ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಪ್ಟೊಕರೆನ್ಸಿಯ ಅಪಾಯಗಳ ಬಗ್ಗೆ ತೆರೆದಿಟ್ಟ ನಿರ್ಮಲಾ ಸೀತಾರಾಮನ್‌

Last Updated 19 ಏಪ್ರಿಲ್ 2022, 5:05 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಹಣ ಅಕ್ರಮ ವರ್ಗಾವಣೆ ಮತ್ತು ಭಯೋತ್ಪಾದನಾ ಕೃತ್ಯಗಳಿಗೆ ಹಣಕಾಸು ನೆರವು ನೀಡಲು ಕ್ರಿಪ್ಟೊಕರೆನ್ಸಿ ಬಳಕೆಯಾಗಬಹುದು. ಇದು ಕ್ರಿಪ್ಟೊಕರೆನ್ಸಿಯ ಬಹು ದೊಡ್ಡ ಅಪಾಯ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸೋಮವಾರ ಅಭಿಪ್ರಾಯ ಪಟ್ಟಿದ್ದಾರೆ.

ಅಂತರರಾಷ್ಟ್ರೀಯ ಹಣಕಾಸು ನಿಧಿಯ ವಿಚಾರ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಭಾರತದಲ್ಲಿ ಕ್ರಿಪ್ಟೊಕರೆನ್ಸಿ ಬಳಕೆ ಮತ್ತು ಅದನ್ನು ಅಧಿಕೃತಗೊಳಿಸುವ ಬಗ್ಗೆ ಸರ್ಕಾರ ನಿರ್ಧಾರ ಕೈಗೊಂಡಿಲ್ಲ. ಆದರೆ, ವರ್ಚುವಲ್‌ ಅಥವಾ ಡಿಜಿಟಲ್‌ ರೂಪದ ಅಂಥ ಕರೆನ್ಸಿಗಳ ವಹಿವಾಟಿನಿಂದ ಗಳಿಸುವ ಲಾಭಕ್ಕೆ ತೆರಿಗೆ ವಿಧಿಸಲಾಗಿದೆ ಹಾಗೂ ಆರ್‌ಬಿಐ ಡಿಜಿಟಲ್‌ ರೂಪದಲ್ಲಿ ರೂಪಾಯಿ ಕರೆನ್ಸಿಯನ್ನು ಹೊರತರುವುದಾಗಿ ಪ್ರಕಟಿಸಿದೆ.

ಕ್ರಿಪ್ಟೊಕರೆನ್ಸಿಯ ನಿಯಂತ್ರಣ, ಅದರ ಬಳಕೆ ಹಾಗೂ ಅಪಾಯದ ಕುರಿತು ನಿರ್ಮಲಾ ಸೀತಾರಾಮನ್‌ ಮಾತನಾಡಿದ್ದಾರೆ. 'ಕ್ರಿಪ್ಟೊಕರೆನ್ಸಿಯನ್ನು ನಿಯಂತ್ರಿಸುವುದು ಬಹುಶಃ ತಂತ್ರಜ್ಞಾನ ಬಳಕೆಯ ಮೂಲಕ ಮಾತ್ರವೇ ಸಾಧ್ಯ. ಕ್ರಿಪ್ಟೊಕರೆನ್ಸಿ ಜಾಲವನ್ನು ನಿಯಂತ್ರಿಸುವಷ್ಟು ಆ ತಂತ್ರಜ್ಞಾನವು ಸಮರ್ಥವಾಗಿರಬೇಕು ಹಾಗೂ ಅದು ಒಂದು ರಾಷ್ಟ್ರದಿಂದ ಮಾತ್ರ ಸಾಧ್ಯವಾಗುವುದಿಲ್ಲ. ಎಲ್ಲರೂ ಆ ಬಗ್ಗೆ ಯೋಚಿಸಬೇಕಿದೆ' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೋವಿಡ್‌–19 ಅವಧಿಯಲ್ಲಿ ಭಾರತದಲ್ಲಿ ಡಿಜಿಟಲ್‌ ವ್ಯವಸ್ಥೆಗೆ ತೆರೆದುಕೊಂಡ ಬಗೆಯನ್ನು ನಿರ್ಮಲಾ ಸೀತಾರಾಮನ್‌ ತೆರೆದಿಟ್ಟಿದ್ದಾರೆ. '2019ರ ಮಾಹಿತಿ ಪ್ರಕಾರ, ಭಾರತದಲ್ಲಿ ಡಿಜಿಟಲ್‌ ವ್ಯವಸ್ಥೆ ಅಳವಡಿಸಿಕೊಂಡ ಪ್ರಮಾಣ ಸುಮಾರು ಶೇಕಡ 85ರಷ್ಟು. ಅದೇ ವರ್ಷ ಜಾಗತಿಕವಾಗಿ ಡಿಜಿಟಲ್‌ ಜಗತ್ತಿಗೆ ತೆರೆದುಕೊಂಡವರು ಶೇಕಡ 64ರಷ್ಟು ಜನ. ಸಾಂಕ್ರಾಮಿಕದ ಸಮಯದಲ್ಲಿ ಡಿಜಿಟಲ್‌ ವ್ಯವಸ್ಥೆಯನ್ನು ಬಳಸುವುದು, ಪರೀಕ್ಷಿಸುವುದು, ಹೊಂದಿಸಿಕೊಳ್ಳುವುದು ಸಾಧ್ಯವಾಗಿದೆ' ಎಂದು ಹೇಳಿರುವುದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT