ಶನಿವಾರ, ಜೂನ್ 25, 2022
25 °C

ಎಫ್‌ಡಿಐ: ಕರ್ನಾಟಕಕ್ಕೆ ಮೊದಲ ಸ್ಥಾನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: 2021–22ನೇ ಹಣಕಾಸು ವರ್ಷದಲ್ಲಿ ಅತಿ ಹೆಚ್ಚು ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಆಕರ್ಷಿಸಿರುವ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ.

ಭಾರತವು 2021–22ನೇ ಹಣಕಾಸು ವರ್ಷದಲ್ಲಿ ದಾಖಲೆಯ ₹ 6.48 ಲಕ್ಷ ಕೋಟಿ ಎಫ್‌ಡಿಐ ಆಕರ್ಷಿಸಿದೆ. ಇದರಲ್ಲಿ ಕರ್ನಾಟಕದ ಪಾಲು ಶೇಕಡ 38ರಷ್ಟು. ಮಹಾರಾಷ್ಟ್ರ (ಶೇ 26ರಷ್ಟು) ಮತ್ತು ದೆಹಲಿ (ಶೇ 14ರಷ್ಟು) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಲ್ಲಿವೆ.

ಎಫ್‌ಡಿಐ ನೀತಿಯಲ್ಲಿನ ಸುಧಾರಣೆಗಳು ಹಾಗೂ ಸುಲಲಿತ ವಹಿವಾಟಿಗೆ ತೆಗೆದುಕೊಂಡಿರುವ ಕ್ರಮಗಳಿಂದಾಗಿ ದಾಖಲೆಯ ಎಫ್‌ಡಿಐ ಹರಿದುಬಂದಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಶುಕ್ರವಾರ ತಿಳಿಸಿದೆ.

ಕೋವಿಡ್‌ ಸಾಂಕ್ರಾಮಿಕ ಮತ್ತು ಉಕ್ರೇನ್‌ ಬಿಕ್ಕಟ್ಟಿನ ಹೊರತಾಗಿಯೂ ಈ ಪ‍್ರಮಾಣದಲ್ಲಿ ಬಂಡವಾಳ ಒಳಹರಿವು ಕಂಡುಬಂದಿದೆ ಎಂದು ಹೇಳಿದೆ. 2020–21ರಲ್ಲಿ ₹ 6.36 ಲಕ್ಷ ಕೋಟಿ ಎಫ್‌ಡಿಐ ಹರಿದುಬಂದಿತ್ತು. 2019-20ರಲ್ಲಿ ₹ 5.77 ಲಕ್ಷ ಕೋಟಿ ಎಫ್‌ಡಿಐ ಹೂಡಿಕೆ ಆಗಿತ್ತು.

ತಯಾರಿಕಾ ವಲಯದಲ್ಲಿ ವಿದೇಶಿ ಹೂಡಿಕೆಗಳಿಗೆ ಆದ್ಯತೆಯ ದೇಶವಾಗಿ ಭಾರತವು ಅತ್ಯಂತ ವೇಗದಿಂದ ಬೆಳೆಯುತ್ತಿದೆ ಎಂದು ಸಚಿವಾಲಯ ಹೇಳಿದೆ. 2020–21ಕ್ಕೆ ಹೋಲಿಸಿದರೆ 2021–22ರಲ್ಲಿ ತಯಾರಿಕಾ ವಲಯದಲ್ಲಿ ಎಫ್‌ಡಿಐ ಈಕ್ವಿಟಿ ಒಳಹರಿವು ಶೇ 76ರಷ್ಟು ಹೆಚ್ಚಾಗಿದ್ದು, ₹ 1.65 ಲಕ್ಷ ಕೋಟಿಗೆ ತಲುಪಿದೆ. 2020–21ರಲ್ಲಿ ₹ 93,854 ಕೋಟಿ ಹೂಡಿಕೆ ಆಗಿತ್ತು.

ಕಂಪ್ಯೂಟರ್‌ ಸಾಫ್ಟ್‌ವೇರ್‌ ಮತ್ತು ಹಾರ್ಡ್‌ವೇರ್‌ ವಲಯ ಅತ್ಯಂತ ಹೆಚ್ಚು ಎಫ್‌ಡಿಐ ಆಕರ್ಷಿಸಿವೆ. ಸೇವಾ ವಲಯ ಮತ್ತು ವಾಹನೋದ್ಯಮವು ನಂತರದ ಸ್ಥಾನದಗಳಲ್ಲಿವೆ ಎಂದು ಸಚಿವಾಲಯ ತಿಳಿಸಿದೆ.

ಕಲ್ಲಿದ್ದಲು ಗಣಿಗಾರಿಕೆ, ಗುತ್ತಿಗೆ ಆಧಾರಿತ ತಯಾರಿಕೆ, ಡಿಜಿಟಲ್‌ ಮಾಧ್ಯಮ, ಸಿಂಗಲ್‌ ಬ್ರ್ಯಾಂಡ್‌ ರಿಟೇಲ್‌ ವಹಿವಾಟು, ನಾಗರಿಕ ವಿಮಾನಯಾನ, ರಕ್ಷಣೆ, ವಿಮೆ ಮತ್ತು ದೂರಸಂಪರ್ಕ ವಲಯಗಳಲ್ಲಿ ಎಫ್‌ಡಿಐ ಒಳಹರಿವಿಗೆ ಅನುಕೂಲ ಆಗುವ ರೀತಿಯಲ್ಲಿ ನಿಯಮಗಳಲ್ಲಿ ಬದಲಾವಣೆ ತರಲಾಗಿದೆ ಎಂದು ಅದು ಹೇಳಿದೆ.

ತಯಾರಿಕೆ, ಐ.ಟಿ. ಮತ್ತು ಔಷಧ ವಲಯಗಳಲ್ಲಿ ಎಫ್‌ಡಿಐ ಹರಿದುಬಂದಿದೆ. ಪ್ರಸಕ್ತ ವರ್ಷವೂ ಬಂಡವಾಳ ಒಳಹರಿವು ಪ್ರಮಾಣವು ಇದೇ ರೀತಿ ಮುಂದುವರಿಯುವ ನಿರೀಕ್ಷೆ ಇದೆ ಎಂದು ‘ಶಾರ್ದೂಲ್ ಅಮರ್‌ಚಂದ್‌ ಮಂಗಲ್‌ದಾಸ್‌ ಆ್ಯಂಡ್‌ ಕೋ’ನ ಪಾಲುದಾರ ಅಭಿಶೇಕ್‌ ಗುಹಾ ಹೇಳಿದ್ದಾರೆ.

ಎಫ್‌ಡಿಐ ಒಳಹರಿವು – ಯಾವ ದೇಶದಿಂದ? (%)

ಸಿಂಗಪುರ;27

ಅಮೆರಿಕ;18

ಮಾರಿಷಸ್‌;16

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು