ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ತು ಸಾಲ ಖಾತರಿ ಯೋಜನೆ- ವಿಮಾನ ವಲಯ: ಸಾಲ ಮಿತಿ ಹೆಚ್ಚಳ

ತುರ್ತು ಸಾಲ ಖಾತರಿ ಯೋಜನೆ l ಗರಿಷ್ಠ ಮಿತಿ ₹1,500 ಕೋಟಿ: ಹಣಕಾಸು ಸಚಿವಾಲಯ
Last Updated 5 ಅಕ್ಟೋಬರ್ 2022, 20:29 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶಿ ವಿಮಾನಯಾನ ಕಂಪನಿಗಳಿಗೆ ತುರ್ತು ಸಾಲ ಖಾತರಿ ಯೋಜನೆಯಡಿ (ಇಸಿಎಲ್‌ಜಿಎಸ್‌) ಸಾಲದ ಮಿತಿಯನ್ನು ₹ 400 ಕೋಟಿಯಿಂದ ₹ 1,500 ಕೋಟಿಗೆ ಹೆಚ್ಚಿಸಲಾಗಿದೆ.

ಕೋವಿಡ್‌ ಸಾಂಕ್ರಾಮಿಕದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಉದ್ಯಮಕ್ಕೆ ನ್ಯಾಯಸಮ್ಮತವಾದ ಬಡ್ಡಿದರದಲ್ಲಿ, ಅಡಮಾನ ರಹಿತವಾಗಿ ಸಾಲ ಸೌಲಭ್ಯ ನೀಡಲು ಕೇಂದ್ರ ಹಣಕಾಸು ಸಚಿವಾಲಯವು ಈ ನಿರ್ಧಾರ ತೆಗೆದುಕೊಂಡಿದೆ.

ದೇಶದ ಆರ್ಥಿಕ ಬೆಳವಣಿಗೆಗೆ ಬಲಿಷ್ಠ ಮತ್ತು ದಕ್ಷ ನಾಗರಿಕ ವಿಮಾನಯಾನ ವಲಯದ ಅಗತ್ಯ ಇದೆ ಎನ್ನುವುದನ್ನು ಗುರುತಿಸಿ, ಹಣಕಾಸು ಸೇವೆಗಳ ಇಲಾಖೆಯು (ಡಿಎಫ್‌ಎಸ್‌) ಯೋಜನೆಗೆ ತಿದ್ದುಪಡಿ ತಂದಿದೆ. ಆ ಮೂಲಕ ವಿಮಾನಯಾನ ವಲಯಕ್ಕೆ ಸಾಲದ ಗರಿಷ್ಠ ಮಿತಿಯನ್ನು ಹೆಚ್ಚಿಸಲಾಗಿದೆ ಎಂದು ಬುಧವಾರ ಹೊರಡಿಸಿರುವ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇಸಿಎಲ್‌ಜಿಎಸ್‌ 3.0 ಪ್ರಕಾರ, ವಿಮಾನಯಾನ ಕಂಪನಿಯು ಬಾಕಿ ಉಳಿಸಿಕೊಂಡಿರುವ ಸಾಲದ ಶೇ 100ರಷ್ಟು ಅಥವಾ ₹1,500 ಕೋಟಿ ಮೊತ್ತವನ್ನು ಪಡೆಯಲು ಅರ್ಹವಾಗಿವೆ. ಕಂಪನಿಯ ಮಾಲೀಕರ ಈಕ್ವಿಟಿ ಕೊಡುಗೆಯ ಆಧಾರದ ಮೇಲೆ ಸಾಲದ ಮೊತ್ತವು ನಿರ್ಧಾರ ಆಗಲಿದೆ ಎಂದು ಹೇಳಿದೆ.

ವಿಮಾನ ಇಂಧನ ದರದಲ್ಲಿ ಗರಿಷ್ಠ ಏರಿಕೆ ಮತ್ತು ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಇಳಿಕೆ ಆಗಿರುವುದರಿಂದ ವಿಮಾನಯಾನ ಕಂಪನಿಗಳ ಕಾರ್ಯಾಚರಣಾ ವೆಚ್ಚದಲ್ಲಿ ಭಾರಿ ಏರಿಕೆ ಆಗುತ್ತಿದೆ. ಇದರಿಂದಾಗಿ ಕಂಪನಿಗಳಿಗೆ ಆರ್ಥಿಕ ಬಿಕ್ಕಟ್ಟು ಎದುರಾಗಿದೆ.

ಕೇಂದ್ರ ಸರ್ಕಾರವು ಇದೇ ಮಾರ್ಚ್‌ನಲ್ಲಿ ಯೋಜನೆಯಲ್ಲಿ ಕೆಲವು ಬದಲಾವಣೆ ತರುವ ಮೂಲಕ ವಿಮಾನಯಾನ ಕಂಪನಿಗಳಿಗೆ ಅವುಗಳ ಬಾಕಿ ಉಳಿಸಿಕೊಂಡಿರುವ ಸಾಲದ ಮೊತ್ತದ ಶೇ 50ರವರೆಗೆ ಸಾಲವನ್ನು ಪಡೆಯಲು ಆದರೆ ಆ ಮೊತ್ತವು ₹400 ಕೋಟಿ ದಾಟದಂತೆ ಮಿತಿ ಹೇರಿತ್ತು. ಇದೀಗ ಮತ್ತೆ ಯೋಜನೆಯಲ್ಲಿ ಬದಲಾವಣೆ ತರಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

₹50 ಸಾವಿರ ಕೋಟಿ ಇದ್ದ ಯೋಜನೆಯ ಒಟ್ಟು ಮೊತ್ತವನ್ನು ₹ 5 ಲಕ್ಷ ಕೋಟಿಗೆ ಹೆಚ್ಚಿಸಲು ಆಗಸ್ಟ್‌ 17ರಂದುಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಯೋಜನೆಯಡಿ 2022ರ ಆಗಸ್ಟ್‌ 5ರವರೆಗೆ ಒಟ್ಟು ₹3.67 ಲಕ್ಷ ಕೋಟಿ ಮೌಲ್ಯದ ಸಾಲ ಮಂಜೂರು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT