ಭಾನುವಾರ, ಜೂನ್ 26, 2022
29 °C

ಈಕ್ವಿಟಿ ಮ್ಯೂಚುವಲ್‌ ಫಂಡ್‌: ಮೇನಲ್ಲಿ ₹ 10 ಸಾವಿರ ಕೋಟಿ ಹೂಡಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ಮೇ ತಿಂಗಳಿನಲ್ಲಿ ₹ 10 ಸಾವಿರ ಕೋಟಿ ಬಂಡವಾಳ ಹೂಡಿಕೆ ಆಗಿದೆ. 14 ತಿಂಗಳ ಅವಧಿಯಲ್ಲಿನ ಗರಿಷ್ಠ ಮೊತ್ತದ ಹೂಡಿಕೆ ಇದಾಗಿದೆ.

ಈ ಹಿಂದೆ 2020ರ ಮಾರ್ಚ್‌ನಲ್ಲಿ ₹ 11,723 ಕೋಟಿ ಹೂಡಿಕೆ ಆಗಿತ್ತು. ಕೋವಿಡ್‌ ಪ್ರಕರಣಗಳು ಇಳಿಕೆ ಆಗುತ್ತಿರುವುದು ಹಾಗೂ ತ್ರೈಮಾಸಿಕದಲ್ಲಿ ಕಂಪನಿಗಳು ಉತ್ತಮ ಸಾಧನೆ ತೋರಿರುವುದರಿಂದಾಗಿ ಷೇರುಪೇಟೆಯಲ್ಲಿ ಉತ್ತಮ ವಹಿವಾಟು ನಡೆಯುತ್ತಿದೆ. ಇದು ಹೂಡಿಕೆಯನ್ನು ಹೆಚ್ಚಿಸಿದೆ ಎಂದು ತಜ್ಞರು ಹೇಳಿದ್ದಾರೆ.

ಮಾರ್ಚ್‌ನಲ್ಲಿ ₹ 9,115 ಕೋಟಿ ಮತ್ತು ಏಪ್ರಿಲ್‌ನಲ್ಲಿ ₹ 3,437 ಕೋಟಿ ಮೊತ್ತವು ಈಕ್ವಿಟಿ ಫಂಡ್‌ಗಳಲ್ಲಿ ಹೂಡಿಕೆ ಆಗಿತ್ತು. ಇದಕ್ಕೆ ಹೋಲಿಸಿದರೆ ಮೇನಲ್ಲಿ ಆಗಿರುವ ಹೂಡಿಕೆಯು ಗರಿಷ್ಠ ಮಟ್ಟದಲ್ಲಿದೆ. ಭಾರತೀಯ ಮ್ಯೂಚುವಲ್‌ ಫಂಡ್‌ ಸಂಸ್ಥೆಗಳ ಒಕ್ಕೂಟ ಈ ಮಾಹಿತಿ ನೀಡಿದೆ.

ಈಕ್ವಿಟಿ ಮ್ಯೂಚುವಲ್ ಫಂಡ್‌ಗಳು 2020ರ ಜುಲೈನಿಂದ 2021ರ ಫೆಬ್ರುವರಿ ಅವಧಿಯವರೆಗೆ ಬಂಡವಾಳ ಹಿಂತೆಗೆತ ದಾಖಲಿಸಿದ್ದವು. ಡೆಟ್‌ (ಸಾಲಪತ್ರ ಆಧಾರಿತ) ಮ್ಯೂಚುವಲ್ ಫಂಡ್‌ಗಳಿಂದ ಮೇನಲ್ಲಿ ₹ 44,512 ಕೋಟಿ ಬಂಡವಾಳ ಹಿಂತೆಗೆತ ಆಗಿದೆ. ಏಪ್ರಿಲ್‌ನಲ್ಲಿ ₹ 1 ಲಕ್ಷ ಕೋಟಿ ಹೂಡಿಕೆ ಆಗಿತ್ತು.

ಒಟ್ಟಾರೆಯಾಗಿ ಮ್ಯೂಚುವಲ್ ಫಂಡ್‌ ಉದ್ಯಮದಿಂದ ಮೇ ತಿಂಗಳಿನಲ್ಲಿ ₹ 38,602 ಕೋಟಿ ಬಂಡವಾಳ ಹಿಂತೆಗೆತ ಆಗಿದೆ. ಏಪ್ರಿಲ್‌ನಲ್ಲಿ ₹ 92,906 ಕೋಟಿ ಹೂಡಿಕೆ ಆಗಿತ್ತು. ಚಿನ್ನದ ವಿನಿಮಯ ವಹಿವಾಟು ನಿಧಿಗಳಲ್ಲಿ (ಇಟಿಎಫ್) ₹ 288 ಕೋಟಿ ಹೂಡಿಕೆ ಆಗಿದೆ.

ಷೇರುಪೇಟೆ ಸೂಚ್ಯಂಕಗಳು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದ್ದು, ಹೂಡಿಕೆದಾರರು ಮ್ಯೂಚುವಲ್‌ ಫಂಡ್‌ಗಳಲ್ಲಿ ಹಣ ತೊಡಗಿಸುವುದನ್ನು ಮುಂದುವರಿಸಿದ್ದಾರೆ. ಮುಂಬರುವ ತಿಂಗಳುಗಳಲ್ಲಿಯೂ ಇದೇ ಪ್ರವೃತ್ತಿ ಮುಂದುವರಿಯುವ ನಿರೀಕ್ಷೆ ಇದೆ ಎಂದು ಫೈಯರ್ಸ್‌ನ ಸಂಶೋಧನಾ ಮುಖ್ಯಸ್ಥ ಗೋಪಾಲ್‌ ಕಾವಲಿರೆಡ್ಡಿ ತಿಳಿಸಿದ್ದಾರೆ.

ಅಂಕಿ–ಅಂಶ

ಮ್ಯೂಚುವಲ್ ಫಂಡ್‌ ಉದ್ಯಮ ನಿರ್ವಹಣಾ ಸಂಪತ್ತು

₹ 33 ಲಕ್ಷ ಕೋಟಿ

ಮೇ ಅಂತ್ಯಕ್ಕೆ

₹ 32.38 ಲಕ್ಷ ಕೋಟಿ

ಏಪ್ರಿಲ್‌ ಅಂತ್ಯಕ್ಕೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು