ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌: ಮಾವಿನ ಬೆಲೆ ಕುಸಿತ

ಒಂದು ವಾರದಿಂದ ಧಾರಣೆ ಇಳಿಮುಖ; ಮಾರುಕಟ್ಟೆಯಲ್ಲಿ ಬೇಡಿಕೆಯೂ ಇಲ್ಲ
Last Updated 28 ಏಪ್ರಿಲ್ 2021, 21:31 IST
ಅಕ್ಷರ ಗಾತ್ರ

ರಾಮನಗರ: ರಾಜ್ಯದಾದ್ಯಂತ ಮಾವು ಧಾರಣೆ ಇಳಿಮುಖವಾಗಿದ್ದು, ಲಾಕ್‌ಡೌನ್‌ನಿಂದಾಗಿ ಬೆಲೆ ಇನ್ನಷ್ಟು ಕುಸಿಯುವ ಆತಂಕ ಎದುರಾಗಿದೆ.

ರಾಮನಗರ ಜಿಲ್ಲೆಯಲ್ಲಿ ಈಗಾಗಲೇ ಅರ್ಧದಷ್ಟು ಮಾವು ಕಟಾವು ಆಗಿದ್ದು, ರಾಜ್ಯದ ಉಳಿದ ಭಾಗಗಳಲ್ಲೂ ಮೇ ಮೊದಲ ವಾರದಿಂದ ಕೊಯ್ಲು ಆರಂಭ ಆಗಲಿದೆ. ಈ ನಡುವೆ ಕಳೆದೊಂದು ವಾರದಿಂದ ಬೆಲೆ ಕುಸಿಯುತ್ತಿರುವುದು ರೈತರನ್ನು ಆತಂಕಕ್ಕೆ ಈಡು ಮಾಡಿದೆ.

ರಾಮನಗರ ಜಿಲ್ಲೆ ಒಂದರಲ್ಲಿಯೇ ಈ ವರ್ಷ 2 ಲಕ್ಷ ಟನ್‌ ಮಾವು ಉತ್ಪಾದನೆ ಆಗಿದ್ದು, ಇಲ್ಲಿನ ಶೇಕಡ 90ರಷ್ಟು ಮಾವು ಹೊರ ರಾಜ್ಯಗಳಿಗೆ ಸಾಗಣೆ ಆಗುತ್ತಿದೆ. ಒಂದೊಮ್ಮೆ ಲಾಕ್‌ಡೌನ್‌ನಿಂದ ರಾಜ್ಯಗಳ ಗಡಿ ಮುಚ್ಚಿದರೆ ಸರಬರಾಜು ಕಷ್ಟ ಆಗಬಹುದು ಎನ್ನುವ ಕಾರಣಕ್ಕೆ ಮಹಾರಾಷ್ಟ್ರ ಭಾಗದ ವರ್ತಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಧಾರಣೆ ಕಡಿಮೆ ಆಗುತ್ತಿದೆ. ಕಳೆದೊಂದು ವಾರದ ಅವಧಿಯಲ್ಲಿ ಬಾದಾಮಿ ತಳಿ ಪ್ರತಿ ಕೆ.ಜಿ.ಗೆ ₹ 30–40, ರಸಪುರಿ ₹ 20–30 ರಷ್ಟು ಬೆಲೆ ತಗ್ಗಿದೆ.

ಈಗ ರಾಜ್ಯದಾದ್ಯಂತ ಲಾಕ್‌ಡೌನ್‌ ಜಾರಿಯಾಗಿದೆ. ಹಣ್ಣಿಗೆ ಬೇಡಿಕೆ ಕುಸಿಯುವ ಸಾಧ್ಯತೆ ಇದೆ. ಹೊರ ರಾಜ್ಯಗಳಿಗೆ ಸರಕು ಸಾಗಣೆಗೆ ಗೊಂದಲಗಳು ಇವೆ. ಇದು ಹೀಗೆ ಮುಂದುವರಿದಲ್ಲಿ ಪರಿಸ್ಥಿತಿ ಕೈ ಮೀರಬಹುದು ಎನ್ನುವ ಆತಂಕ ರೈತರದ್ದು.

ಅವಧಿ ಪೂರ್ವ ಕೊಯ್ಲು: ಕಳೆದ ವರ್ಷ ಲಾಕ್‌ಡೌನ್‌ನಿಂದಾಗಿ ಮಾವಿನ ಬೆಲೆ ಕುಸಿದು ರೈತರು ಸಂಕಷ್ಟ ಅನುಭವಿಸಿದ್ದರು. ಹೀಗಾಗಿ ಈ ಬಾರಿ ಲಾಕ್‌ಡೌನ್‌ ಘೋಷಣೆ ಆಗುತ್ತಿದ್ದಂತೆಯೇ ರೈತರು ಅವಧಿ ಪೂರ್ವ ಕೊಯ್ಲಿಗೆ ಮುಂದಾಗಿದ್ದಾರೆ. ಇದರಿಂದಾಗಿ ಇಲ್ಲಿನ ಚನ್ನಪಟ್ಟಣ ಹಾಗೂ ರಾಮನಗರ ಮಾವು ಮಾರುಕಟ್ಟೆಗಳಿಗೆ ಮಾವಿನ ಆವಕ ದ್ವಿಗುಣಗೊಂಡಿದೆ.

***

ಕಾಯಿಗಳು ಹೆಚ್ಚಾಗಿ ಮಾವಿನ ಜ್ಯೂಸ್ ಫ್ಯಾಕ್ಟರಿಗಳಿಗೆ ಹೋಗುತ್ತಿದ್ದು, ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಸ್ಥಳೀಯವಾಗಿ <br/>ಬೇಡಿಕೆ ಕುಸಿಯುತ್ತಿದೆ.
-ಬೆಳ್ಳಿಯಪ್ಪ, ಮಾವು ವರ್ತಕ, ರಾಮನಗರ

***

ಸಾಮಾನ್ಯವಾಗಿ ಏಪ್ರಿಲ್‌ನಲ್ಲಿ ಮಾವಿನ ಬೆಲೆ, ಬೇಡಿಕೆ ಹೆಚ್ಚಿರುತ್ತಿತ್ತು. ಈಗ ಬಾದಾಮಿ ಕಾಯಿ ಕೆ.ಜಿ.ಗೆ ₹ 30ಕ್ಕೆ ಹೋದರೆ ಹೆಚ್ಚು ಎಂಬಂತಾಗಿದೆ.
-ಲಕ್ಷ್ಮಿನಾರಾಯಣ, ರೈತ, ಬಾಳಲಿಂಗೇಗೌಡನ ದೊಡ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT