ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲ್ಲದ ಬೆಲೆ ಕುಸಿತ: ಕಂಗಾಲಾದ ರೈತ

ವಿಪರೀತ ಉತ್ಪಾದನೆ, ರಾಸಾಯನಿಕ ಬಳಕೆ, ಖರೀದಿಗೆ ವರ್ತಕರ ನಿರಾಕರಣೆ
Last Updated 13 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ಮಂಡ್ಯ: ಒಂದು ತಿಂಗಳಿನಿಂದ ಮಾರುಕಟ್ಟೆಯಲ್ಲಿ ಬೆಲ್ಲದ ಬೆಲೆ ಕುಸಿಯುತ್ತಲೇ ಸಾಗಿದೆ. ಹಿಂದಿನ ವರ್ಷ ಡಿಸೆಂಬರ್‌ ಆರಂಭದಲ್ಲಿ ಕ್ವಿಂಟಲ್‌ಗೆ ₹ 4 ಸಾವಿರ ಗಡಿ ತಲುಪಿತ್ತು. ಈ ವರ್ಷ ₹ 2,400ಕ್ಕೆ ಕುಗ್ಗಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ನವೆಂಬರ್‌ 1ರಿಂದ ಡಿ.12ರ ವರೆಗೆ ಕ್ವಿಂಟಲ್‌ ಬಕೆಟ್‌ ಬೆಲ್ಲದ ಬೆಲೆ ₹1,100ರವರೆಗೆ ಕುಸಿದಿದೆ. ಅಚ್ಚು, ಬಾಕ್ಸ್‌, ಕುರಿಕಾಲಚ್ಚು ಬೆಲ್ಲದ ಬೆಲೆಯಲ್ಲಿ ₹1000 ಇಳಿಕೆಯಾಗಿದೆ. ದಶಕದಿಂದೀಚೆಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕುಸಿತ ಕಂಡಿರಲಿಲ್ಲ. ಮಾರುಕಟ್ಟೆಯಲ್ಲಿ ಚಿನ್ನದಂತಹ ಹೊಳಪಿನ ಬೆಲ್ಲವೂ ಮಾರಾಟವಾಗದೇ ಉಳಿದಿದ್ದು ರೈತರು ಆತಂಕಕ್ಕೀಡಾಗಿದ್ದಾರೆ. ಹೆಚ್ಚು ದಿನ ಸಂಗ್ರಹಿಸಿಡಲು ಸಾಧ್ಯವಾಗದೆ, ಆಲೆಮನೆ ಮಾಲೀಕರು ಕೇಳಿದ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

‘10 ವರ್ಷಗಳ ಹಿಂದೆ ಹೀಗೆಯೇ ಬೆಲೆ ಕುಸಿದಿತ್ತು. ಆಗ ಕಬ್ಬಿನ ಗದ್ದೆಗೆ ಬೆಂಕಿ ಇಟ್ಟಿದ್ದರು. ಈಗಲೂ ಅದೇ ಪರಿಸ್ಥಿತಿ ನಿರ್ಮಾಣವಾಗುವ ಅಪಾಯವಿದೆ. ಕ್ವಿಂಟಲ್‌ ಬೆಲ್ಲ ₹ 3 ಸಾವಿರ ಗಡಿ ದಾಟಲಿಲ್ಲ ಎಂದರೆ ನಷ್ಟ ಖಚಿತ. ಡಿಸೆಂಬರ್‌ನಲ್ಲಿ ಬೆಲೆ ಚೇತರಿಸಿಕೊಳ್ಳಬಹುದು ಎಂದು ನಿರೀಕ್ಷೆ ಮಾಡಿದ್ದೆವು. ಆದರೆ ಕುಸಿತ ಮುಂದುವರಿದಿದೆ. ರೈತರ ಆತ್ಮಹತ್ಯೆ ಇನ್ನೂ ಹೆಚ್ಚಾಗುತ್ತವೆ’ ಎಂದು ರೈತ ಶಿವರಾಜೇಗೌಡ ಆತಂಕ ವ್ಯಕ್ತಪಡಿಸಿದರು.

ಬೇಡವಾದ ಮಂಡ್ಯ ಬೆಲ್ಲ: ಮಂಡ್ಯ ಬೆಲ್ಲ ದೇಶದಾದ್ಯಂತ ಪ್ರಸಿದ್ಧಿ ಪಡೆದಿತ್ತು. ಗುಜರಾತ್‌, ರಾಜಸ್ಥಾನ, ಪಂಜಾಬ್‌, ಹರಿಯಾಣ, ಆಂಧ್ರಪ್ರದೇಶ ಮುಂತಾದ ರಾಜ್ಯಗಳಿಗೆ ಸರಬರಾಜು ಆಗುತಿತ್ತು. ದಾವಣಗೆರೆ, ಹೊಸಪೇಟೆ, ಬಳ್ಳಾರಿ ಭಾಗ ಸೇರಿ ಉತ್ತರ ಕರ್ನಾಟಕಕ್ಕೂ ರವಾನೆಯಾಗುತ್ತಿತ್ತು. ಆದರೆ, ಅಲ್ಲಿ ಸ್ಥಳೀಯವಾಗಿ ಗುಣಮಟ್ಟದ ಬೆಲ್ಲ ತಯಾರಾಗುತ್ತಿದ್ದು ಮಂಡ್ಯ ಬೆಲ್ಲ ಬೇಡವಾಗಿದೆ.

‘ಮೇ ತಿಂಗಳಿನಿಂದ ಡಿಸೆಂಬರ್‌ವರೆಗೆ ಮಂಡ್ಯ ಬೆಲ್ಲಕ್ಕೆ ಹೆಚ್ಚು ಬೇಡಿಕೆ ಇತ್ತು. ಈಗ ರಾಜ್ಯದ ಹಲವು ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯದ ಕಾರಣ ಎಲ್ಲೆಡೆ ಆಲೆಮನೆಗಳು ತಲೆ ಎತ್ತಿವೆ. ರೈತರು ಹೈಬ್ರಿಡ್‌ ಕಬ್ಬಿನ ತಳಿ ಬೆಳೆಯುತ್ತಿದ್ದು ಎಕರೆಗೆ 80 ಟನ್‌ ಬೆಲ್ಲ ಬರುತ್ತಿದೆ. ಹೀಗಾಗಿ ಬೆಲೆ ಕುಸಿದಿದೆ’ ಎಂದು ಎಪಿಎಂಸಿ ವರ್ತಕ ಶಿವಸುಂದರ್‌ ಹೇಳಿದರು.

ಈಗ ಯುಪಿ ಬೆಲ್ಲ: ‘ಜಿಲ್ಲೆಯ ರೈತರು, ನೂರಾರು ಆಲೆಮನೆಗಳನ್ನು ಉತ್ತರ ಪ್ರದೇಶದಿಂದ ಬಂದ ವರ್ತಕರಿಗೆ ಗುತ್ತಿಗೆ ಕೊಟ್ಟಿದ್ದಾರೆ. ಅಲ್ಲಿಂದಲೇ ಕಾರ್ಮಿಕರನ್ನು ಕರೆತಂದು ಕಬ್ಬು ಕಡಿಸಿ, ಬೆಲ್ಲ ತಯಾರಿಸುತ್ತಿದ್ದಾರೆ. ಬೆಲ್ಲಕ್ಕೆ ಹೊಳಪು ನೀಡುವ ಉದ್ದೇಶದಿಂದ ವಿಪರೀತ ರಾಸಾಯನಿಕ ಬಳಸುತ್ತಿದ್ದಾರೆ. ಸಕ್ಕರೆ ಬೆರೆಸಿ ಬೆಲ್ಲ ತೆಗೆಯುತ್ತಿದ್ದಾರೆ. ಹೀಗಾಗಿ ಮಂಡ್ಯ ಬೆಲ್ಲ ಈಗ ಯುಪಿ ಬೆಲ್ಲ (ಉತ್ತರ ಪ್ರದೇಶ) ಎಂಬ ಹೆಸರು ಪಡೆದಿದೆ.

‘ಗುಣಮಟ್ಟ ಹಾಳಾಗಿದ್ದು ಹೊರರಾಜ್ಯಗಳಲ್ಲಿ ಇಲ್ಲಿಯ ಬೆಲ್ಲ ಕೊಳ್ಳಲು ನಿರಾಕರಿಸುತ್ತಿದ್ದಾರೆ. ಮೈಷುಗರ್‌ ಕಾರ್ಖಾನೆ, ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯ ಚಕ್ರಗಳು ತಿರುಗಿದ್ದರೆ ನಮಗೆ ಈ ಸ್ಥಿತಿ ಬರುತ್ತಿರಲಿಲ್ಲ’ ಎಂದು ರೈತ ಮುಖಂಡ ಕೆ.ಎಸ್‌.ನಂಜುಂಡೇಗೌಡ ತಿಳಿಸಿದರು.

ವರ್ತಕರಿಗೆ ಗುಜರಾತ್ ನೋಟಿಸ್‌

‘ಮಂಡ್ಯ ಬೆಲ್ಲದಲ್ಲಿ ಅತಿಯಾದ ರಾಸಾಯನಿಕ ಇರುವುದಾಗಿ ಕಳೆದ ವರ್ಷ ಪ್ರಯೋಗಾಲಯದ ವರದಿ ಬಂದಿದೆ. ಹೀಗಾಗಿ ಗುಜರಾತ್‌ ಸರ್ಕಾರ ಮಂಡ್ಯ ಬೆಲ್ಲದ ಮೇಲೆ ನಿಷೇಧ ಹೇರಿದೆ. ಆದರೂ ಕೆಲವರು ಗುಜರಾತ್‌ಗೆ ಬೆಲ್ಲ ರವಾನಿಸುತ್ತಿದ್ದರು. ಹೀಗಾಗಿ ಇಲ್ಲಿಯ ಕೆಲ ವರ್ತಕರಿಗೆ ಗುಜರಾತ್‌ ಸರ್ಕಾರ ನೋಟಿಸ್‌ ಕಳುಹಿಸಿದೆ. ಪ್ರತಿದಿನ ನೂರಾರು ಕ್ವಿಂಟಲ್‌ ಬೆಲ್ಲ ಗುಜರಾತ್‌ಗೆ ರವಾನೆಯಾಗುತ್ತಿತ್ತು’ ಎಂದು ವರ್ತಕ ರಾಧಾಕೃಷ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT