ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಡಿಜಿಟಲ್‌ ಪಾವತಿ ವಿಫಲವಾದರೆ...

Last Updated 4 ಜನವರಿ 2021, 21:01 IST
ಅಕ್ಷರ ಗಾತ್ರ

ಡಿಜಿಟಲ್ ವ್ಯವಸ್ಥೆಯನ್ನು ಬಳಸಿ ಹಣ ಪಾವತಿಸುವುದು ತೀರಾ ಸಲೀಸು. ಆದರೆ, ಈ ಬಗೆಯ ಪಾವತಿ ಕೆಲವೊಮ್ಮೆ ಅಪೂರ್ಣ ಆಗುವುದು ಬಹುತೇಕರ ಅನುಭವಕ್ಕೆ ಬಂದಿರುತ್ತದೆ. ಪಾವತಿ ಅಪೂರ್ಣವಾದಾಗ, ಹಣ ಕಳೆದುಕೊಂಡವರು ಮಾಡಬೇಕಿರುವುದು ಏನು? ಅಪೂರ್ಣ ಪಾವತಿಗಳ ವಿಚಾರವಾಗಿ ಆರ್‌ಬಿಐ ನಿಯಮ ಏನು ಹೇಳುತ್ತದೆ? ಇಲ್ಲಿದೆ ಒಂದು ನೋಟ...

ಇಷ್ಟದ ಹೋಟೆಲ್‌ನಲ್ಲಿ ಖಡಕ್ ಚಹಾ ಕುಡಿದ ನಂತರ ಅಥವಾ ಇಷ್ಟದ ಶಾಪಿಂಗ್‌ ಮಳಿಗೆಯಲ್ಲಿ ಮನೆಗಾಗಿ ಒಂದಿಷ್ಟು ದಿನಸಿ ಖರೀದಿಸಿದ ನಂತರ ಮೊಬೈಲ್‌ ಆ್ಯಪ್‌ ಬಳಸಿ ಯುಪಿಐ ಮೂಲಕ ಹಣ ಪಾವತಿ ಮಾಡುವುದು ಈಗ ತೀರಾ ಸಹಜ. ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ ಬಳಸಿ ಹಣ ಪಾವತಿಸುವ ಪ್ರವೃತ್ತಿಯಂತೂ ಇದ್ದೇ ಇದೆ. ಯುಪಿಐ ಮೂಲಕ ಪಾವತಿ ಅಥವಾ ಕಾರ್ಡ್‌ ಬಳಸಿ ಪಾವತಿ ಮಾಡುವಾಗ, ಖರೀದಿದಾರನ ಖಾತೆಯಿಂದ ಹಣ ಕಡಿತವಾದರೂ, ವರ್ತಕನ ಖಾತೆಗೆ ಆ ಹಣ ತಲುಪದೆ ಗ್ರಾಹಕ ಕಸಿವಿಸಿಗೆ ಒಳಗಾಗುವುದು ಅಲ್ಲಿ–ಇಲ್ಲಿ ಇದ್ದಿದ್ದೇ.

ಖಾತೆಯಿಂದ ಹಣ ಕಡಿತವಾದ ನಂತರವೂ, ಅದು ಸಲ್ಲಬೇಕಾದವರಿಗೆ ತಕ್ಷಣಕ್ಕೆ ಸಲ್ಲದೆ ಹಣ ಕಳಿಸಿದವರೂ ಹಣ ಪಡೆಯಬೇಕಾದವರೂ ಕಿರಿಕಿರಿ ಅನುಭವಿಸುವುದು ಹೊಸದಲ್ಲ. ನೂರಾರು ಗ್ರಾಹಕರಿಗೆ ಈ ರೀತಿ ಆಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗ್ರಾಹಕರ ಹಿತರಕ್ಷಣಾ ಪ್ರಾಧಿಕಾರವು (ಸಿಸಿಪಿಎ) ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ (ಆರ್‌ಬಿಐ) ಈಗಾಗಲೇ ಪತ್ರ ಬರೆದಿದೆ. ವಹಿವಾಟು ವಿಫಲಗೊಂಡಾಗ ಕಡಿತವಾದ ಹಣವು ಗ್ರಾಹಕರ ಖಾತೆಗೆ ತಕ್ಷಣಕ್ಕೆ ಬರುವಂತೆ ಆಗಬೇಕು ಎಂದು ಶಾಸನಬದ್ಧ ಸಂಸ್ಥೆಯಾದ ಸಿಸಿಪಿಎ ತನ್ನ ಪತ್ರದಲ್ಲಿ ಒತ್ತಾಯಿಸಿದೆ.

ಖಾತೆಯಿಂದ ಕಡಿತವಾದ ಹಣ, ತಲುಪಬೇಕಾದ ಖಾತೆಗೆ ಸಕಾಲದಲ್ಲಿ ಹೋಗದೆ, ಮೂಲ ಖಾತೆಗೆ ತಕ್ಷಣಕ್ಕೆ ವಾಪಸ್ ಕೂಡ ಆಗದೆ ಸಮಸ್ಯೆ ತಂದೊಡ್ಡುವುದನ್ನು ಗಮನಿಸಿದ್ದ ಆರ್‌ಬಿಐ 2019ರ ಸೆಪ್ಟೆಂಬರ್‌ನಲ್ಲೇ ಸುತ್ತೋಲೆಯೊಂದನ್ನು ಹೊರಡಿಸಿತ್ತು. ಆದರೆ, ಸಮಸ್ಯೆ ಇಂದಿಗೂ ಪರಿಹಾರ ಆಗಿಲ್ಲ ಎಂಬುದಕ್ಕೆ ಸಿಸಿಪಿಎ ಬರೆದ ಪತ್ರವೇ ಸಾಕ್ಷಿ.

‘ನಾನು ಯುಪಿಐ ವ್ಯವಸ್ಥೆ ಬಳಸಿ, ಮೊಬೈಲ್‌ ಆ್ಯಪ್‌ ಮೂಲಕ ಒಬ್ಬರಿಗೆ ₹ 10 ಸಾವಿರ ಪಾವತಿಗೆ ಮುಂದಾಗಿದ್ದೆ. ನನ್ನ ಖಾತೆಯಿಂದ ಹಣ ಕಡಿತವಾಯಿತು. ಆದರೆ ಅದು ತಲುಪಬೇಕಾದವರಿಗೆ ಸಿಗಲೇ ಇಲ್ಲ. ಈ ಬಗ್ಗೆ ಬ್ಯಾಂಕ್‌ನವರಿಗೆ ದೂರು ನೀಡಿದಾಗ, ತಮಗೂ ಅದಕ್ಕೂ ಸಂಬಂಧವಿಲ್ಲವೆಂದೂ, ಯುಪಿಐ ಸೇವೆ ನೀಡಿದ ಆ್ಯಪ್‌ ಕಂಪನಿಯನ್ನು ಸಂಪರ್ಕಿಸುವಂತೆಯೂ ಹೇಳಿದರು. ಯುಪಿಐ ಸೇವೆ ನೀಡಿದ ಆ್ಯಪ್‌ ಕಂಪನಿಯನ್ನು ಸಂಪರ್ಕಿಸಿದರೆ, ಬ್ಯಾಂಕ್‌ ಜೊತೆ ಮಾತನಾಡಬೇಕು ಎಂಬ ಸಲಹೆ ದೊರೆಯಿತು’ ಎಂದು ಸಾಫ್ಟ್‌ವೇರ್‌ ತಂತ್ರಜ್ಞ ಅರವಿಂದ ಹೆಗಡೆ ಅವರು ತಮ್ಮ ಕಹಿ ಅನುಭವವನ್ನು ಹೇಳಿಕೊಂಡರು.

ಕೊನೆಗೆ, ಹೆಗಡೆ ಅವರು ತಾವು ಎದುರಿಸಿದ ಪ್ರಸಂಗವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರ ಮುಂದಿಟ್ಟಾಗ, ಹಣ ಮರಳಿಸುವ ಕೆಲಸ ಯುಪಿಐ ಸೇವಾದಾತ ಕಂಪನಿಯಿಂದ ಆಯಿತು. ‘ಹಣ ವಾಪಸ್ ಸಿಗಲು ನಾನು ಇಪ್ಪತ್ತು ದಿನ ಕಾಯಬೇಕಾಯಿತು’ ಎಂದು ಅವರು ತಿಳಿಸಿದರು. ಹಣ ಮರಳಿಸಲು ಇಷ್ಟು ದೀರ್ಘ ಸಮಯ ತೆಗೆದುಕೊಂಡಿದ್ದಕ್ಕೆ ಲೋಪ ಎಸಗಿದವರ ಕಡೆಯಿಂದ ತಮಗೆ ದಿನಕ್ಕೆ ₹ 100ರಂತೆ ಪರಿಹಾರ ಸಿಗಬೇಕು ಎಂಬ ಮಾಹಿತಿ ಅವರಿಗೆ ಇರಲಿಲ್ಲ.

ರಂಜನಿ (ಹೆಸರು ಬದಲಾಯಿಸಲಾಗಿದೆ) ಅವರು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾರೆ. ಅವರು ಇ–ಅಂಗಡಿಯ ಮೂಲಕ ಒಂದಿಷ್ಟು ಬಟ್ಟೆಗಳನ್ನು ಖರೀದಿಸಿ, ಅದರ ಬಿಲ್‌ಅನ್ನು ಯುಪಿಐ ಆಧಾರಿತ ಆ್ಯಪ್‌ ಮೂಲಕ ಪಾವತಿಸಲು ಮುಂದಾದರು. ಅವರ ಖಾತೆಯಿಂದ ಕಡಿತ ಆಯಿತು. ಆದರೆ, ಇ–ಅಂಗಡಿಯ ಖಾತೆಗೆ ಅದು ಜಮಾ ಆಗಲಿಲ್ಲ. ಹಾಗಾಗಿ, ಬಯಸಿದ್ದ ಬಟ್ಟೆಗಳು ಸಿಗಲಿಲ್ಲ. ಹಣವು ಖಾತೆಗೆ ಮರಳಲೂ ಇಲ್ಲ. ರಂಜನಿ ಅವರು ಈಗ ಈ ವಿಚಾರವನ್ನು ಟ್ವಿಟರ್‌ ಮೂಲಕ ಬಹಿರಂಗಪಡಿಸಿ, ಸಾರ್ವಜನಿಕವಾಗಿ ನ್ಯಾಯ ಕೇಳುವ ಆಲೋಚನೆಯಲ್ಲಿ ಇದ್ದಾರೆ.

‘ಬ್ಯಾಂಕ್‌ ವಹಿವಾಟುಗಳು ವಿಫಲ ಆಗಿ, ಕಡಿತವಾದ ಹಣ ವಾಪಸ್ ಬರದಿದ್ದಾಗ ಅಂತಹ ಪ್ರಕರಣಗಳನ್ನು ಕಾನೂನಿನ ಮೂಲಕ ನಿಭಾಯಿಸಬೇಕು ಎಂಬ ಅರಿವು ನಮ್ಮಲ್ಲಿ ಕಡಿಮೆ ಇದೆ. ಗ್ರಾಹಕರಿಗೆ ಪರಿಹಾರ ಕೊಡಿಸುವ ಕಾನೂನುಗಳು ಇದ್ದರೂ, ಜನ ಅವುಗಳನ್ನು ಬಳಸಿಕೊಳ್ಳುತ್ತಿಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಬೆಂಗಳೂರಿನ ವಕೀಲ ವೆಂಕಟೇಶ ದೊಡ್ಡೇರಿ.

‘ಬ್ಯಾಂಕ್‌ ವಹಿವಾಟುಗಳಲ್ಲಿ ಈ ರೀತಿಯ ತೊಂದರೆ ಆದಾಗ ಗ್ರಾಹಕರ ಹಿತರಕ್ಷಣೆಗಾಗಿ ಇರುವ ಕಾನೂನುಗಳ ಮೂಲಕ ನ್ಯಾಯ ಕೇಳಬಹುದು. ಆದರೆ, ಎಲ್ಲರೂ ಗ್ರಾಹಕರ ನ್ಯಾಯಾಲಯದ ಮೆಟ್ಟಿಲೇರಲು ಮನಸ್ಸು ಮಾಡುತ್ತಿಲ್ಲ. ಹಾಗಾಗಿ, ಗ್ರಾಹಕರ ನ್ಯಾಯಾಲಯಗಳಲ್ಲಿ ಕೂಡ ಇನ್ನಷ್ಟು ಗ್ರಾಹಕಸ್ನೇಹಿ ವಾತಾವರಣ ನಿರ್ಮಾಣ ಆಗಬೇಕಿದೆ. ಅಲ್ಲಿ ಪ್ರಕರಣ ವಿಳಂಬ ಆಗದಂತೆ ನೋಡಿಕೊಳ್ಳಬೇಕು. ಗ್ರಾಹಕರ ನ್ಯಾಯಾಲಯಗಳನ್ನು ತಾಲ್ಲೂಕು ಮಟ್ಟಕ್ಕೆ ವಿಸ್ತರಿಸಬೇಕು, ಈಗ ಅವು ಜಿಲ್ಲಾ ಕೇಂದ್ರಗಳಲ್ಲಿ ಇವೆ. ತಾಲ್ಲೂಕು ಮಟ್ಟದಲ್ಲಿ ಅವು ಕಾರ್ಯಾರಂಭ ಮಾಡಿದರೆ, ಹೆಚ್ಚು ಜನರಿಗೆ ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಆಗುತ್ತದೆ’ ಎಂದು ವೆಂಕಟೇಶ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ಯಾಂಕಿಂಗ್‌ ವಲಯದ ಕುರಿತು ದಾಖಲಾಗಿರುವ ದೂರುಗಳ ಪೈಕಿ ಶೇಕಡ 20ರಷ್ಟು ದೂರುಗಳು ಹಣ ಖಾತೆಗೆ ಮರಳದಿರುವುದಕ್ಕೆ ಸಂಬಂಧಿಸಿವೆ ಎಂದು ಆರ್‌ಬಿಐಗೆ ಬರೆದಿರುವ ಪತ್ರದಲ್ಲಿ ಸಿಸಿಪಿಎ ಹೇಳಿದೆ.

ಆರ್‌ಬಿಐ ಹೇಳಿದ್ದೇನು?

ಡಿಜಿಟಲ್ ರೂಪದಲ್ಲಿ ನಡೆಯುವ ವಹಿವಾಟು ವಿಫಲವಾಗುವುದು ದೊಡ್ಡ ಸಂಖ್ಯೆಯ ದೂರುಗಳಿಗೆ ಕಾರಣ ಎಂಬುದನ್ನು ಆರ್‌ಬಿಐ ಗುರುತಿಸಿತ್ತು. ಇದರಿಂದ ಗ್ರಾಹಕರಿಗೆ ಆಗುವ ಸಮಸ್ಯೆಯನ್ನು ಪರಿಹರಿಸಲು ಒಂದು ವ್ಯವಸ್ಥೆ ಇರಬೇಕು. ವಹಿವಾಟು ವಿಫಲಗೊಂಡಾಗ, ಖಾತೆಯಿಂದ ಕಡಿತವಾದ ಹಣ ನಿಗದಿತ ಸಮಯಕ್ಕೆ ಮೊದಲು ಖಾತೆಗೆ ಮರಳುವಂತೆ ಆಗಬೇಕು. ಹಾಗೆ ಮರಳದೆ ಇದ್ದರೆ, ಗ್ರಾಹಕರಿಗೆ (ಅಂದರೆ, ಖಾತೆದಾರರಿಗೆ) ಪರಿಹಾರ ಕೂಡ ಸಿಗಬೇಕು ಎಂದು ಆರ್‌ಬಿಐ 2019ರ ಏಪ್ರಿಲ್‌ 4ರಂದು ಹೊರಡಿಸಿದ ಹಣಕಾಸು ನೀತಿಗೆ ಸಂಬಂಧಿಸಿದ ಹೇಳಿಕೆಯಲ್ಲಿ ಉಲ್ಲೇಖಿಸಿತ್ತು.

ಈ ಹೇಳಿಕೆಗೆ ಅನುಗುಣವಾಗಿ ಆರ್‌ಬಿಐ, 2019ರ ಸೆಪ್ಟೆಂಬರ್‌ನಲ್ಲಿ ಸುತ್ತೋಲೆಯೊಂದನ್ನು ಹೊರಡಿಸಿತ್ತು. ‘ವಹಿವಾಟು ವಿಫಲ ಆಗುವುದಕ್ಕೆ ಗ್ರಾಹಕನ ಲೋಪವೇ ಕಾರಣವಾಗಬೇಕು ಎಂದೇನೂ ಇಲ್ಲ...’ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ‘ಖಾತೆಯಿಂದ ಕಡಿತವಾದ ಹಣವನ್ನು ಗ್ರಾಹಕರ ಖಾತೆಗೆ ಮರಳಿಸುವ ವಿಚಾರದಲ್ಲಿ ತಾನು ನಿಗದಿ ಮಾಡಿದ ಕಾಲಮಿತಿ ಮೀರುವಂತಿಲ್ಲ’ ಎಂದು ಆರ್‌ಬಿಐ ಸೂಚಿಸಿತ್ತು. ಅಷ್ಟೇ ಅಲ್ಲ, ಗ್ರಾಹಕರಿಗೆ ಹಣಕಾಸಿನ ಪರಿಹಾರ ಕೊಡುವ ಸಂದರ್ಭ ಎದುರಾದಾಗ, ಪರಿಹಾರ ಮೊತ್ತವನ್ನು ಸ್ವಯಂಪ್ರೇರಣೆಯಿಂದ ನೀಡಬೇಕು; ಪರಿಹಾರವನ್ನು ಗ್ರಾಹಕರೇ ಕೇಳಿಕೊಂಡು ಬರಲಿ ಎಂದು ಬಯಸಬಾರದು ಎಂಬ ಸೂಚನೆ ಕೂಡ ಆರ್‌ಬಿಐ ಸುತ್ತೋಲೆಯಲ್ಲಿ ಇದೆ.

‘ವಹಿವಾಟು ವಿಫಲವಾಗುವುದು’ ಅಂದರೆ?

‘ವಿಫಲ ವಹಿವಾಟು’ ಅಂದರೆ ಏನು ಎಂಬುದನ್ನು ಈ ಸುತ್ತೋಲೆ ವ್ಯಾಖ್ಯಾನಿಸಿದೆ. ಸಂವಹನ ಕೊಂಡಿ ತುಂಡರಿಸಿ ವಹಿವಾಟು ಪೂರ್ಣಗೊಳ್ಳದೆ ಇರುವುದು, ಎಟಿಎಂನಲ್ಲಿ ಹಣ ಇಲ್ಲದಿದ್ದರೂ ಖಾತೆಯಲ್ಲಿ ಹಣ ಕಡಿತವಾಗುವುದು... ಇಂಥವು ವಿಫಲ ವಹಿವಾಟುಗಳಿಗೆ ಉದಾಹರಣೆಗಳು.

ವಿಫಲ ವಹಿವಾಟಿನಿಂದಾಗಿ ತೊಂದರೆಗೆ ಒಳಗಾದ ಗ್ರಾಹಕರು ಬ್ಯಾಂಕಿಂಗ್‌ ಒಂಬುಡ್ಸ್‌ಮನ್‌ಗೆ ದೂರು ಸಲ್ಲಿಸುವುದು ಸೂಕ್ತ ಎಂದು ಹೇಳುತ್ತಾರೆ ವಕೀಲ ಸುದರ್ಶನ್ ಸುರೇಶ್. ಅಲ್ಲಿ ಪರಿಹಾರ ಸಿಕ್ಕೇ ಸಿಗುತ್ತದೆ. ಒಂದು ವೇಳೆ ಅಲ್ಲಿ ಪರಿಹಾರ ಸಿಗದೇ ಇದ್ದರೆ, ವಕೀಲರ ಮೂಲಕ ಸಂಬಂಧಪಟ್ಟ ಬ್ಯಾಂಕ್‌ಗೆ ಅಥವಾ ಹಣಕಾಸು ಸಂಸ್ಥೆಗೆ ನೋಟಿಸ್ ನೀಡಬಹುದು. ಆಗಲೂ ನ್ಯಾಯ ಸಿಗದಿದ್ದರೆ, ಗ್ರಾಹಕರ ನ್ಯಾಯಾಲಯದ ಮೊರೆ ಹೋಗಬಹುದು ಎಂದು ಸುದರ್ಶನ್ ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT