ಶುಕ್ರವಾರ, ನವೆಂಬರ್ 27, 2020
18 °C

ರಿಲಯನ್ಸ್‌ನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಪಾಲು ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಿಲಯನ್ಸ್‌ ಇಂಡಸ್ಟ್ರೀಸ್‌ನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಹೊಂದಿರುವ ಪಾಲು ಸೆಪ್ಟೆಂಬರ್ ತ್ರೈಮಾಸಿಕದ ಅಂತ್ಯಕ್ಕೆ ಶೇಕಡ 27.2ಕ್ಕೆ ಹೆಚ್ಚಳ ಕಂಡಿದೆ.

ಕಂಪನಿಯು ಗುರುವಾರ ಷೇರುಪೇಟೆಗೆ ನೀಡಿರುವ ಮಾಹಿತಿಯ ಪ್ರಕಾರ, ಕಂಪನಿಯಲ್ಲಿ 165.8 ಕೋಟಿ (ಶೇ 25.2) ಷೇರುಗಳನ್ನು ‘ಎಫ್‌ಐಐ’ ಹೊಂದಿದ್ದಾರೆ. ಅಷ್ಟೇ ಅಲ್ಲದೆ, ಅರ್ಹ ಸಾಂಸ್ಥಿಕ ಹೂಡಿಕೆದಾರರು (ಕ್ಯೂಐಬಿ) ಸೆಪ್ಟೆಂಬರ್ ಅಂತ್ಯಕ್ಕೆ ಶೇ 2.05ರಷ್ಟು ಷೇರುಗಳನ್ನು ಹೊಂದಿದ್ದರು. ಹೀಗಾಗಿ, ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಒಟ್ಟಾರೆ ಪಾಲು ಶೇ 27.2ರಷ್ಟಾಗಿದೆ.

ಜೂನ್‌ 30ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಎಫ್‌ಐಐ ಪಾಲು ಶೇ 24.72 ಆಗಿತ್ತು. ರಿಲಯನ್ಸ್‌ನಲ್ಲಿ ಎಫ್‌ಐಐ ಷೇರುಪಾಲು ಹೆಚ್ಚಿನ ಮಟ್ಟವನ್ನು ತಲುಪಿದೆ ಎಂದು ಜೆಪಿ ಮಾರ್ಗನ್‌ ಸಂಸ್ಥೆಯು ಹೂಡಿಕೆದಾರರ ಟಿಪ್ಪಣಿಯಲ್ಲಿ ತಿಳಿಸಿದೆ.

‘ಆರ್‌ಐಎಲ್‌ನಲ್ಲಿ ಎಫ್‌ಐಐ ಪಾಲು ಹೆಚ್ಚಳ ಆಗಿದ್ದು, ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ 0.60ರಷ್ಟು ಹೆಚ್ಚಾಗಿದೆ. ಆದರೆ, ಅಶ್ಚರ್ಯದ ಸಂಗತಿಯೆಂದರೆ, ಮ್ಯೂಚುವಲ್‌ ಫಂಡ್‌ಗಳ ಪಾಲು ಶೇ 0.25ರಷ್ಟು ಇಳಿಕೆ ಆಗಿದೆ. ಸತತ ಎರಡನೇ ತ್ರೈಮಾಸಿಕದಲ್ಲಿ ಈ ರೀತಿಯ ಇಳಿಕೆ ಕಂಡುಬಂದಿದೆ’ ಎಂದು ಅದು ಹೇಳಿದೆ.

ದೇಶಿ ಮ್ಯೂಚುವಲ್ ಫಂಡ್‌ಗಳು ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ರಿಲಯನ್ಸ್‌ನಲ್ಲಿ ಶೇ 5.12ರಷ್ಟು ಷೇರುಪಾಲು ಹೊಂದಿವೆ. ಅದಕ್ಕೂ ಹಿಂದಿನ ತ್ರೈಮಾಸಿಕದಲ್ಲಿ ಶೇ 5.37ರಷ್ಟು ಹೊಂದಿದ್ದವು. ಪ್ರವರ್ತಕರ ಷೇರುಪಾಲು ಶೇ 50.37ರಿಂದ ಶೇ 50.49ಕ್ಕೆ ಏರಿಕೆಯಾಗಿದೆ.

2020ರ ಏಪ್ರಿಲ್‌ ನಂತರ ರಿಲಯನ್ಸ್‌ ಷೇರು ಬೆಲೆ ಎರಡು ಪಟ್ಟು ಹೆಚ್ಚಾಗಿದೆ. ರಿಲಯನ್ಸ್‌ ಜಿಯೊ ₹ 1.52 ಲಕ್ಷ ಕೋಟಿ ಬಂಡವಾಳ ಸಂಗ್ರಹಿಸಿದ್ದು, ₹ 53,124 ಕೋಟಿ ಮೊತ್ತದ  ಹಕ್ಕಿನ ಷೇರು ವಿತರಣೆ ಹಾಗೂ ರಿಲಯನ್ಸ್‌ ರಿಟೇಲ್‌ನಲ್ಲಿ ₹ 37,700 ಕೋಟಿ ಹೂಡಿಕೆಯಿಂದಾಗಿ ಕಂಪನಿಯ ಷೇರು ಬೆಲೆ ಹೆಚ್ಚಾಗಿದೆ.

ಒಟ್ಟಾರೆಯಾಗಿ ದಾಖಲೆಯ ₹ 2.5 ಲಕ್ಷ ಕೋಟಿ ಬಂಡವಾಳ ಸಂಗ್ರಹಿಸುವ ಮೂಲಕ ನಿವ್ವಳ ಸಾಲ ಮುಕ್ತ ಕಂಪನಿಯಾಗಲು ರಿಲಯನ್ಸ್‌ಗೆ ಸಾಧ್ಯವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು