ವಿದೇಶಿ ಬಂಡವಾಳ ಹೂಡಿಕೆದಾರಿಂದ ಭಾರತದಲ್ಲಿ ₹13,424 ಕೋಟಿ ಹೂಡಿಕೆ

ನವದೆಹಲಿ: ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್ಪಿಐ) ಜೂನ್ 1 ರಿಂದ 11ರವರೆಗಿನ ಅವಧಿಯಲ್ಲಿ ದೇಶದ ಬಂಡವಾಳ ಮಾರುಕಟ್ಟೆಯಲ್ಲಿ ₹ 13,424 ಕೋಟಿ ಹೂಡಿಕೆ ಮಾಡಿದ್ದಾರೆ.
ಹೂಡಿಕೆದಾರರು ಷೇರುಪೇಟೆಯಲ್ಲಿ ₹ 15,520 ಕೋಟಿ ಹೂಡಿಕೆ ಮಾಡಿದ್ದರೆ, ಸಾಲಪತ್ರ ಮಾರುಕಟ್ಟೆಯಿಂದ ₹ 2,096 ಕೋಟಿ ಹಿಂದಕ್ಕೆ ಪಡೆದಿದ್ದಾರೆ. ಹೀಗಾಗಿ ಒಟ್ಟಾರೆ ಹೂಡಿಕೆ ಮೊತ್ತ ₹ 13,424 ಕೋಟಿಗಳಷ್ಟಾಗಿದೆ.
ಕೋವಿಡ್–19 ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಮತ್ತು ಆರ್ಥಿಕ ಚಟುವಟಿಕೆಗಳು ಆದಷ್ಟೂ ಬೇಗನೆ ಆರಂಭವಾಗುವ ಭರವಸೆಯಿಂದಾಗಿ ಈ ಪ್ರಮಾಣದಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಮಾರ್ನಿಂಗ್ಸ್ಟಾರ್ ಇಂಡಿಯಾದ ಸಹಾಯಕ ನಿರ್ದೇಶಕ ಹಿಮಾಂಶು ಶ್ರೀವಾಸ್ತವ ಹೇಳಿದ್ದಾರೆ.
ಏಪ್ರಿಲ್ನಲ್ಲಿ ₹ 9,435 ಕೋಟಿ ಮತ್ತು ಮೇ ತಿಂಗಳಿನಲ್ಲಿ ₹ 2,666 ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದರು.
ಐ.ಟಿ, ಹಣಕಾಸು ಮತ್ತು ಇಂಧನ ವಲಯಗಳಲ್ಲಿ ವಿದೇಶಿ ಹೂಡಿಕೆ ಕೇಂದ್ರೀಕೃತವಾಗಿದೆ ಎಂದು ಎಲ್ಕೆಪಿ ಸೆಕ್ಯುರಿಟೀಸ್ನ ಸಂಶೋಧನಾ ಮುಖ್ಯಸ್ಥ ಎಸ್. ರಂಗನಾಥನ್ ಹೇಳಿದ್ದಾರೆ.
ಕಡಿಮೆ ಬಡ್ಡಿದರ, ರಫ್ತು ಮುನ್ನೋಟ ಉತ್ತಮವಾಗಿರುವುದು ಹಾಗೂ ಜಾಗತಿಕ ಆರ್ಥಿಕ ಚೇತರಿಕೆಯು ಭಾರತದ ಆರ್ಥಿಕತೆಯ ಪುನಶ್ಚೇತನಕ್ಕೆ ಪೂರಕವಾಗಿವೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಕಂಪನಿಗಳ ನಾಲ್ಕನೇ ತ್ರೈಮಾಸಿಕದ ಫಲಿತಾಂಶಗಳು ಆರ್ಥಿಕತೆಯು ಮತ್ತೆ ಚೇತರಿಕೆ ಹಾದಿಗೆ ಮರಳುತ್ತಿದೆ ಎನ್ನುವುದನ್ನು ಸೂಚಿಸುತ್ತಿವೆ. ಈ ಕಾರಣದಿಂದಾಗಿ ಜೂನ್ನಲ್ಲಿ ಒಳಹರಿವು ಕಂಡುಬಂದಿದೆ ಎಂದು ಜಿಯೋಜಿತ್ ಹಣಕಾಸು ಸೇವೆಗಳ ಮುಖ್ಯ ಹೂಡಿಕೆ ವಿಶ್ಲೇಷಕ ವಿ.ಕೆ.ವಿಜಯಕುಮಾರ್ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.