ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಡಿಕೆಯ ನೆಚ್ಚಿನ ತಾಣ ಭಾರತ

ಸಿಐಐ ಮತ್ತು ‘ಅರ್ನ್ಸ್ಟ್‌‌ ಆ್ಯಂಡ್ ಯಂಗ್’ ಜಂಟಿ ಸಮೀಕ್ಷೆಯ ವರದಿ
Last Updated 14 ಅಕ್ಟೋಬರ್ 2020, 9:09 IST
ಅಕ್ಷರ ಗಾತ್ರ

ನವದೆಹಲಿ: ಬಹುರಾಷ್ಟ್ರೀಯ ಕಂಪನಿಗಳ ಪಾಲಿಗೆ ಭಾರತವು ನೆಚ್ಚಿನ ಹೂಡಿಕೆ ತಾಣಗಳಲ್ಲಿ ಒಂದಾಗಿದೆ ಎಂಬುದನ್ನು ನೂರಕ್ಕೂ ಹೆಚ್ಚು ಬಹುರಾಷ್ಟ್ರೀಯ ಕಂಪನಿಗಳನ್ನು ಒಳಗೊಂಡ ಸಮೀಕ್ಷೆಯೊಂದು ಕಂಡುಕೊಂಡಿದೆ.

ಶೇಕಡ 66ರಷ್ಟಕ್ಕಿಂತ ಹೆಚ್ಚಿನ ಕಂಪನಿಗಳ ಪಾಲಿಗೆ ಭವಿಷ್ಯದ ಹೂಡಿಕೆಗಳ ವಿಚಾರದಲ್ಲಿ ಭಾರತವೇ ಪ್ರಥಮ ಆದ್ಯತೆಯ ತಾಣ ಎಂಬುದನ್ನು ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ಮತ್ತು ಅರ್ನ್ಸ್ಟ್‌‌ ಆ್ಯಂಡ್ ಯಂಗ್ ಜಂಟಿಯಾಗಿ ನಡೆಸಿದ ಸಮೀಕ್ಷೆಯು ಹೇಳಿದೆ.

ಭಾರತದಲ್ಲಿ ಕೇಂದ್ರ ಕಚೇರಿ ಹೊಂದಿಲ್ಲದ ಕನಿಷ್ಠ ಶೇಕಡ 25ರಷ್ಟು ಎಂಎನ್‌ಸಿಗಳು, ಭವಿಷ್ಯದ ಹೂಡಿಕೆಯ ವಿಚಾರದಲ್ಲಿ ತಮಗೆ ಭಾರತವೇ ಮೊದಲ ಆದ್ಯತೆಯ ದೇಶ ಎಂದು ಹೇಳಿವೆ. ಸರಿಸುಮಾರು ಶೇಕಡ 30ರಷ್ಟು ಕಂಪನಿಗಳು ತಾವು ಭಾರತದಲ್ಲಿ ₹ 3,600 ಕೋಟಿಗಿಂತ ಹೆಚ್ಚು ಹೂಡಿಕೆ ಮಾಡಲು ಆಲೋಚಿಸುತ್ತಿರುವುದಾಗಿ ಹೇಳಿವೆ.

2025ಕ್ಕೂ ಮೊದಲೇ ಭಾರತದ ಅರ್ಥ ವ್ಯವಸ್ಥೆಯು ವಿಶ್ವದ ಮೊದಲ ಮೂರು ಅರ್ಥ ವ್ಯವಸ್ಥೆಗಳಲ್ಲಿ ಒಂದಾಗಲಿದೆ ಅಥವಾ ಭಾರತವು ಮುಂಚೂಣಿ ತಯಾರಿಕಾ ಕೇಂದ್ರವಾಗಿ ಬೆಳೆಯಲಿದೆ ಎಂದು ಶೇಕಡ 50 ರಷ್ಟು ಕಂಪನಿಗಳು ಅಂದಾಜಿಸಿವೆ. ರಾಜಕೀಯ ಸ್ಥಿರತೆ, ಕುಶಲ ಕಾರ್ಮಿಕರ ಲಭ್ಯತೆ ಹಾಗೂ ಮಾರುಕಟ್ಟೆಯ ಶಕ್ತಿಯ ಕಾರಣದಿಂದಾಗಿ ಭಾರತವು ತಮ್ಮ ನೆಚ್ಚಿನ ತಾಣವಾಗಲಿದೆ ಎಂಬುದು ಸಮೀಕ್ಷೆಯಲ್ಲಿ ಪಾಲ್ಗೊಂಡವರು ಹೇಳಿರುವ ಮಾತು.

‘ಭಾರತವು ಮುಂದಿನ ದಿನಗಳಲ್ಲಿ ಜಾಗತಿಕ ಹೂಡಿಕೆಯ ನೆಚ್ಚಿನ ದೇಶವಾಗಲಿದೆ ಎಂಬುದನ್ನು ಈ ಸಮೀಕ್ಷೆಯ ಫಲಿತಾಂಶವು ತೋರಿಸುತ್ತಿದೆ’ ಎಂದು ಸಿಐಐ ಮಹಾನಿರ್ದೇಶಕ ಚಂದ್ರಜಿತ್ ಬ್ಯಾನರ್ಜಿ ಹೇಳಿದ್ದಾರೆ.

‘ಕಾರ್ಮಿಕರಿಗಾಗಿ ಮಾಡಬೇಕಿರುವ ವೆಚ್ಚ ಕಡಿಮೆ ಇರುವುದು, ನೀತಿಗಳಲ್ಲಿ ಸುಧಾರಣೆ ಮತ್ತು ಕಚ್ಚಾ ವಸ್ತುಗಳ ಲಭ್ಯತೆಯು ಭಾರತವನ್ನು ಆಕರ್ಷಕ ಹೂಡಿಕೆ ತಾಣವನ್ನಾಗಿ ಪರಿವರ್ತಿಸುವಲ್ಲಿ ಕೊಡುಗೆ ನೀಡುತ್ತವೆ. ಕಾರ್ಪೊರೇಟ್ ತೆರಿಗೆಯಲ್ಲಿನ ಕಡಿತ, ವಾಣಿಜ್ಯ ವಹಿವಾಟುಗಳನ್ನು ಸುಲಲಿತವಾಗಿಸಲು ಕ್ರಮ ಕೈಗೊಂಡಿರುವುದು, ಕಾರ್ಮಿಕರಿಗೆ ಸಂಬಂಧಿಸಿದ ಕಾನೂನುಗಳನ್ನು ಸರಳಗೊಳಿಸಿರುವುದು ಕೂಡ ಹೊಸ ಹೂಡಿಕೆಗಳನ್ನು ಆಕರ್ಷಿಸುತ್ತಿವೆ’ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

ಭಾರತದಲ್ಲಿ ಕೇಂದ್ರ ಕಚೇರಿ ಹೊಂದಿರದ ಶೇಕಡ 40ರಷ್ಟು ಕಂಪನಿಗಳ ಪಾಲಿಗೆ, ಕಾರ್ಮಿಕ ಕಾನೂನುಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿನ ಸುಧಾರಣೆಗಳು ಅತ್ಯಂತ ಪ್ರಮುಖ ಕ್ರಮಗಳಾಗಿ ಕಂಡುಬಂದಿವೆ. ಶೇಕಡ 52ರಷ್ಟು ಕಂಪನಿಗಳ ಪಾಲಿಗೆ, ಕಾರ್ಪೊರೇಟ್ ತೆರಿಗೆಯಲ್ಲಿನ ಕಡಿತವು ಆಕರ್ಷಣೀಯವಾಗಿ ಗೋಚರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT