ದೇಶದಲ್ಲಿ ವಿದೇಶಿ ಬಂಡವಾಳ ಹೂಡಿಕೆ ₹ 22,038 ಕೋಟಿ

ನವದೆಹಲಿ: ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್ಪಿಐ) ಫೆಬ್ರುವರಿ 1ರಿಂದ 18ರವರೆಗಿನ ಅವಧಿಯಲ್ಲಿ ದೇಶದ ಮಾರುಕಟ್ಟೆಗಳಲ್ಲಿ ₹ 22,038 ಕೋಟಿ ಹೂಡಿಕೆ ಮಾಡಿದ್ದಾರೆ.
ಒಟ್ಟಾರೆ ಹೂಡಿಕೆಯಲ್ಲಿ ₹ 20,593 ಕೋಟಿ ಮೌಲ್ಯದ ಷೇರುಗಳನ್ನು ಹಾಗೂ ₹ 1,445 ಕೋಟಿ ಮೌಲ್ಯದ ಸಾಲಪತ್ರಗಳನ್ನು ಖರೀದಿಸಿದ್ದಾರೆ. ಜನವರಿ ತಿಂಗಳಿನಲ್ಲಿ ಇವರು ₹ 14,649 ಕೋಟಿ ಹೂಡಿಕೆ ಮಾಡಿದ್ದರು.
‘ಕೇಂದ್ರ ಬಜೆಟ್ನ ಸಕಾರಾತ್ಮಕ ಅಂಶಗಳು ವಿದೇಶಿ ಹೂಡಿಕೆಯನ್ನು ಉತ್ತೇಜಿಸಿವೆ. ಸರ್ಕಾರವು ಆರ್ಥಿಕತೆಯನ್ನು ಮತ್ತೆ ಹಳಿಗೆ ತರುವ ಪ್ರಯತ್ನವನ್ನು ಬಜೆಟ್ನಲ್ಲಿ ನಡೆಸಿದ್ದರಿಂದ ಹೂಡಿಕೆ ಚಟುವಟಿಕೆ ಹೆಚ್ಚಾಗಿದೆ’ ಎಂದು ಮಾರ್ನಿಂಗ್ಸ್ಟಾರ್ ಇಂಡಿಯಾದ ಸಹಾಯಕ ನಿರ್ದೇಶಕ ಹಿಮಾಂಶು ಶ್ರೀವಾಸ್ತವ ಹೇಳಿದ್ದಾರೆ.
‘2020ರಲ್ಲಿ ಔಷಧ ವಲಯವು ಪ್ರಮುಖ ಆಯ್ಕೆಯಾಗಿತ್ತು, ಅದು ಉತ್ತಮ ಗಳಿಕೆ ಕಂಡಿದೆ. ಆದರೆ, ವಸೂಲಾಗದ ಸಾಲದ ಕಾರಣದಿಂದಾಗಿ ಬ್ಯಾಂಕಿಂಗ್ ಷೇರುಗಳು ಇಳಿಕೆ ಕಂಡಿವೆ. ಈಗ ಬ್ಯಾಂಕಿಂಗ್ ಷೇರುಗಳು ಮತ್ತೆ ಏರಿಕೆ ಹಾದಿಯಲ್ಲಿವೆ. ಹೂಡಿಕೆದಾರರಿಗೆ ಗರಿಷ್ಠ ಗಳಿಕೆ ತಂದುಕೊಡುವ ಷೇರುಗಳ ಪಟ್ಟಿಯಲ್ಲಿ ಐಟಿ ಷೇರುಗಳು ಪ್ರಮುಖ ಸ್ಥಾನ ಕಾಯ್ದಕೊಂಡಿವೆ’ ಎಂದು ಜಿಯೋಜಿತ್ ಹಣಕಾಸು ಸೇವೆಗಳ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್ ತಿಳಿಸಿದ್ದಾರೆ.
‘ಭಾರತದ ಆರ್ಥಿಕತೆಯು ನಿರೀಕ್ಷೆ ಮಾಡಿದ್ದಕ್ಕಿಂತಲೂ ವೇಗವಾಗಿ ಸುಧಾರಿಸಿಕೊಳ್ಳುತ್ತಿದ್ದು, ಅಲ್ಪಾವಧಿಯಲ್ಲಿ ವಿದೇಶಿ ಬಂಡವಾಳ ಹೂಡಿಕೆಯು ಇದೇ ರೀತಿಯಲ್ಲಿ ಮುಂದುವರಿಯುವ ನಿರೀಕ್ಷೆ ಮಾಡಲಾಗಿದೆ’ ಎಂದು ಗ್ರೋವ್ ಸಂಸ್ಥೆಯ ಸಹ ಸ್ಥಾಪಕ ಹರ್ಷ್ ಜೈನ್ ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಟೆಸ್ಲಾ ಘಟಕ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾಹಿತಿ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.