ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕತೆ ಸೃಷ್ಟಿಸಿದ ಆತಂಕ

Last Updated 27 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಜಾಗತಿಕ ಆರ್ಥಿಕತೆಯ ಚಿತ್ರಣವು ದಿನೇ ದಿನೇ ಹೆಚ್ಚೆಚ್ಚು ಮಸುಕಾಗುತ್ತಿದೆ. ಕಾರ್ಖಾನೆಗಳಲ್ಲಿನ ತಯಾರಿಕಾ ಚಟುವಟಿಕೆಗಳು ಕುಂಠಿತಗೊಂಡಿವೆ. ಅನೇಕ ಉದ್ದಿಮೆ ವಹಿವಾಟುಗಳ ಮಾರಾಟ ಹೆಚ್ಚಳವು ನಿಧಾನಗೊಂಡಿದೆ. ಜಾಗತಿಕ ಆರ್ಥಿಕತೆಯ ಒಟ್ಟಾರೆ ಬೆಳವಣಿಗೆಯು ಮಂದಗತಿಯಲ್ಲಿ ಇದೆ. ಸರ್ಕಾರಗಳ ಸಾಲದ ಹೊರೆಯ ಕಾರಣಕ್ಕೆ ತೆರಿಗೆ ಕಡಿತಗೊಳಿಸುವುದು, ಹೊಸ ಮೂಲ ಸೌಕರ್ಯ ಯೋಜನೆಗಳಿಗೆ ಹಣಕಾಸಿನ ನೆರವು ಒದಗಿಸುವುದು ಸಾಧ್ಯವಾಗುತ್ತಿಲ್ಲ. ಜಾಗತಿಕ ಆರ್ಥಿಕ ಬೆಳವಣಿಗೆಯ ಮುನ್ನೋಟವನ್ನು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಮತ್ತು ವಿಶ್ವಬ್ಯಾಂಕ್‌ ತಗ್ಗಿಸಿವೆ. ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಲು ನಾಲ್ಕೈದು ವರ್ಷಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ... ಈ ಮೇಲಿನ ಸಾಲುಗಳಲ್ಲಿ ಜಾಗತಿಕ ಶಬ್ದ ಇರುವೆಡೆ ಭಾರತ ಎಂದು ಬದಲಿಸಿದರೆ ದೇಶಿ ಆರ್ಥಿಕತೆಯ ಸ್ಪಷ್ಟ ಚಿತ್ರಣ ಕಣ್ಮುಂದೆ ಬರುತ್ತದೆ. ಸದ್ಯಕ್ಕೆ ಜಾಗತಿಕ ಮತ್ತು ದೇಶಿ ಅರ್ಥ ವ್ಯವಸ್ಥೆಗಳು ಒಂದೇ ದೋಣಿಯಲ್ಲಿ ಪಯಣಿಸುತ್ತಿವೆ. ಅಮೆರಿಕ, ಚೀನಾ, ಐರೋಪ್ಯ ಒಕ್ಕೂಟದಲ್ಲಿನ ಆರ್ಥಿಕ ಪರಿಸ್ಥಿತಿಯೂ ಆಶಾದಾಯಕವಾಗಿಲ್ಲ.

ಆರ್ಥಿಕತೆಯ ವಿವಿಧ ಕ್ಷೇತ್ರಗಳಲ್ಲಿ ಬೇಡಿಕೆ ಕುಸಿತ, ಉದ್ಯೋಗ ನಷ್ಟ ಮತ್ತು ನಗದುತನದ ಬಿಕ್ಕಟ್ಟು ಕಂಡು ಬರುತ್ತಿದೆ. ಇದು ಒಟ್ಟಾರೆ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ₹ 5 ಬೆಲೆಯ ಬಿಸ್ಕಿಟ್‌ನಿಂದ ಹಿಡಿದು ಒಳ ಉಡುಪು, ಫ್ಲ್ಯಾಟ್‌ ಮತ್ತು ಕಾರ್‌ ಖರೀದಿವರೆಗೆ ಬೇಡಿಕೆ ಕುಸಿದಿದೆ. ತ್ವರಿತವಾಗಿ ಬಿಕರಿಯಾಗುವ ದಿನಬಳಕೆಯ ಸರಕುಗಳ (ಎಫ್‌ಎಂಸಿಜಿ) ಮಾರಾಟವೂ ಕಡಿಮೆಯಾಗಿದೆ.

ಇಂತಹ ನಿರಾಶಾದಾಯಕ ಪರಿಸ್ಥಿತಿಯಲ್ಲಿ 2025ರ ವೇಳೆಗೆ ದೇಶಿ ಆರ್ಥಿಕತೆಯ ಗಾತ್ರವನ್ನು ₹ 350 ಲಕ್ಷ ಕೋಟಿಗೆ ಹೆಚ್ಚಿಸುವ ಬಗ್ಗೆ ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆಯ ಗುರಿ ಹಾಕಿಕೊಂಡಿದೆ. ಈ ಗುರಿ ತಲುಪುವುದು ಅಷ್ಟು ಸುಲಭವೂ ಅಲ್ಲ. ಸಾಲ ನೀಡಿಕೆ ಪ್ರಮಾಣವು ಪ್ರತಿ ವರ್ಷ ಶೇ 20ರಷ್ಟು ಹೆಚ್ಚಳಗೊಂಡು ಸದ್ಯದ ₹ 98 ಲಕ್ಷ ಕೋಟಿಯಿಂದ ₹ 188 ಲಕ್ಷ ಕೋಟಿಗೆ ಏರಿಕೆಯಾಗಬೇಕು. ಹಾಗಿದ್ದರೆ ಮಾತ್ರ ಈ ಗುರಿ ಸಾಧನೆಯತ್ತ ಸ್ಪಷ್ಟ ಹೆಜ್ಜೆ ಹಾಕಬಹುದು ಎಂದು ಬ್ಯಾಂಕಿಂಗ್‌ ಕ್ಷೇತ್ರದ ಪ್ರಮುಖರೇ ಹೇಳುತ್ತ, ಈ ಗುರಿ ಸಾಧನೆ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾರೆ.

ದೇಶಿ ಅರ್ಥ ವ್ಯವಸ್ಥೆಯ ಕುಂಠಿತ ಬೆಳವಣಿಗೆ ಬಗ್ಗೆಯೇ ಈಗ ಎಲ್ಲೆಡೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಮಾರ್ಚ್‌ ತಿಂಗಳಲ್ಲಿನ ಆರ್ಥಿಕ ವೃದ್ಧಿ ದರವು ಶೇ 5.8ರಷ್ಟಾಗಿತ್ತು. ಇದು 5 ವರ್ಷಗಳಲ್ಲಿನ ಕನಿಷ್ಠ ಮಟ್ಟವಾಗಿದೆ. 2014–15ರ ನಂತರದ ಅತ್ಯಂತ ಕಡಿಮೆ ವೃದ್ಧಿ ಇದಾಗಿದೆ. ಗ್ರಾಹಕರ ಆತ್ಮವಿಶ್ವಾಸ ಕುಂದುತ್ತಿದೆ. ವಿದೇಶಿ ನೇರ ಬಂಡವಾಳದ ಹೊರ ಹರಿವು ಹೆಚ್ಚಿದೆ. ವಿನಿಮಯ ಮಾರುಕಟ್ಟೆಯಲ್ಲಿನ ಕರೆನ್ಸಿ ಸಮರವು ಈ ಎಲ್ಲ ಸಮಸ್ಯೆಗಳನ್ನು ಇನ್ನಷ್ಟು ವಿಷಮಗೊಳಿಸಿದೆ.

ಈ ವಿದ್ಯಮಾನವು ಆರ್ಥಿಕತೆಯ ಎಲ್ಲ ವಲಯಗಳಿಗೆ ಸಂಬಂಧಿಸಿರುವುದೇ ಅಥವಾ ಇದೊಂದು ಆರ್ಥಿಕ ಚಟುವಟಿಕೆಗಳ ಏರಿಳಿತದ ಸೀಮಿತ ವಿದ್ಯಮಾನವೇ ಎನ್ನುವ ಪ್ರಶ್ನೆಯೂ ಇಲ್ಲಿ ಉದ್ಭವಿಸುತ್ತದೆ.

ವಿವಿಧ ವಲಯಗಳಲ್ಲಿನ ನಿಧಾನಗತಿಯ ಬೆಳವಣಿಗೆಗೆ ಆರ್ಥಿಕ ಸುಧಾರಣಾ ಕ್ರಮಗಳ ಮೂಲಕ ಪರಿಹಾರ ಕಂಡುಕೊಳ್ಳಲಾಗುವುದು. ಇದರಿಂದ ಸರಕು ಮತ್ತು ಸೇವೆಗಳ ಪೂರೈಕೆಯಲ್ಲಿನ ಅಡಚಣೆ ದೂರ ಮಾಡಬಹುದು. ಏರಿಳಿತದ ಕಾರಣದಿಂದ ಉಂಟಾದ ಕುಂಠಿತ ಪ್ರಗತಿಗೆ ಬೇಡಿಕೆ ಹೆಚ್ಚಿಸುವ ತುರ್ತು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ದೇಶಿ ಅರ್ಥ ವ್ಯವಸ್ಥೆಯು ಸದ್ಯಕ್ಕೆ ವಿವಿಧ ವಲಯಗಳಲ್ಲಿನ ಬೇಡಿಕೆ ಕುಸಿತ ಸಮಸ್ಯೆ ಎದುರಿಸುತ್ತಿದೆ. ಹೀಗಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಹೆಚ್ಚು ಸಂಕೀರ್ಣವಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ವಿತ್ತೀಯ ಉತ್ತೇಜನಾ ಕೊಡುಗೆಗಳಿಗಿಂತ ಹಣಕಾಸು ಕೊಡುಗೆಗಳು ಮಹತ್ವದ ಪಾತ್ರ ವಹಿಸುತ್ತವೆ. ನಿಯಂತ್ರಣದಲ್ಲಿ ಇರುವ ಹಣದುಬ್ಬರವೂ ಸದ್ಯಕ್ಕೆ ಇಂತಹ ಕ್ರಮಗಳೇ ಹೆಚ್ಚು ಪೂರಕವಾಗಿರಲಿವೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಉತ್ತೇಜನಾ ಕ್ರಮಗಳನ್ನು ಪ್ರಕಟಿಸಿರುವುದು ಇದೇ ಕಾರಣಕ್ಕೆ ಎಂದೂ ವಿಶ್ಲೇಷಿಸಲಾಗುತ್ತಿದೆ. ಈ ಎಲ್ಲ ಉತ್ತೇಜನಾ ಕೊಡುಗೆಗಳು ರಾತ್ರಿ ಬೆಳಗಾಗುವುದರೊಳಗೆ ಆರ್ಥಿಕ ಚಟುವಟಿಕೆಗಳಿಗೆ ವೇಗ ನೀಡಲಾರವು. ಅವುಗಳ ಫಲಶ್ರುತಿ ಕಾಣಲು ಮೂರ್ನಾಲ್ಕು ತ್ರೈಮಾಸಿಕಗಳು ಬೇಕಾಗಬಹುದು. ಈ ಕೊಡುಗೆಗಳ ಹೊರತಾಗಿಯೂ ಮುಂದಿನ ಎರಡು ತ್ರೈಮಾಸಿಕ ಅವಧಿಯಲ್ಲಿ ಮಂದಗತಿಯ ಪ್ರಗತಿಯೇ ಮುಂದುವರೆದರೆ ಅದು ಈ ದಶಕದಲ್ಲಿನ ಅತಿ ದೀರ್ಘವಾದ ಬೆಳವಣಿಗೆ ಹಿಂಜರಿಕೆ ಆಗಿರಲಿದೆ.

ಕಳವಳಕಾರಿ ಲಕ್ಷಣಗಳು

* ಆರ್ಥಿಕತೆಯಲ್ಲಿನ ಮಂದಗತಿಯು ದಿನೇ ದಿನೇ ಇನ್ನಷ್ಟು ತೀವ್ರಗೊಳ್ಳುತ್ತಿರುವ ಆತಂಕಕಾರಿ ಲಕ್ಷಣಗಳು

*ವಾಹನ ತಯಾರಿಕಾ ಉದ್ದಿಮೆಯಲ್ಲಿ 2 ದಶಕಗಳಲ್ಲಿಯೇ ತೀವ್ರ ಸ್ವರೂಪದ ಬಿಕ್ಕಟ್ಟು

*₹ 5 ಬೆಲೆಯ ಬಿಸ್ಕಿಟ್‌ಗಳ ಮಾರಾಟವೂ ಕುಸಿತ

*ಪೂರಕ ಉದ್ದಿಮೆ ಮತ್ತು ಬಿಡಿಭಾಗ ತಯಾರಿಕೆ ವಲಯದಲ್ಲಿ ಸಾವಿರಾರು ಉದ್ಯೋಗಗಳ ನಷ್ಟ

*ರಿಯಲ್‌ ಎಸ್ಟೇಟ್‌ ವಲಯದಲ್ಲಿ ಮಾರಾಟವಾಗದ ಫ್ಲ್ಯಾಟ್‌ಗಳ ಸಂಖ್ಯೆ ಹೆಚ್ಚಳ

*ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನಗಳ (ಎಫ್‌ಎಂಸಿಜಿ) ವಹಿವಾಟಿನ ಹೆಚ್ಚಳದಲ್ಲಿ ಕುಸಿತ

*ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲದ ತೆರಿಗೆ ಮತ್ತು ಜಿಎಸ್‌ಟಿ ಸಂಗ್ರಹದಲ್ಲಿನ ಹೆಚ್ಚಳ

*ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ವಿನಿಮಯ ದರದ (₹ 72) ನಿರಂತರ ಕುಸಿತ

2.5 %

ಪ್ರಸಕ್ತ ವರ್ಷದ ಜಾಗತಿಕ ವ್ಯಾಪಾರದ ಬೆಳವಣಿಗೆ ದರ

6.8 %

2018–19ರಲ್ಲಿನ ದೇಶಿ ಆರ್ಥಿಕ ವೃದ್ಧಿ ದರ

5.8%

ಈ ವರ್ಷದ ಮಾರ್ಚ್‌ ತಿಂಗಳ ಆರ್ಥಿಕ ವೃದ್ಧಿ ದರ

6.9 %

2019–20ರಲ್ಲಿನ ಆರ್ಥಿಕ ವೃದ್ಧಿ ದರದ ಆರ್‌ಬಿಐ ಅಂದಾಜು

6.2%

ಆರ್ಥಿಕ ವೃದ್ಧಿ ದರದ ‘ಮೂಡಿಸ್‌’ ಅಂದಾಜು

ಯಾವುದು ಆರ್ಥಿಕ ಹಿಂಜರಿತ

ಸತತ ಮೂರು ತ್ರೈಮಾಸಿಕಗಳಲ್ಲಿ (9 ತಿಂಗಳಲ್ಲಿ) ಆರ್ಥಿಕ ಬೆಳವಣಿಗೆ ದರ ಕುಸಿತ ಕಂಡರೆ ಅದನ್ನು ಆರ್ಥಿಕ ಹಿಂಜರಿತ ಎಂದು ಪರಿಗಣಿಸಲಾಗುವುದು. ಆರ್ಥಿಕ ಹಿಂಜರಿತ ಹಂತದಲ್ಲಿ ಬೆಳವಣಿಗೆ ದರವು ಋಣಾತ್ಮಕ ಚಲನೆ ದಾಖಲಿಸುತ್ತದೆ. ಆರ್ಥಿಕ ಪ್ರಗತಿಯಲ್ಲಿನ ಹಿಂಜರಿಕೆಯು ಇದಕ್ಕಿಂತ ಭಿನ್ನವಾಗಿರುತ್ತದೆ. ಇಲ್ಲಿ ವೃದ್ಧಿ ದರ ಋಣಾತ್ಮಕ ಚಲನೆ ಕಾಣುವುದಿಲ್ಲ. ಸಕಾರಾತ್ಮಕ ಬೆಳವಣಿಗೆ ದಾಖಲಿಸುತ್ತಿದ್ದರೂ ವೇಗ ಕುಂಠಿತಗೊಂಡಿತ್ತದೆ.

*ಆರ್ಥಿಕ ವೃದ್ಧಿ ದರ: ದೇಶದಲ್ಲಿ ಉತ್ಪಾದನೆಯಾಗುವ ಎಲ್ಲ ಸರಕು ಮತ್ತು ಸೇವೆಗಳ ಒಟ್ಟು ಮೌಲ್ಯವಾಗಿರುವ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) 2019ರ ಜನವರಿ-ಮಾರ್ಚ್‌ ಅವಧಿಯಲ್ಲಿ ಶೇ 5.8ಕ್ಕೆ ಕುಸಿತ ಕಂಡಿದೆ.

*ಎಫ್‌ಡಿಐ ಕುಸಿತ: ದೇಶಿ ಆರ್ಥಿಕತೆಯ ಬೆಳವಣಿಗೆಗೆ ಪ್ರಮುಖ ಹಣಕಾಸಿನ ಮೂಲವಾಗಿರುವ ವಿದೇಶಿ ನೇರ ಬಂಡವಾಳ ಹೂಡಿಕೆಯು (ಎಫ್‌ಡಿಐ) 2018–19ರಲ್ಲಿ ಆರು ವರ್ಷಗಳಲ್ಲಿ ಮೊದಲ ಬಾರಿಗೆ ಕುಸಿತ ಕಂಡಿತ್ತು. ದೂರಸಂಪರ್ಕ, ಕಟ್ಟಡ ನಿರ್ಮಾಣ, ಔಷಧಿ ಮತ್ತು ಇಂಧನ ವಲಯದಲ್ಲಿನ ಹೂಡಿಕೆ ಪ್ರಮಾಣ ಇಳಿದಿದೆ.

*ಷೇರು ಮಾರುಕಟ್ಟೆಯಲ್ಲಿ ಕರಗಿದ ಸಂಪತ್ತು: ವಿಶ್ವದ 7ನೇ ಅತಿದೊಡ್ಡ ಷೇರುಪೇಟೆಯಾಗಿರುವ ‘ಬಿಎಸ್‌ಇ’ ಬಂಡವಾಳ ಮೌಲ್ಯವು ಆಗಸ್ಟ್ 26ಕ್ಕೆ₹ 140.34 ಲಕ್ಷ ಕೋಟಿಗೆ ಇಳಿಕೆಯಾಗಿದೆ. ನಷ್ಟದ ಪ್ರಮಾಣ ₹ 11 ಲಕ್ಷ ಕೋಟಿಗಳಷ್ಟಾಗಿದೆ.

*ವಾಹನ ಮಾರಾಟ ಕುಸಿತ: 3.5 ಕೋಟಿ ಜನರಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಜೀವನಾಧಾರವಾಗಿರುವ ಕಾರ್‌, ಲಘು ಮತ್ತು ಭಾರಿ ಸರಕು ಸಾಗಣೆ ವಾಹನ, ತ್ರಿಚಕ್ರ ಹಾಗೂ ದ್ವಿಚಕ್ರ ವಾಹನಗಳ ಶೇಕಡಾವಾರು ಮಾರಾಟವು ಜುಲೈ ತಿಂಗಳಲ್ಲಿ 19 ವರ್ಷಗಳಲ್ಲಿನ ಗರಿಷ್ಠ ಕುಸಿತ (ಶೇ 18.71) ಕಂಡಿದೆ.

*ರಿಯಲ್‌ ಎಸ್ಟೇಟ್‌: ಹಣಕಾಸಿನ ಬಿಕ್ಕಟ್ಟಿನ ಕಾರಣಕ್ಕೆ ಕಟ್ಟಡ ನಿರ್ಮಾಣಗಾರರು ಹೊಸ ಯೋಜನೆ ಕೈಗೆತ್ತಿಕೊಳ್ಳುವುದನ್ನು ನಿಧಾನ ಮಾಡುತ್ತಿದ್ದಾರೆ. ದುಬಾರಿ ಬಡ್ಡಿ ದರ ಕಾರಣಕ್ಕೆ ಫ್ಲ್ಯಾಟ್ ಖರೀದಿದಾರರು ನಿರ್ಧಾರ ಮುಂದೂಡುತ್ತಿದ್ದಾರೆ. ಇದರಿಂದ ಮಾರಾಟವಾಗದೆ ಉಳಿದ ಫ್ಲ್ಯಾಟ್‌ಗಳ ಸಂಖ್ಯೆ ಹೆಚ್ಚುತ್ತಿದೆ. ಬೇಡಿಕೆ ಕುಸಿತದಿಂದ 1 ಲಕ್ಷ ಉದ್ಯೋಗ ನಷ್ಟವಾಗಿರುವ ಅಂದಾಜಿದೆ. ಹೊಸ ನಿರ್ಮಾಣ ಯೋಜನೆಗಳು ಆರಂಭಗೊಳ್ಳದಿದ್ದರೆ ಉದ್ಯೋಗ ನಷ್ಟದ ಪ್ರಮಾಣ 5 ಲಕ್ಷಕ್ಕೆ ಏರುವ ಸಾಧ್ಯತೆ ಇದೆ.

*ಉದ್ಯೋಗ ನಷ್ಟ: ವಾಹನ ಮತ್ತು ಬಿಡಿಭಾಗ ತಯಾರಿಕೆ ವಲಯದಲ್ಲಿನ ಮಾರಾಟ ಕುಸಿತವು ಸಾವಿರಾರು ಉದ್ಯೋಗ ನಷ್ಟಕ್ಕೆ ಕಾರಣವಾಗಿದೆ. ತಯಾರಿಕೆ ಮತ್ತು ಡೀಲರ್‌ಗಳ ಹಂತದಲ್ಲಿ ಇದುವರೆಗೆ 3.50 ಲಕ್ಷ ಗುತ್ತಿಗೆ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಮಾರಾಟ ಕುಸಿತವು ಇದೇ ಬಗೆಯಲ್ಲಿ ಮುಂದುವರೆದರೆ ಉದ್ಯೋಗ ನಷ್ಟವು 10 ಲಕ್ಷ ಕೋಟಿಗೆ ತಲುಪಬಹುದು ಎನ್ನುವ ಆತಂಕ ಮನೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT