ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಹಿನ್ನೆಲೆ: ಮಹಿಳಾ ಉದ್ಯಮಗಳಿಗೆ ಮುಚ್ಚುವ ಭೀತಿ

Last Updated 24 ಆಗಸ್ಟ್ 2020, 19:11 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮಹಿಳೆಯರ ಮಾಲೀಕತ್ವದಲ್ಲಿ ಇರುವ ಸರಿಸುಮಾರು ಶೇಕಡ 30ರಷ್ಟು ಉದ್ದಿಮೆಗಳು ಕೋವಿಡ್‌–19 ಸಾಂಕ್ರಾಮಿಕದ ಪರಿಣಾಮವಾಗಿ ಬಾಗಿಲು ಮುಚ್ಚುವ ಆತಂಕ ಎದುರಿಸುತ್ತಿವೆ ಎಂಬುದನ್ನು ಸಮೀಕ್ಷೆಯೊಂದು ಕಂಡುಕೊಂಡಿದೆ.

ಗ್ಲೋಬಲ್ ಅಲಯನ್ಸ್ ಫಾರ್ ಮಾಸ್‌‌ ಆಂತ್ರಪ್ರೀನರ್ಷಿಪ್‌‌ (ಗೇಮ್) ಮತ್ತು ‘ಸತ್ವ ಕನ್ಸಲ್ಟಿಂಗ್’ ಸಂಸ್ಥೆಗಳು ಜಂಟಿಯಾಗಿ ನಡೆಸಿದ ಸಮೀಕ್ಷೆಯು ಈ ಮಾತನ್ನು ಹೇಳಿದೆ. ಬೆಂಗಳೂರಿನಲ್ಲಿ ಬಟ್ಟೆ/ಜವಳಿ, ಆಹಾರ, ಆರೋಗ್ಯ ಮತ್ತು ಸೌಂದರ್ಯವರ್ಧಕ ಹಾಗೂ ಶಿಕ್ಷಣ ವಲಯಗಳಲ್ಲಿ ಒಟ್ಟು 2.58 ಲಕ್ಷ ಉದ್ಯಮಗಳು ಇವೆ. ಈ ಪೈಕಿ 36,900 ಉದ್ಯಮಗಳನ್ನು ಮಹಿಳೆಯರೇ ಮುನ್ನಡೆಸುತ್ತಿದ್ದಾರೆ. ಅಂದರೆ, ಈ ಕ್ಷೇತ್ರಗಳಲ್ಲಿ ಮಹಿಳೆಯರ ಮಾಲೀಕತ್ವದಲ್ಲಿ ಇರುವ ಉದ್ಯಮಗಳ ಪ್ರಮಾಣ ಶೇಕಡ 15ರಷ್ಟು.

ಬಾಗಿಲು ಮುಚ್ಚುವ ಅಪಾಯ ಎದುರಿಸುತ್ತಿರುವ ಉದ್ಯಮಗಳ ಪೈಕಿ ಹೆಚ್ಚಿನವು ಅತಿಸಣ್ಣ ಉದ್ಯಮ ವರ್ಗಕ್ಕೆ ಸೇರಿದವು. ಕೋವಿಡ್–19 ಸಾಂಕ್ರಾಮಿಕದ ಪರಿಣಾಮವು ಈಗ ಕೆಲವು ತಿಂಗಳುಗಳಿಂದ ಕಾಣಿಸಿಕೊಳ್ಳುತ್ತಿದೆಯಾದ ಕಾರಣ, ಈಗ ಅಂದಾಜಿಸಿರುವ ಪ್ರಮಾಣವನ್ನು ಮೂರು ಅಥವಾ ಆರು ತಿಂಗಳನಂತರ ಮತ್ತೆ ಲೆಕ್ಕಹಾಕಬೇಕು ಎಂದು ಸಮೀಕ್ಷೆಯ ವರದಿಯಲ್ಲಿ ಹೇಳಲಾಗಿದೆ.

ಮಹಿಳಾ ಉದ್ಯಮಿಗಳ ಪೈಕಿ, ಒಬ್ಬರೇ ಉದ್ಯಮ ನಡೆಸುವವರ ಸಂಖ್ಯೆ ಹೆಚ್ಚು. ಮಹಿಳೆಯರ ನೇತೃತ್ವದಲ್ಲಿ ನಡೆಯುವ ಶೇಕಡ 80ರಷ್ಟಕ್ಕಿಂತ ಹೆಚ್ಚಿನ ಉದ್ಯಮಗಳು ಈ ಬಗೆಯವು ಎಂಬ ಮಾತನ್ನು ವರದಿ ಉಲ್ಲೇಖಿಸಿದೆ.

ಮಹಿಳೆಯರ ಮಾಲೀಕತ್ವದಲ್ಲಿ ನಡೆಯುತ್ತಿರುವ ಉದ್ಯಮಗಳ ಬೆಳವಣಿಗೆಗೆಎದುರಾಗಿರುವ ಸವಾಲುಗಳ ಬಗ್ಗೆ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.ಕಾರ್ಮಿಕರನ್ನು ನೇಮಿಸಿಕೊಳ್ಳದೆಯೇ ಒಬ್ಬಳೇ ಮಹಿಳೆ ನಡೆಸುತ್ತಿರುವ ಉದ್ಯಮಗಳು ಹಾಗೂ ಕಾರ್ಮಿಕರನ್ನು ನೇಮಿಸಿಕೊಂಡು ನಡೆಸುತ್ತಿರುವ ಉದ್ಯಮಗಳ ಸವಾಲುಗಳನ್ನು ಪ್ರತ್ಯೇಕವಾಗಿ ಗುರುತಿಸಲಾಗಿದೆ.

‘ಒಬ್ಬಳೇ ಎಲ್ಲ ಕೆಲಸಗಳನ್ನೂ ಮಾಡಿಕೊಂಡು ಮುನ್ನಡೆಸುತ್ತಿರುವ ಉದ್ಯಮಗಳಿಗೆ ಕೋವಿಡ್‌–19 ನಂತರದ ಸಂದರ್ಭದಲ್ಲಿ ತಮ್ಮ ಕಾರ್ಯತಂತ್ರ ಏನಿರಬೇಕು ಎಂಬುದು ಗೊತ್ತಾಗುತ್ತಿಲ್ಲ.ದೀರ್ಘಕಾಲ ಚಾಲ್ತಿಯಲ್ಲಿ ಉಳಿದುಕೊಳ್ಳುವ ಉದ್ಯಮ ಕಾರ್ಯತಂತ್ರ ರೂಪಿಸಲು, ಬೇಡಿಕೆ ಮರುಸೃಷ್ಟಿಸಿಕೊಳ್ಳಲು ಅವುಗಳಿಗೆ ಸಹಾಯ ಬೇಕು. ಈ ಉದ್ಯಮಗಳಿಗೆ ಹಣಕಾಸಿನ ನೆರವು ಕೂಡ ಬೇಕು’ ಎಂದು ವರದಿ ಹೇಳಿದೆ.

ಗರಿಷ್ಠ ಐದು ಜನರವರೆಗೆ ಕಾರ್ಮಿಕರನ್ನು ನೇಮಿಸಿಕೊಂಡಿರುವ ಮಹಿಳಾ ಉದ್ಯಮಿಗಳು, ತಮ್ಮ ಚಟುವಟಿಕೆಗಳಲ್ಲಿ ಈಗಾಗಲೇ ಒಂದಿಷ್ಟು ಬದಲಾವಣೆಗಳನ್ನು ತಂದುಕೊಂಡಿದ್ದಾರೆ. ಆದರೆ, ಈ ಉದ್ಯಮಿಗಳಿಗೂ ಹಣಕಾಸಿನ ನೆರವು ಅಗತ್ಯ ಎಂದು ವರದಿ ಹೇಳಿದೆ.

ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಕರ್ನಾಟಕದ ಮಹಿಳಾ ಉದ್ಯಮಿಗಳ ಸಂಘಟನೆಯ (ಅವೇಕ್) ಅಧ್ಯಕ್ಷೆ ರಾಜೇಶ್ವರಿ ರಂಗನಾಥನ್, ‘ಎಂಎಸ್‌ಎಂಇ ವಲಯಕ್ಕೆ ಸರ್ಕಾರವೇ ಖಾತರಿಯಾಗಿ ನಿಂತು ಸಾಲ ಕೊಡಿಸುವ ಯೋಜನೆ ಪ್ರಕಟಿಸಿರುವುದು ದೊಡ್ಡ ಪ್ರೋತ್ಸಾಹ ನೀಡಿದಂತೆ ಆಗಿದೆ. ಆದರೆ, ಮಹಿಳೆಯರಲ್ಲಿ ಬಹಳಷ್ಟು ಜನಮನೆಯಿಂದಲೇ ತಮ್ಮ ಉದ್ಯಮ ನಡೆಸುತ್ತಿದ್ದಾರೆ. ಅವರು ತಮ್ಮ ಉದ್ಯಮವನ್ನು ನೋಂದಾಯಿಸಿಲ್ಲ. ಇದು ಸರ್ಕಾರದಿಂದ ಅಗತ್ಯ ಸಹಾಯ ಪಡೆದುಕೊಳ್ಳುವಲ್ಲಿ ಅಡತಡೆಯಾಗಿ ಪರಿಣಮಿಸಿದೆ’ ಎಂದರು.

ದೊಡ್ಡ ಮೊತ್ತದ ಸಾಲ ಪಡೆದಿರುವ ಉದ್ಯಮಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವು ಉದ್ಯಮಗಳಲ್ಲಿನ ಕುಶಲ ಕಾರ್ಮಿಕರು ಊರು ತೊರೆದಿದ್ದಾರೆ. ಅಷ್ಟು ಕೌಶಲ ಇರುವ ಕಾರ್ಮಿಕರು ಉದ್ಯಮಿಗಳಿಗೆ ತಕ್ಷಣಕ್ಕೆ ಸಿಗುವುದಿಲ್ಲ. ಇವು ಕೂಡ ಉದ್ಯಮಿಗಳು ಎದುರಿಸುತ್ತಿರುವ ಕೆಲವು ಸಮಸ್ಯೆಗಳು ಎಂದು ರಾಜೇಶ್ವರಿ ತಿಳಿಸಿದರು.

‘ಸವಾಲುಗಳು ಅವಕಾಶಗಳನ್ನುಸೃಷ್ಟಿಸುತ್ತವೆ ಎಂಬ ಮಾತಿದೆ. ಕೋವಿಡ್–19 ತಂದಿರುವ ಸವಾಲನ್ನುಸ್ವೀಕರಿಸಿ, ಉದ್ಯಮಗಳು ತಮ್ಮನ್ನು ಸಂಘಟಿತ ವಲಯಕ್ಕೆ ತಂದುಕೊಳ್ಳಬೇಕು. ಆ ಮೂಲಕ ಸೌಲಭ್ಯಗಳನ್ನು ಪಡೆದುಕೊಳ್ಳಲು ಶಕ್ತರಾಗಬೇಕು’ ಎಂದು ‘ಗೇಮ್‌‘ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎಂ. ಶ್ರೀನಿವಾಸ್ ರಾವ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT