ಭಾನುವಾರ, ಏಪ್ರಿಲ್ 18, 2021
32 °C

ಹಣಕಾಸು ಅಗತ್ಯಗಳ ಪಿರಮಿಡ್‌

ಮೋಹಿತ್‌ ಗರ್ಗ್ Updated:

ಅಕ್ಷರ ಗಾತ್ರ : | |

Prajavani

ಜೀವನದಲ್ಲಿ ಎದುರಾಗಬಹುದಾದ ಹಣಕಾಸು ಅಗತ್ಯಗಳು ಮತ್ತು ಆಕಸ್ಮಿಕಗಳನ್ನು ಎದುರಿಸಲು ಬೇಕಾದ ತಯಾರಿ ಮಾಡಿಕೊಳ್ಳಲು ಹಣಕಾಸು ಸಾಕ್ಷರರೂ ಅನೇಕ ಬಾರಿ ವಿಫಲರಾಗುತ್ತಾರೆ. ಪ್ರತಿಯೊಬ್ಬರೂ ಆರ್ಥಿಕವಾಗಿ ತಮ್ಮ ಭವಿಷ್ಯವನ್ನು ಹೇಗೆ ಭದ್ರಪಡಿಸಬಹುದು ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ.

ನನ್ನ ಸ್ನೇಹಿತ ಅನಿಲ್‌, ಸಣ್ಣ ಪಟ್ಟಣದಲ್ಲಿ ಹುಟ್ಟಿ ಬೆಳೆದ ಯುವಕ. ಅವನ ತಂದೆ ಸರ್ಕಾರಿ ನೌಕರ, ತಾಯಿ ಗೃಹಿಣಿ. ಮಗನ ಎಲ್ಲಾ ಅಗತ್ಯಗಳನ್ನು ಪಾಲಕರು ಪೂರೈಸಿದ್ದರು. ಅವರ ಕುಟುಂಬದಲ್ಲಿ ಯಾವುದಕ್ಕೂ ಕೊರತೆ ಇರಲಿಲ್ಲವಾಗಿದ್ದರೂ, ‘ಬೇಕಾದಷ್ಟಿದೆ’ ಎಂಬ ಸ್ಥಿತಿಯೂ ಇರಲಿಲ್ಲ. ಆದ್ದರಿಂದ ಅನಿಲ್‌, ‘ಯಶಸ್ಸು’ ಮತ್ತು ‘ಶ್ರೀಮಂತಿಕೆ’ಯನ್ನು ತನ್ನದಾಗಿಸಬೇಕು ಎಂಬ ಬಲವಾದ ಕನಸನ್ನು ಇಟ್ಟುಕೊಂಡು ಬೆಳೆದ.

ಒಳ್ಳೆಯ ಕಾಲೇಜಿನಿಂದ ಶಿಕ್ಷಣ ಪೂರೈಸಿದ ಅನಿಲ್‌, ಉದ್ಯೋಗಕ್ಕೆ ಸೇರಿ, ಕೆಲವೇ ವರ್ಷಗಳಲ್ಲಿ ಒಳ್ಳೆಯ ಹುದ್ದೆಗೆ ಏರಿದ. ಗಳಿಕೆಯೂ ಹೆಚ್ಚಾಯಿತು. ತಾನು ಕಂಡಿದ್ದ ಕನಸಿನಂತೆ ಜೀವನ ನಡೆಸಲು ಆರಂಭಿಸಿದ. ಹಲವು ವರ್ಷಗಳ ಕಾಲ ದುಡಿದರೂ ಆತ ಯಾವುದೇ ಆಸ್ತಿಪಾಸ್ತಿ ಸಂಪಾದಿಸಲಿಲ್ಲ. ಬದಲಿಗೆ ಸಾಲಗಳಿಂದ ಬಂಧಿತನಾಗಿದ್ದ. ಹಣದ ಕೊರತೆ ಆತನನ್ನು ಕಾಡಲಾರಂಭಿಸಿತ್ತು. ಇತ್ತೀಚೆಗೆ ಗಂಭೀರ ಅಪಘಾತಕ್ಕೊಳಗಾಗಿ ಸುಮಾರು ಆರು ತಿಂಗಳ ಕಾಲ ಕೆಲಸದಿಂದ ದೂರ ಉಳಿಯಬೇಕಾಯಿತು. ಆತನ ಉದ್ಯೋಗಕ್ಕೆ ಕುತ್ತು ಬರಲಿಲ್ಲವಾದರೂ, ಆ ಆರು ತಿಂಗಳ ಅವಧಿಯ ವೇತನ ಆತನಿಗೆ ಲಭಿಸಲಿಲ್ಲ.

ಕಂಪನಿಯೇ ಮಾಡಿಸಿದ್ದ ಗುಂಪು ಆರೋಗ್ಯ ವಿಮೆಯು, ಆತನ ಚಿಕಿತ್ಸಾ ವೆಚ್ಚ ಭರಿಸುವಲ್ಲಿ ಸ್ವಲ್ಪಮಟ್ಟಿಗೆ ನೆರವಾಯಿತು. ಆದರೆ, ಚಿಕಿತ್ಸೆಯ ಪೂರ್ಣ ವೆಚ್ಚ, ಆರು ತಿಂಗಳ ಕಾಲ ಮನೆಯ ಖರ್ಚುವೆಚ್ಚಗಳು ಹಾಗೂ ಸಾಲದ ಕಂತುಗಳನ್ನು ಭರಿಸಬೇಕಾದರೆ ತನ್ನ ಸ್ನೇಹಿತರ ಮುಂದೆ ಆತ ಕೈಚಾಚಬೇಕಾಯಿತು. ಪತ್ನಿಯ ಆಭರಣಗಳನ್ನು ಅಡವಿಟ್ಟು ಸಾಲ ಪಡೆಯಬೇಕಾಯಿತು. ಅನಿಲ್‌ನ ಆರೋಗ್ಯವೇನೋ ನಿಧಾನಕ್ಕೆ ಸುಧಾರಿಸಿತು. ಆದರೆ, ಅವನ ಆರ್ಥಿಕ ಸ್ಥಿತಿಗೆ ಶಸ್ತ್ರಚಿಕಿತ್ಸೆ ಮಾಡಬೇಕಾದ ಸ್ಥಿತಿ ಬಂದಿತ್ತು. ನನ್ನ ಸ್ನೇಹಿತನ ಜೀವನದ ಕೆಲವು ಭಾಗಗಳು ನಿಮಗೂ ಅನ್ವಯವಾಗುವಂತೆ ಭಾಸವಾಗುತ್ತಿರಬಹುದು ಅಲ್ಲವೇ...?

ನಮ್ಮಲ್ಲಿ ಹೆಚ್ಚಿನವರು ಆರ್ಥಿಕವಾಗಿ ಅನಕ್ಷರಸ್ಥರಾಗಿಯೇ ಬೆಳೆದಿರುತ್ತೇವೆ. ನೀವು ಈ ಲೇಖನವನ್ನು ಓದುತ್ತಿದ್ದೀರಿ ಎಂದರೆ ಸುಶಿಕ್ಷಿತರೇ ಆಗಿರುತ್ತೀರಿ. ಆದರೆ, ನೀವೂ ಹೂಡಿಕೆಯ ಕೊರತೆಯ ಸಮಸ್ಯೆ ಎದುರಿಸುತ್ತಿರಬಹುದು. ಜೀವನದಲ್ಲಿ ಎದುರಾಗಬಹುದಾದ ಆಕಸ್ಮಿಕಗಳನ್ನು ಎದುರಿಸಲು ಬೇಕಾದ ತಯಾರಿ ಮಾಡಿಕೊಳ್ಳಲು ನಾವು ಅನೇಕ ಬಾರಿ ವಿಫಲರಾಗುತ್ತೇವೆ.

ಈ ವಿಚಾರವಾಗಿ ಮಾಹಿತಿ ನೀಡುವ ಸಾಕಷ್ಟು ಪುಸ್ತಕಗಳು, ಬ್ಲಾಗ್‌ಗಳು, ಆನ್‌ಲೈನ್‌ ಲೇಖನಗಳು ಲಭ್ಯ ಇವೆ. ಜೀವವಿಮಾ ಕ್ಷೇತ್ರದಲ್ಲಿ ಎರಡು ದಶಕಗಳ ಅನುಭವ ಹೊಂದಿರುವ ವ್ಯಕ್ತಿಯಾಗಿ ‘ಆರ್ಥಿಕವಾಗಿ ನಮ್ಮ ಭವಿಷ್ಯವನ್ನು ಹೇಗೆ ಭದ್ರಪಡಿಸಬಹುದು’ ಎಂಬ ವಿಚಾರವನ್ನು ಸರಳವಾದ ಸೂತ್ರದಲ್ಲಿ ಹೇಗೆ ತಿಳಿಸಬಹುದು ಎಂಬ ಬಗ್ಗೆ ನಾನು ಸಹ ತುಂಬಾ ಸಮಯದಿಂದ ಯೋಚಿಸುತ್ತಿದ್ದೆ.

ಅಬ್ರಹಾಂ ಮಾಸ್ಲೊ ಅವರ ‘ಮಾನವನ ಅಗತ್ಯಗಳ ಅನುಕ್ರಮ’ ಸಿದ್ಧಾಂತದಿಂದ ನನಗೆ ಈ ವಿಚಾರದಲ್ಲಿ ಪ್ರೇರಣೆ ಒದಗಿಸಿತು. ಮಾಸ್ಲೊ ಅವರು 1943ರಲ್ಲಿ ‘ಮಾನವ ಪ್ರೇರಣೆಯ ಸಿದ್ಧಾಂತ’ ವಿಚಾರವಾಗಿ ಒಂದು ಪ್ರಬಂಧವನ್ನು ಮಂಡಿಸಿದ್ದರು. ‘ಮಾನವನ ಅಗತ್ಯಗಳ ಅನುಕ್ರಮ ಅಥವಾ ಶ್ರೇಣಿಕೃತ ವ್ಯವಸ್ಥೆ’ಯು ಇದರಲ್ಲಿ ಬಹು ಮುಖ್ಯವಾದ ಅಂಶವಾಗಿದೆ. ಮಾನವನ ಅಗತ್ಯಗಳನ್ನು ಆತ ಐದು ಹಂತಗಳ ಪಿರ‍್ಯಾಮಿಡ್‌ನಲ್ಲಿ ವಿವರಿಸಿದ್ದಾನೆ. ಅದರ ಅತ್ಯಂತ ತಳಭಾಗದಲ್ಲಿ ಮನುಷ್ಯನ ಮೂಲಭೂತ ದೈಹಿಕ ಅಗತ್ಯಗಳಿವೆ. ಪಿರ‍್ಯಾಮಿಡ್‌ನ ಮೇಲೇರಿದಂತೆ ಸುರಕ್ಷತೆ, ಪ್ರೀತಿ/ ತನ್ನ ವಸ್ತುಗಳು, ಆತ್ಮಗೌರವ ಹಾಗೂ ತುತ್ತತುದಿಯಲ್ಲಿ ‘ಅಗತ್ಯಗಳನ್ನು ಈಡೇರಿಸಿಕೊಂಡ ತೃಪ್ತಿ’ ಇದೆ.

ಇದೇ ಸಿದ್ಧಾಂತವನ್ನು ಆಧರಿಸಿ ನಾನು ‘ಮಾನವನ ಅಗತ್ಯಗಳ ಅನುಪಾತದ’ ನಾಲ್ಕು ಹಂತಗಳ ಪಿರ‍್ಯಾಮಿಡ್‌ ಅನ್ನು ತಯಾರಿಸಿರುವೆ. ‘ಎಲ್ಲಿ ಹೂಡಿಕೆ ಮಾಡಬೇಕು, ಎಷ್ಟು ಹೂಡಿಕೆ ಮಾಡಬೇಕು’ ಮುಂತಾದ ಪ್ರಶ್ನೆಗಳಿಗೆ ಉತ್ತರ ನೀಡುವುದರ ಜೊತೆಗೆ ಭವಿಷ್ಯದ ಅನಿರೀಕ್ಷಿತಗಳನ್ನು ಎದುರಿಸಲು ನಮ್ಮನ್ನು ಅಣಿಗೊಳಿಸುವ ನಿಟ್ಟಿನಲ್ಲಿ ಈ ಪಿರ‍್ಯಾಮಿಡ್‌ ಸಹಾಯಕ ಆಗಬಲ್ಲದು.

ಮೊದಲ ಹಂತದ ಅಗತ್ಯಗಳತ್ತ ಗಮನ ಹರಿಸೋಣ: ಪ್ರತಿಯೊಬ್ಬರೂ ಅತಿ ಅಗತ್ಯವಾಗಿ ತಮಗಾಗಿ ಒಂದು ಆರೋಗ್ಯ ವಿಮೆ ಮಾಡಿಸಬೇಕು. ಮಾರುಕಟ್ಟೆಯಲ್ಲಿ ಈಗ ಬೇರೆಬೇರೆ ರೀತಿಯ ಆರೋಗ್ಯ ವಿಮೆಗಳು ಲಭ್ಯ ಇವೆ. ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾದರೆ, ಅದಕ್ಕೆ ಬರುವ ವೆಚ್ಚವನ್ನು ಮರಳಿ ನೀಡುವ (ಮೆಡಿಕ್ಲೇಮ್‌) ಯೋಜನೆ, ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬರುವ ವೆಚ್ಚವನ್ನು ಪೂರ್ತಿಯಾಗಿ ಭರಿಸುವ ಯೋಜನೆ, ಆಸ್ಪತ್ರೆಗೆ ಮಾಡಿರುವ ವೆಚ್ಚವಲ್ಲದೆ, ಇತರ ವೆಚ್ಚ ಅಥವಾ ಆಗಿರುವ ನಷ್ಟವನ್ನು ಭರಿಸುವ ಯೋಜನೆ... ಹೀಗೆ ಹತ್ತು– ಹಲವು ಯೋಜನೆಗಳಿವೆ.

ಅತ್ಯಂತ ಕಡಿಮೆ ವೆಚ್ಚದಲ್ಲಿ ಲಭಿಸುವ ಯೋಜನೆ ಎಂದರೆ ‘ಅವಧಿ ವಿಮೆ’. ಇಂಥ ಯೋಜನೆಯನ್ನು ಮಾಡಿಸುವಾಗ ವಿಮಾ ಮೊತ್ತವನ್ನು ಸರಿಯಾಗಿ ಆಯ್ಕೆ ಮಾಡಿಕೊಳ್ಳುವುದು ಮುಖ್ಯ. ವಿಮೆಯ ಮೊತ್ತ ನಿಮ್ಮ ವಾರ್ಷಿಕ ಆದಾಯದ 10 ರಿಂದ 15 ಪಟ್ಟು ಇರಬೇಕು ಎಂಬುದು ಸರಳವಾದ ಸೂತ್ರ. 65 ರಿಂದ 70ನೇ ವಯಸ್ಸಿನಲ್ಲಿ ಪಕ್ವವಾಗುವಂತೆ ವಿಮೆ ಮಾಡಿಸಬೇಕು. ಜೀವಮಾನವಿಡೀ, ಅಂದರೆ 99 ವರ್ಷಗಳವರೆಗೂ ಭದ್ರತೆಯನ್ನು ಒದಗಿಸುವ ವಿಮಾ ಯೋಜನೆಗಳೂ ಈಗ ಲಭ್ಯ ಇವೆ.

ಎರಡನೇ ಹಂತ: ಹಣಕಾಸು ಯೋಜನೆಯ ಎರಡನೇ ಹಂತದಲ್ಲಿರುವುದು ‘ಜೀವನದ ಗುರಿ’. ಮನೆ ಖರೀದಿಸುವುದು, ಮಕ್ಕಳ ಶೈಕ್ಷಣಿಕ ವೆಚ್ಚ, ಮದುವೆ... ಮುಂತಾದ ವಿಚಾರಗಳು ಈ ಹಂತದಲ್ಲಿ ಬರುತ್ತವೆ. ಮ್ಯೂಚುವಲ್‌ ಫಂಡ್‌ ಅಥವಾ ಯುಲಿಪ್‌ಗಳಲ್ಲಿ ಗುರಿ ನಿರ್ದೇಶಿತ ಹೂಡಿಕೆ ಮಾಡುವ ಮೂಲಕ ಅಥವಾ ಬ್ಯಾಂಕ್‌ಗಳಲ್ಲಿ ಅವಧಿ ಠೇವಣಿ, ಆರ್‌ಡಿ ಮಾಡಿಸುವುದು, ಚಿನ್ನಾಭರಣ ಖರೀದಿ ಮುಂತಾದ ಸಾಂಪ್ರದಾಯಿಕ ವಿಧಾನದಿಂದಲೂ ಈ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಿದೆ.

ಷೇರುಪೇಟೆಯ ಬಗ್ಗೆ ಸರಿಯಾದ ಜ್ಞಾನ ಇಲ್ಲದವರು ನೇರವಾಗಿ ಷೇರುಪೇಟೆಯಲ್ಲಿ ಹೂಡಿಕೆ ಮಾಡುವುದು ಸೂಕ್ತವಲ್ಲ. ಹೀಗೆ ಎರಡನೇ ಹಂತವನ್ನು ನೀವು ಈಡೇರಿಸಿಕೊಂಡರೆ, ಈಗಾಗಲೇ ಜಾರಿ ಮಾಡಿದ ಮೊದಲ ಹಂತದ ಯೋಜನೆಯನ್ನು ಮರು ಮೌಲ್ಯಮಾಪನ ಮಾಡಲು ಮರೆಯಬಾರದು. ಈ ಹಂತದಲ್ಲಿ ನಿಮ್ಮ ಬಾಧ್ಯತೆಗಳನ್ನೂ ಅವಧಿ ವಿಮೆಯ ವ್ಯಾಪ್ತಿಯೊಳಗೆ ತರಬೇಕು. ಉದಾಹರಣೆಗೆ ನೀವು ಗೃಹಸಾಲ ಪಡೆದಿದ್ದರೆ ಅದನ್ನು ಅವಧಿ ವಿಮೆಗೆ ಜೋಡಿಸಬೇಕು. ಮನೆಯ ಸಾಲ ಮರುಪಾವತಿಯಾಗುವುದಕ್ಕೂ ಮುನ್ನವೇ ಮಾಲೀಕನು ಅವಘಡಕ್ಕೆ ತುತ್ತಾದರೆ, ಆತ ಮಾಡಿದ ಸಾಲ ತೀರಿಸಲು ಮನೆಯವರು ಆಸ್ತಿಪಾಸ್ತಿಯನ್ನೆಲ್ಲಾ ಮಾರಬೇಕಾದ ಸಂದರ್ಭ ಬರುತ್ತದೆ. ಆದರೆ ಸಾಲಗಳನ್ನು ಈ ವಿಮೆಗೆ ಜೋಡಿಸಿದರೆ ಇಂಥ ಸಂದರ್ಭದಲ್ಲಿ ಬಾಕಿ ಕಂತುಗಳನ್ನು ವಿಮಾ ಸಂಸ್ಥೆ ಪಾವತಿಸುತ್ತದೆ.

ಮೂರನೇ ಹಂತವೆಂದರೆ ನಿವೃತ್ತಿಯ ನಂತರದ ಜೀವನಕ್ಕಾಗಿ ಯೋಜನೆ ರೂಪಿಸುವುದು. ಇದರಲ್ಲಿ ಮುಖ್ಯವಾಗಿ ಎರಡು ಹಂತಗಳಿವೆ.  ಮೊದಲನೆಯ ಹಂತ, ದುಡಿಮೆಯ ಅವಧಿಯಲ್ಲಿ ಒಂದಿಷ್ಟು ಹಣವನ್ನು ನಿವೃತ್ತಿಯ ನಂತರದ ಜೀವನಕ್ಕಾಗಿ ಹೂಡಿಕೆ ಮಾಡುತ್ತಾ ಬರುವುದು.

ಹೀಗೆ ಹಣ ಕೂಡಿಡಲು ಕಾರ್ಮಿಕರ ಭವಿಷ್ಯನಿಧಿ (ಇಪಿಎಫ್‌), ಮ್ಯೂಚುವಲ್‌ ಫಂಡ್‌, ಯುಲಿಪ್‌ ಹಾಗೂ ಇತರ ಅನೇಕ ಸಾಂಪ್ರದಾಯಿಕ ಯೋಜನೆಗಳಿವೆ. ಪ್ರತಿಯೊಂದು ಯೋಜನೆಗೂ ತನ್ನದೇ ಆದ ಲಾಭ–ನಷ್ಟಗಳಿವೆ. ಹೂಡಿಕೆದಾರರು ತಮ್ಮ ಹಣವನ್ನು ಒಂದೇ ಯೋಜನೆಯಲ್ಲಿ ತೊಡಗಿಸದೆ, ಈ ಎಲ್ಲಾ ಯೋಜನೆಗಳಲ್ಲೂ ವಿಸ್ತರಿಸಿ ಹೂಡಿಕೆ ಮಾಡುವುದು ಸೂಕ್ತ.

ದುಡಿಮೆಯ ಹಂತದಲ್ಲಿ ಮಾಡಿರುವ ಹೂಡಿಕೆಯಿಂದ ನಿಗದಿತ ಅಂತರದಲ್ಲಿ ಹಣವನ್ನು ಪಡೆಯುತ್ತಾ ನಿವೃತ್ತಿಯ ನಂತರದ ಜೀವನವನ್ನು ಸಾಗಿಸುವುದು ಎರಡನೆಯ ಹಂತ. ಇದಕ್ಕಾಗಿ ಜೀವವಿಮಾ ಸಂಸ್ಥೆಗಳು ವಿಶಿಷ್ಟವಾದ ‘ವರ್ಷಾಶನ’ ಯೋಜನೆಗಳನ್ನು ರೂಪಿಸಿವೆ.

ಇಂತಹ ಯೋಜನೆಯಲ್ಲಿ ಒಂದು ಬಾರಿ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಿದರೆ, ನಿವೃತ್ತಿಯ ನಂತರ ನಿಗದಿತ ಅಂತರದಲ್ಲಿ ಹಣ ಪಡೆಯುತ್ತಲೇ ಇರಬಹುದು. ಈ ಯೋಜನೆಗಳಲ್ಲೂ ಅನೇಕ ಆಯ್ಕೆಗಳಿವೆ. ಪ್ರತಿವರ್ಷವೂ ಆದಾಯವನ್ನು ಏರಿಸುತ್ತಲೇ ಹೋಗುವ ಯೋಜನೆಗಳು, ಒಂದು ವೇಳೆ ಪಾಲಿಸಿದಾರ ಆಕಸ್ಮಿಕವಾಗಿ ಮೃತಪಟ್ಟರೆ ಆತನ ಪತ್ನಿ ಅಥವಾ ಮಕ್ಕಳಿಗೆ ಹಣ ನೀಡುವ ಯೋಜನೆ... ಹೀಗೆ ಇನ್ನೂ ಕೆಲವು ಆಯ್ಕೆಗಳಿವೆ.

ಜೀವವಿಮಾ ಸಂಸ್ಥೆಗಳು ಜೀವಮಾನವಿಡೀ ಭದ್ರತೆ ಒದಗಿಸುವಂಥ ಕೆಲವು ಯೋಜನೆಗಳನ್ನು ನೀಡುತ್ತವೆ. ಇವು ನಿಮ್ಮ ಗುರಿಯ ಈಡೇರಿಕೆಗೆ ನೆರವಾಗಬಲ್ಲವು. ಆದರೆ, ಇಂಥ ಯೋಜನೆಗಳ ಗರಿಷ್ಠ ಲಾಭವನ್ನು ಪಡೆಯಬೇಕಾದರೆ ಸಣ್ಣ ವಯಸ್ಸಿನಲ್ಲೇ ಇವುಗಳಲ್ಲಿ ಹೂಡಿಕೆ ಆರಂಭಿಸುವುದು ಅಗತ್ಯ. ಅಂದ ಮಾತ್ರಕ್ಕೆ ತಡವಾಗಿ ಹೂಡಿಕೆ ಆರಂಭಿಸಬಾರದೆಂದಿಲ್ಲ. ಹೂಡಿಕೆ ಆರಂಭಿಸಲು ವಯೋಮಾನದ ಮಿತಿಯೂ ಇರುವುದಿಲ್ಲ. ಈ ಪಿರಮಿಡ್‌ನ ಹಂತಗಳನ್ನು ಅರ್ಥ ಮಾಡಿಕೊಂಡು, ಆರ್ಥಿಕ ತಜ್ಞರ ಸಲಹೆ ಪಡೆದು ಸಕಾಲದಲ್ಲಿ ಹೂಡಿಕೆ ಆರಂಭಿಸಿದರೆ ಬದುಕಿಗೆ ಹೆಚ್ಚು ಭದ್ರತೆ ಒದಗಿಸಲು ಸಾಧ್ಯವಾಗಲಿದೆ.

(ಲೇಖಕ:ಪಿಎನ್‌ಬಿ ಮೆಟ್‌ಲೈಫ್‌ನ ಉತ್ಪನ್ನಗಳ ಮುಖ್ಯಸ್ಥ)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು