ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ, ಅಮೆರಿಕ ವ್ಯಾಪಾರ ಒಪ್ಪಂದ?

ಡೊನಾಲ್ಡ್‌ ಟ್ರಂಪ್‌ ಭಾರತ ಭೇಟಿ ಸಂದರ್ಭ
Last Updated 16 ಫೆಬ್ರುವರಿ 2020, 21:47 IST
ಅಕ್ಷರ ಗಾತ್ರ

ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಭಾರತಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಎರಡೂ ದೇಶಗಳು ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ ಎಂದು ಭಾರತದ ಉದ್ದಿಮೆದಾರರು ಭಾರಿ ನಿರೀಕ್ಷೆ ಹೊಂದಿದ್ದಾರೆ.

ವಾಣಿಜ್ಯ ಬಾಂಧವ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕೆಲ ವಿವಾದಗಳನ್ನು ಬಗೆಹರಿಸಿಕೊಂಡು ಎರಡೂ ದೇಶಗಳ ವ್ಯಾಪಾರ ಉತ್ತೇಜಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪೂರ್ವಭಾವಿ ಮಾತುಕತೆಗಳು ನಡೆಯುತ್ತಿವೆ.

ಉಕ್ಕು ಮತ್ತು ಅಲ್ಯುಮಿನಿಯಂನ ಕೆಲ ಉತ್ಪನ್ನಗಳ ಮೇಲೆ ಅಮೆರಿಕ ವಿಧಿಸಿರುವ ದುಬಾರಿ ಸುಂಕದಿಂದ ವಿನಾಯ್ತಿ ನೀಡಬೇಕು. ಕೆಲ ಉತ್ಪನ್ನಗಳಿಗೆ ರಫ್ತು ಉತ್ತೇಜನಾ ಕ್ರಮಗಳನ್ನು ಪುನರಾರಂಭಿಸಬೇಕು. ತನ್ನ ಕೃಷಿ, ವಾಹನ, ಬಿಡಿಭಾಗ ಮತ್ತು ಎಂಜಿನಿಯರಿಂಗ್‌ ಸರಕುಗಳಿಗೆ ಮಾರುಕಟ್ಟೆ ವಿಸ್ತರಿಸಬೇಕು ಎನ್ನುವುದು ಭಾರತದ ಬೇಡಿಕೆಯಾಗಿದೆ.

ತನ್ನ ಕೃಷಿ, ಹೈನುಗಾರಿಕೆ ಉತ್ಪನ್ನ, ವೈದ್ಯಕೀಯ ಸಾಧನಗಳಿಗೆ ಭಾರತದಲ್ಲಿ ಮಾರುಕಟ್ಟೆ ವಿಸ್ತರಿಸಬೇಕು. ಮಾಹಿತಿ ಹಾಗೂ ತಂತ್ರಜ್ಞಾನ ಉತ್ಪನ್ನಗಳಿಗೆ ಆಮದು ಸುಂಕ ಕಡಿತಗೊಳಿಸಬೇಕು ಎಂಬುದು ಅಮೆರಿಕದ ನಿಲುವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಟ್ರಂಪ್‌ ಅವರು ಇದೇ 24 ಮತ್ತು 25ರಂದು ಭಾರತಕ್ಕೆ ಬರಲಿದ್ದಾರೆ.

ಸಿಇಒಗಳ ಜತೆ ಸಭೆ: ವಾಣಿಜ್ಯ ಬಾಂಧವ್ಯಕ್ಕೆ ಉತ್ತೇಜನ ನೀಡುವ ಉದ್ದೇಶಕ್ಕೆ ಟ್ರಂಪ್‌ ಅವರು ಇದೇ 25ರಂದು ದೇಶದ ಪ್ರಮುಖ ಕೈಗಾರಿಕೋದ್ಯಮಿಗಳನ್ನು ಇಲ್ಲಿ ಭೇಟಿಯಾಗಲಿದ್ದಾರೆ. ಪ್ರಮುಖ ಸಿಇಒಗಳ ಈ ಸಭೆಯಲ್ಲಿ ಅಮೆರಿಕದ ಕಾರ್ಪೊರೇಟ್‌ ಪ್ರಮುಖರೂ ಭಾಗವಹಿಸಲಿದ್ದಾರೆ.

ಮಾರುಕಟ್ಟೆ ಮುಕ್ತಗೊಳಿಸುವ ಕೊಡುಗೆ?
ಅಮೆರಿಕದ ಜತೆಗಿನ ವ್ಯಾಪಾರ ಒಪ್ಪಂದಕ್ಕೆ ಪೂರಕವಾಗಿ ಭಾರತ ತನ್ನ ಕುಕ್ಕುಟೋದ್ಯಮ ಮತ್ತು ಹೈನೋದ್ಯಮಗಳನ್ನು ಅಮೆರಿಕದ ಕಂಪನಿಗಳಿಗೆ ಭಾಗಶಃ ಮುಕ್ತಗೊಳಿಸಲು ಉದ್ದೇಶಿಸಿದೆ.

ಹಾಲು ಉತ್ಪಾದನೆಯಲ್ಲಿ ವಿಶ್ವದ ಅತಿದೊಡ್ಡ ದೇಶವಾಗಿರುವ ಭಾರತ, ಹೈನೋದ್ಯಮದಲ್ಲಿ ತೊಡಗಿಕೊಂಡಿರುವ 8 ಕೋಟಿ ಕುಟುಂಬಗಳ ಜೀವನಾಧಾರ ರಕ್ಷಿಸಲು ಮೊದಲಿನಿಂದಲೂ ಹೈನುಗಾರಿಕೆ ಉತ್ಪನ್ನಗಳ ಆಮದು ನಿರ್ಬಂಧಿಸುತ್ತ ಬಂದಿದೆ.

ಅಮೆರಿಕದಿಂದ ಕೋಳಿ ಮಾಂಸ ಆಮದು ಮಾಡಿಕೊಳ್ಳಲೂ ಅವಕಾಶ ಮಾಡಿಕೊಡಲು ಕೇಂದ್ರ ಸರ್ಕಾರ ಮುಂದಾಗಿದೆ. ಹ್ಯಾರ್ಲೆ ಡೇವಿಡ್ಸನ್‌ ಮೋಟರ್‌ಸೈಕಲ್‌ ಆಮದು ಸುಂಕವನ್ನು ಶೇ 50ರಷ್ಟು ಕಡಿಮೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

*
ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆ ಹೆಚ್ಚಿದ್ದು, ಇದು ಸಮಗ್ರ ಆರ್ಥಿಕ ಪಾಲುದಾರಿಕೆಗೆ ಅಡಿಪಾಯ ಹಾಕಲಿದೆ.
-ಚಂದ್ರಜಿತ್‌ ಬ್ಯಾನರ್ಜಿ, ಭಾರತೀಯ ಕೈಗಾರಿಕಾ ಒಕ್ಕೂಟದ ಮಹಾ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT