ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಈಕ್ವೆಡಾರ್ ವಾಣಿಜ್ಯ ಕಚೇರಿ ಉದ್ಘಾಟನೆ

Last Updated 15 ಮಾರ್ಚ್ 2021, 5:07 IST
ಅಕ್ಷರ ಗಾತ್ರ

ಬೆಂಗಳೂರು: ಭಾರತ ಮತ್ತು ಈಕ್ವೆಡಾರ್ ನಡುವಣ ವ್ಯಾಪಾರ ಮತ್ತು ವಾಣಿಜ್ಯ ಬಾಂಧವ್ಯ ಗಟ್ಟಿಗೊಳಿಸಲು ಬೆಂಗಳೂರಿನಲ್ಲಿ ಈಕ್ವೆಡಾರ್‌ನ ವ್ಯಾಪಾರ ಕಚೇರಿ ಆರಂಭಿಸಲಾಗಿದೆ.

ಲ್ಯಾಟಿನ್ ಅಮೆರಿಕನ್ ಕೆರಿಬಿಯನ್ ಫೆಡರೇಷನ್ ಆಫ್ ಇಂಡಿಯಾದ (ಎಲ್‌ಎಸಿಎಫ್‌ಐ) ಸಹಯೋಗದಲ್ಲಿ ಭಾರತದ ಆರ್ಥಿಕ ವ್ಯಾಪಾರ ಸಂಘಟನೆಯು (ಐಇಟಿಒ) ಬೆಂಗಳೂರಿನಲ್ಲಿ ಈಕ್ವೆಡಾರ್‌ನ ವ್ಯಾಪಾರ ಕಚೇರಿ ಆರಂಭಿಸಿದೆ. ಭಾರತದಲ್ಲಿನ ಈಕ್ವೆಡಾರ್‌ನ ರಾಯಭಾರಿ ಹೆಕ್ಟರ್ ಗೊನ್ಸಾಲೊ ಕುಯೆವಾ ಜಕೋಮ್ ಅವರು ವಾಣಿಜ್ಯ ಕಚೇರಿ ಉದ್ಘಾಟಿಸಿದರು.

ಪ್ರವರ್ಧಮಾನಕ್ಕೆ ಬರುತ್ತಿರುವ ಲ್ಯಾಟಿನ್ ಅಮೆರಿಕ ಪ್ರದೇಶದಲ್ಲಿ ಬಹುರಾಷ್ಟ್ರೀಯ ಮತ್ತು ದ್ವಿಪಕ್ಷೀಯ ವಾಣಿಜ್ಯ ಬಾಂಧವ್ಯ ವೃದ್ಧಿಗೆ ವಿಪುಲ ಅವಕಾಶಗಳು ಇರುವುದರಿಂದ ಭಾರತದಲ್ಲಿ ವಾಣಿಜ್ಯ ಸಂಬಂಧ ಬಲಪಡಿಸಲು ಹೆಚ್ಚಿನ ಆಸಕ್ತಿ ಕಂಡು ಬರುತ್ತಿದೆ. ಲ್ಯಾಟಿನ್ ಅಮೆರಿಕದ ದೇಶಗಳ ಜತೆ ವ್ಯಾಪಾರ ವಹಿವಾಟು ನಡೆಸಲು ಬಯಸುವ ಉದ್ಯಮಿಗಳಿಗೆ ನೆರವಾಗಲು, ಲ್ಯಾಟಿನ್ ಅಮೆರಿಕನ್ ಕೆರಿಬಿಯನ್ ಫೆಡರೇಷನ್ ಆಫ್ ಇಂಡಿಯಾ (ಎಲ್‌ಎಸಿಎಫ್‌ಐ), ಭಾರತದಲ್ಲಿನ ಪ್ರಮುಖ ಮಹಾ ನಗರಗಳಲ್ಲಿ ವ್ಯಾಪಾರ ಕಚೇರಿಗಳನ್ನು ಆರಂಭಿಸಲು ಮುಂದಾಗಿದೆ. ಈಕ್ವೆಡಾರ್‌ನ ಈ ವ್ಯಾಪಾರ ಕಚೇರಿಯು ದಕ್ಷಿಣ ಭಾರತ ಮತ್ತು ಈಕ್ವೆಡಾರ್ ಮಧ್ಯೆ ವಾಣಿಜ್ಯ ಸಂಬಂಧ ಗಟ್ಟಿಗೊಳಿಸಲು ಉತ್ತೇಜನ ನೀಡಲಿದೆ. ಈ ಕಚೇರಿಯು ದೆಹಲಿಯಲ್ಲಿ ಇರುವ ಈಕ್ವೆಡಾರ್‌ನ ರಾಯಭಾರಿ ಕಚೇರಿ ಜತೆ ನೇರ ಸಂಪರ್ಕದಲ್ಲಿ ಕಾರ್ಯನಿರ್ವಹಿಸಲಿದೆ. ಬೆಂಗಳೂರು, ಚೆನ್ನೈ ಒಳಗೊಂಡಂತೆ ದಕ್ಷಿಣ ಭಾರತದ ಇತರ ನಗರಗಳ ಉದ್ಯಮಿಗಳಿಗೆ ವಾಣಿಜ್ಯ ಅವಕಾಶಗಳನ್ನು ಈ ಕಚೇರಿಯು ಒದಗಿಸಿ ಕೊಡಲಿದೆ.

‘ಈಕ್ವೆಡಾರ್ ಜತೆಗಿನ ವಾಣಿಜ್ಯ ಬಾಂಧವ್ಯದಲ್ಲಿ ವಿಪುಲ ಅವಕಾಶಗಳು ಇವೆ. ಲ್ಯಾಟಿನ್‌ ಅಮೆರಿಕ ದೇಶಗಳ (ಎಲ್‌ಎಸಿ) ಜತೆಗಿನ ನಿಯಮಿತ ಮತ್ತು ಸುಸ್ಥಿರ ಸ್ವರೂಪದ ವ್ಯಾಪಾರ ಸಂಬಂಧವನ್ನು ಬಲಪಡಿಸಲು ನಿರಂತರವಾಗಿ ಪ್ರಯತಿಸಲಾಗುತ್ತಿದೆ‘ ಎಂದು ಭಾರತದ ಆರ್ಥಿಕ ವ್ಯಾಪಾರ ಸಂಘಟನೆಯ (ಐಇಟಿಒ) ಅಧ್ಯಕ್ಷ ಡಾ. ಆಸೀಫ್ ಇಕ್ಬಾಲ್ ಅವರು ಹೇಳಿದ್ದಾರೆ.

ಈಕ್ವೆಡಾರ್‌ನ ವಾಣಿಜ್ಯ ಕಮಿಷನರ್ ಆಗಿ ನೇಮಕಗೊಂಡಿರುವ ಅನುರಾಧಾ ಪ್ರದೀಪ್ ಅವರು ಮಾತನಾಡಿ, ‘ದ್ವಿಪಕ್ಷೀಯ ಬಾಂಧವ್ಯ ಗಟ್ಟಿಗೊಳಿಸುವುದು, ದಕ್ಷಿಣ ಭಾರತದ ಕಂಪನಿಗಳು ಹಾಗೂ ವಿಶಾಲ ಮಾರುಕಟ್ಟೆ ಹೊಂದಿರುವ ಈಕ್ವೆಡಾರ್ ನಡುವಣ ದ್ವಿಪಕ್ಷೀಯ ಬಾಂಧವ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದು ಮತ್ತು ವಾಣಿಜ್ಯ ಸಂಬಂಧವನ್ನು ಇನ್ನಷ್ಟು ವಿಸ್ತರಿಸುವುದು ನನ್ನ ಗುರಿಯಾಗಿದೆ‘ ಎಂದರು.

ಲ್ಯಾಟಿನ್ ಅಮೆರಿಕನ್ ಕೆರಿಬಿಯನ್ ಫೆಡರೇಷನ್ ಆಫ್ ಇಂಡಿಯಾದ ದಕ್ಷಿಣ ಭಾರತದ ಉದ್ಯಮಿಗಳನ್ನು ಒಳಗೊಂಡ 35 ಸದಸ್ಯರ ನಿಯೋಗವು ಮೇನಲ್ಲಿ ಈಕ್ವೆಡಾರ್‌ಗೆ ಭೇಟಿ ನೀಡಲಿದೆ. ಈ ಪ್ರದೇಶದಲ್ಲಿನ ಆರೋಗ್ಯ, ಕೌಶಲ ಅಭಿವೃದ್ಧಿ, ಕೃಷಿ ಕ್ಷೇತ್ರಗಳಲ್ಲಿನ ಹಲವಾರು ಅವಕಾಶಗಳನ್ನು ಬಳಸಿಕೊಳ್ಳಲು ಅಲ್ಲಿನ ಹಲವಾರು ಕಂಪನಿಗಳು ಮತ್ತು ಸಂಘಟನೆಗಳ ಜತೆ ಭಾರತದ ನಿಯೋಗವು ಒಪ್ಪಂದಕ್ಕೆ ಸಹಿ ಹಾಕಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT