ಸೋಮವಾರ, ಜನವರಿ 20, 2020
18 °C
ಉದ್ಯಮಿಗಳಿಗೆ ಭರವಸೆ ನೀಡಿದ ಪ್ರಧಾನಿ ನರೇಂದ್ರ ಮೋದಿ

ಆರ್ಥಿಕತೆಗೆ ಪುಟಿದೇಳುವ ಸಾಮರ್ಥ್ಯ

ಪಿಟಿಐc Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಸದ್ಯಕ್ಕೆ ಎದುರಾಗಿರುವ ಕುಂಠಿತ ಪ್ರಗತಿಯ ಸಂಕಷ್ಟಗಳಿಂದ ಪುಟಿದೇಳುವ ಸಾಮರ್ಥ್ಯವನ್ನು ದೇಶಿ ಆರ್ಥಿಕತೆ ಹೊಂದಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆಯ ಮಾತು ಆಡಿದ್ದಾರೆ.

‘ಮಂದಗತಿಯ ಆರ್ಥಿಕತೆಯಿಂದ ಸದ್ಯದಲ್ಲೇ ಹೊರಬರಲಿರುವ ಆರ್ಥಿಕತೆಯು ಗರಿಷ್ಠ ವೃದ್ಧಿ ದರದ ಹಾದಿಗೆ ಮರಳಲಿದೆ. ಆರ್ಥಿಕ ವೃದ್ಧಿ ದರ (ಜಿಡಿಪಿ) ಏರಿಕೆ ದಾಖಲಿಸಲು ಕಾರ್ಪೊರೇಟ್‌ಗಳು ಬಂಡವಾಳ ಹೂಡಿಕೆ ಹೆಚ್ಚಿಸುವ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು’ ಎಂದು ಉದ್ಯಮಿಗಳನ್ನು ಒತ್ತಾಯಿಸಿದ್ದಾರೆ.

ಶುಕ್ರವಾರ ಇಲ್ಲಿ ನಡೆದ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ (ಅಸೋಚಾಂ) ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

‘ಕುಂಠಿತ ಆರ್ಥಿಕ ಪ್ರಗತಿ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿರುವುದರ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಆರ್ಥಿಕತೆ ಕುರಿತ ಟೀಕೆ – ಟಿಪ್ಪಣಿಗಳಿಗೆ ಸವಾಲು ಒಡ್ಡಲು ನಾನು ಇಲ್ಲಿ ಇಚ್ಛಿಸುವುದಿಲ್ಲ. ಇಂತಹ ಸಮಾರಂಭಗಳಿಂದ ಸಕಾರಾತ್ಮಕ ಚಿಂತನೆಗಳು ಹೊರಹೊಮ್ಮಲಿ ಎನ್ನುವುದು ನನ್ನ ಆಶಯವಾಗಿದೆ.

‘ಆರ್ಥಿಕ ಪ್ರಗತಿಗೆ ಸಂಬಂಧಿಸಿದಂತೆ ಈ ಹಿಂದೆಯೂ ಸಾಕಷ್ಟು ಏರಿಳಿತಗಳು ಘಟಿಸಿವೆ. ಇಂತಹ ಬಿಕ್ಕಟ್ಟಿನ ಸಂದರ್ಭಗಳಿಂದ ಹೊರ ಬರುವ ಸಾಮರ್ಥ್ಯ ದೇಶಕ್ಕೆ ಇದೆ. ಉದ್ಯಮ ಸ್ನೇಹಿ ಉಪಕ್ರಮಗಳ ವಿಷಯದಲ್ಲಿ ಭಾರತದ ಶ್ರೇಯಾಂಕವು ಈಗ 142 ಸ್ಥಾನದಿಂದ 63ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ’ ಎಂದರು. ಆರ್ಥಿಕತೆಯು ಗರಿಷ್ಠ ವೃದ್ಧಿ ದರದ ಹಾದಿಗೆ ಮರಳುವ ಬಗ್ಗೆ ದೃಢ ವಿಶ್ವಾಸ ವ್ಯಕ್ತಪಡಿಸಿದರು.

ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ವೃದ್ಧಿ ದರವು ಶೇ 3.5ಕ್ಕೆ ಕುಸಿದಿತ್ತು. ಚಿಲ್ಲರೆ ಮತ್ತು ಸಗಟು ಹಣದುಬ್ಬರಗಳು ಕ್ರಮವಾಗಿ ಶೇ 9.4 ಮತ್ತು ಶೇ 7.3ಕ್ಕೆ ತಲುಪಿದ್ದವು. ವಿತ್ತೀಯ ಕೊರತೆ ಜಿಡಿಪಿಯ ಶೇ 5.6ಕ್ಕೆ ಏರಿಕೆಯಾಗಿತ್ತು ಎಂದು ನೆನಪಿಸಿದರು.

ಕಂಪನಿ ಕಾಯ್ದೆ ಪ್ರಸ್ತಾವಗಳ ಅಪರಾಧಮುಕ್ತ: ಭರವಸೆ

‘ಕಂಪನಿ ಕಾಯ್ದೆಯ ಕೆಲವು ಪ್ರಸ್ತಾವಗಳನ್ನು ಉಲ್ಲಂಘಿಸಿದ ಪ್ರಕರಣಗಳನ್ನು ಅಪರಾಧಮುಕ್ತಗೊಳಿಸಲು ಕೇಂದ್ರ ಸರ್ಕಾರ ಕಾರ್ಯೋನ್ಮುಖವಾಗಿದೆ’ ಎಂದೂ ಪ್ರಧಾನಿ ಹೇಳಿದರು.

ತಮ್ಮ ನೇತೃತ್ವದಲ್ಲಿನ ಕೇಂದ್ರ ಸರ್ಕಾರವು ಉದ್ಯಮಿಗಳ ಪರವಾಗಿ ಗಟ್ಟಿಯಾಗಿ ನಿಲ್ಲಲಿದೆ ಎನ್ನುವುದನ್ನು ದೃಢಪಡಿಸಲು ಮೋದಿ ಅವರು ಈ ಹೇಳಿಕೆ ನೀಡಿದ್ದಾರೆ. ‘ಹಲವಾರು ಪ್ರಸ್ತಾವಗಳನ್ನು ಈಗಾಗಲೇ ಅಪರಾಧಮುಕ್ತಗೊಳಿಸಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಪ್ರಸ್ತಾವಗಳನ್ನು ಕೈಬಿಡಲಾಗುವುದು. ಪ್ರಾಮಾಣಿಕ ಸ್ವರೂಪದ ಕಾರ್ಪೊರೇಟ್‌ ನಿರ್ಧಾರಗಳ ವಿರುದ್ಧ  ಅಸಮಂಜಸ ಕ್ರಮಗಳನ್ನು ಕೈಗೊಳ್ಳುವುದಿಲ್ಲ’ ಎಂದೂ ಭರವಸೆ ನೀಡಿದ್ದಾರೆ.

ನಮ್ಮನ್ನು ಕಾರ್ಪೊರೇಟ್‌ ಏಜೆಂಟರು ಎಂದು ಜರಿಯುತ್ತಾರೆ. ಆದರೆ, ನಾವು 130 ಕೋಟಿ ಭಾರತೀಯರ ಏಜೆಂಟರಾಗಿದ್ದೇವೆ
-ಪ್ರಧಾನಿ ನರೇಂದ್ರ ಮೋದಿ

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು