ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಥವ್ಯವಸ್ಥೆಯ ದುರ್ದಿನ ಕೊನೆಗೊಂಡಿದೆ: ಹಣಕಾಸು ಸಚಿವಾಲಯ ವರದಿ

Last Updated 4 ಆಗಸ್ಟ್ 2020, 16:04 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಾಣುವಿನಿಂದಾಗಿ ಕುಸಿತ ಕಂಡ ಭಾರತದ ಅರ್ಥವ್ಯವಸ್ಥೆಯ ಪಾಲಿಗೆ ದುರ್ದಿನಗಳು ಕೊನೆಗೊಂಡಿರುವಂತೆ ಕಾಣುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ. ಮುಂಗಾರು ಮಳೆ ಚೆನ್ನಾಗಿ ಆಗುವ ಸಾಧ್ಯತೆ ಇದೆಯಾದ ಕಾರಣ, ಕೊರೊನಾದಿಂದಾಗಿ ಅರ್ಥವ್ಯವಸ್ಥೆ ಹೆಚ್ಚು ಕುಸಿಯದಂತೆ ಕೃಷಿ ಕ್ಷೇತ್ರ ನೋಡಿಕೊಳ್ಳುತ್ತದೆ ಎಂದು ಸಚಿವಾಲಯ ವಿಶ್ವಾಸ ವ್ಯಕ್ತಪಡಿಸಿದೆ.

ಏಪ್ರಿಲ್‌ನಲ್ಲಿ ಕಂಡ ಕುಸಿತದ ನಂತರ, ಸರ್ಕಾರ ಹಾಗೂ ಆರ್‌ಬಿಐ ಕೈಗೊಂಡ ಕ್ರಮಗಳಿಂದಾಗಿ ಭಾರತದ ಅರ್ಥ ವ್ಯವಸ್ಥೆಯು ಚೇತರಿಕೆಯ ಹಾದಿಯಲ್ಲಿ ಸಾಗುತ್ತಿದೆ ಎಂದು ಆರ್ಥಿಕ ವ್ಯವಹಾರಗಳ ಇಲಾಖೆ ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಲಾಗಿದೆ.

‘ಭಾರತವು ಅನ್‌ಲಾಕ್‌ ಪ್ರಕ್ರಿಯೆಯಲ್ಲಿದೆ. ಅರ್ಥವ್ಯವಸ್ಥೆಯಲ್ಲಿನ ಚಟುವಟಿಕೆಗಳನ್ನು ಬಿಂಬಿಸುವ ಸೂಚಕಗಳು ಏಪ್ರಿಲ್‌ನ ಕುಸಿತಕ್ಕೆ ಹೋಲಿಸಿದರೆ ಜೂನ್‌ನಲ್ಲಿ ಚೇತರಿಕೆ ಕಂಡಿವೆ. ಹೀಗಿದ್ದರೂ, ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿರುವುದು ಹಾಗೂ ರಾಜ್ಯಗಳ ಮಟ್ಟದಲ್ಲಿ ಆಗಾಗ ಜಾರಿಯಾಗುತ್ತಿರುವ ಲಾಕ್‌ಡೌನ್‌ಗಳಿಂದ ತೊಂದರೆ ಇದ್ದೇ ಇದೆ’ ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ.

ಕೋವಿಡ್–19 ಪ್ರಕರಣಗಳು ಮತ್ತು ಆಗಾಗ ಜಾರಿಯಾಗುತ್ತಿರುವ ಲಾಕ್‌ಡೌನ್‌ಗಳು ಚೇತರಿಕೆ ಸಾಧ್ಯತೆಗೆ ಅಡ್ಡಿಯಾಗಬಲ್ಲವು ಎಂದೂ ವರದಿ ಹೇಳಿದೆ. ‘ಕೃಷಿ ಚಟುವಟಿಕೆಗಳಿಗೆ ಲಾಕ್‌ಡೌನ್‌ ನಿಯಮಗಳಿಂದ ಸಕಾಲದಲ್ಲಿ ವಿನಾಯಿತಿ ನೀಡಿದ್ದರ ಪರಿಣಾಮವಾಗಿ ಹಿಂಗಾರು ಬೆಳೆ ಕೊಯ್ಲು ಹಾಗೂ ಮುಂಗಾರು ಬಿತ್ತನೆ ಕಾರ್ಯಗಳು ಅಡೆತಡೆಯಿಲ್ಲದೆ ನಡೆದವು. ಗೋಧಿಯ ಖರೀದಿಯಿಂದ ರೈತರ ಕೈಗೆ ಒಟ್ಟು ₹ 75 ಸಾವಿರ ಕೋಟಿ ತಲುಪಿದೆ. ಇದು ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆ ಹೆಚ್ಚಿಸುತ್ತದೆ’ ಎಂದು ಅದು ಹೇಳಿದೆ.

ದೇಶದಲ್ಲಿ ಅನ್‌ಲಾಕ್‌ ಪ್ರಕ್ರಿಯೆ ಆರಂಭಗೊಂಡ ನಂತರ ಮೂಲಸೌಕರ್ಯ ಹಾಗೂ ನಿರ್ಮಾಣ ಚಟುವಟಿಕೆಗಳಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT