿ ಕಾಯಿ ಕೀಳಿ ಹಾಕಿದ್ದೇವೆ. ಈಗ ಧಾರಣಿ ಹೊಡೆತದಿಂದ ತತ್ತರಿಸುವಂತೆ ಆಗಿದೆ ಎನ್ನುತ್ತಾರೆ ಮೆಣಸಿನಕಾಯಿ ಬೆಳೆದ ರೈತ ವೆಂಕಟೇಶ.

ಬ್ಯಾಡಗಿ ಮೆಣಸಿನಕಾಯಿಗೆ ಹೆಚ್ಚಿನ ಬೇಡಿಕೆ ಇದೆ ಎನ್ನುವ ಉದ್ದೇಶದಿಂದ ಎಕರೆಗೆ ₹70ರಿಂದ80 ಸಾವಿರ ವೆಚ್ಚ ಮಾಡಿದ್ದೇವೆ. ಇಳುವರಿ ಎಕರೆಗೆ 10 ಕ್ವಿಂಟಾಲ್ ಬಂದಿದೆ. ಧಾರಣೆಯು ಪ್ರತಿ ಕ್ವಿಂಟಾಲ್‌ಗೆ ₹12,000 ಇದೆ. ಅದರಂತೆ ಗುಂಟೂರ ಮೆಣಸಿನಕಾಯಿ ಬೆಲೆ ₹5ಸಾವಿರ ಇದೆ. ತಿಂಗಳ ಹಿಂದೆ ದುಪ್ಪಟ್ಟು ಬೆಲೆಯನ್ನು ಕಂಡಿದ್ದ ಮೆಣಸಿನಕಾಯಿ ಧಾರಣಿ ಏಕಾ ಏಕಿ ಕಡಿಮೆಯಾಗಿರುವುದು ತುಂಬಾ ತೊಂದರೆಯನ್ನು ಉಂಟು ಮಾಡಿದೆ. ಧಾರಣೆ ಕುಸಿತವನ್ನು ಮೆಟ್ಟಿನಿಂತು ಮೆಣಸಿನಕಾಯಿ ಸಂಗ್ರಹಿಸಿ ಇಡಲು ಶೈತ್ಯಾಗಾರವಿಲ್ಲ(ಕೋಲ್ಡ್ ಸ್ಟೋರೇಜ್) ಇಲ್ಲ. ಇದರಿಂದ ವ್ಯಾಪರಸ್ಥರು ಕೇಳಿದ ಬೆಲೆಗೆ ನೀಡುವ ಅನಿವಾರ್ಯತೆ ಎದುರಾಗಿದೆ ಎನ್ನುತ್ತಾರೆ ಆಂಧ್ರ ವಲಸಿಗ ರೈತ ವಿಜಯರಡ್ಡಿ.

ಜಿಲ್ಲೆಯಲ್ಲಿ ಮೆಣಸಿನಕಾಯಿ ಖರೀದಿಯ ಮಾರುಕಟ್ಟೆ ಇಲ್ಲದ ಕಾರಣ ದೂರದ ಜಿಲ್ಲೆಯಾದ ಬ್ಯಾಡಗಿ ತೆಗೆದುಕೊಂಡು ತೆರಳಬೇಕು.ವಾಹನದ ಬಾಡಿಗೆ ಹಾಗೂ ಇನ್ನಿತರ ವೆಚ್ಚದಿಂದ ಲಾಭಕ್ಕಿಂತ ನಷ್ಟ ಜಾಸ್ತಿಯಾಗುತ್ತಿರುವುದರಿಂದ ಬರಿಗೈಯಲ್ಲಿ ಬರುವಂತೆ ಆಗುತ್ತದೆ. ಇಂತಹ ವಿಷಮ ಸಮಯದಲ್ಲಿ ಅನಿವಾರ್ಯವಾಗಿ ಮೆಣಸಿನಕಾಯಿಯನ್ನು ಹೊಲದಲ್ಲಿಯೇ ಸಂಗ್ರಹಿಸಿ ಇಟ್ಟಿದ್ದೇವೆ. ಮೆಣಸಿನಕಾಯಿ ಬೆಳೆಗೆ ಸೂಕ್ತ ಬೆಂಬಲ ಬೆಲೆ ನೀಡಿ ಸಂಕಷ್ಟದಲ್ಲಿ ಸಿಲುಕಿರುವ ರೈತರನ್ನು ಪಾರು ಮಾಡಬೇಕು ಎಂದು ಮೆಣಸಿನಕಾಯಿ ಬೆಳೆದ ರೈತರು ಮನವಿ ಮಾಡಿದ್ದಾರೆ.

ವಿದೇಶಕ್ಕೆ ಮೆಣಸಿನಕಾಯಿ ರಫ್ತು ಸ್ಥಗಿತಗೊಂಡಿದ್ದರಿಂದ ಧಾರಣೆ ಕುಸಿತವಾಗಿದೆ. ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದು ರೈತ ಮುಖಂಡರಾದ ಅಶೋಕ ಮಲ್ಲಾಬಾದಿ ಹೇಳುತ್ತಾರೆ.

ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಬಿತ್ತನೆ ಮಾಡಿದ ಬ್ಯಾಡಗಿ ಹಾಗೂ ಗುಂಟೂರ ಮೆಣಸಿನಕಾಯಿ ಬೆಳೆ ಕೈಗೆ ಬಂದಿದೆ. ಆದರೆ ಬೆಲೆ ಕುಸಿತದಿಂದ ಮೆಣಸಿನಕಾಯಿ ಬೆಳೆಗಾರರಿಗೆ ಖಾರವಾಗಿ ಪರಿಣಮಿಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಚೀನಾದಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡು ರಫ್ತುವಹಿವಾಟು ಸ್ಥಗಿತವಾಗಿದ್ದರಿಂದ ಮಾರುಕಟ್ಟೆ ಬೆಲೆ ಕುಸಿತವಾಗಿದೆ. ಇದರ ನೇರ ಪರಿಣಾಮವನ್ನು ಮೆಣಸಿನಕಾಯಿ ಬೆಳೆಗಾರರು ಅನುಭವಿಸುವಂತೆ ಆಗಿದೆ.

*
ವಿದೇಶಕ್ಕೆ ರಫ್ತು ಆಗುತ್ತಿದ್ದ ಬ್ಯಾಡಗಿ ಮೆಣಿಸಿನಕಾಯಿ ಸ್ಥಗಿತಗೊಂಡಿದ್ದರಿಂದ ಧಾರಣಿ ಕುಸಿತವಾಗಿದೆ. ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ.
-ಅಶೋಕ ಮಲ್ಲಾಬಾದಿ, ರೈತ ಮುಖಂಡರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT