ಶುಕ್ರವಾರ, ಸೆಪ್ಟೆಂಬರ್ 25, 2020
21 °C

ಚೀನಾ ಅವಲಂಬನೆ ತಗ್ಗಿಸಿ: ವಾಣಿಜ್ಯೋದ್ಯಮಿಗಳಿಗೆ ಸಚಿವ ಗಡ್ಕರಿ ಮನವಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಸ್ವಾವಲಂಬಿ ಭಾರತ ಪರಿಕಲ್ಪನೆ ಸಾಕಾರಗೊಳಿಸಲು ಚೀನಾದ ಮೇಲಿನ ಅವಲಂಬನೆಯನ್ನು ತಗ್ಗಿಸಿ ದೇಶದಲ್ಲಿಯೇ ಅದಕ್ಕೆ ಪರ್ಯಾಯ ಕಂಡುಕೊಳ್ಳಬೇಕಿದೆ ಎಂದು ಎಂಎಸ್‌ಎಂಇ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಚೀನಾದ ಮೇಲೆ  ಹೆಚ್ಚು ಅವಲಂಬಿತವಾಗಿರುವ ವಲಯಗಳನ್ನು ಗುರುತಿಸುವಂತೆ ವಾಣಿಜ್ಯೋದ್ಯಮಿಗಳಿಗೆ ಮನವಿ ಮಾಡಿರುವ ಅವರು, ಭಾರತವನ್ನು ‘ಸೂಪರ್‌ ಪವರ್‌’ ಆಗಿ ರೂಪಿಸಲು ಚೀನಾದ ಉತ್ಪನ್ನಗಳಿಗೆ ಸ್ಥಳೀಯವಾಗಿಯೇ ಪರ್ಯಾಯ ಕಂಡುಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ (ಸಿಐೈ) ಮಿಷನ್‌ 2020 ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಮಹಾನಗರ ಮತ್ತು ಅಭಿವೃದ್ಧಿ ಹೊಂದಿದ ನಗರಗಳಾಚೆಗೆ ಅಂದರೆ ಗ್ರಾಮೀಣ ಪ್ರದೇಶಗಳಲ್ಲಿಯೂ ಕೈಗಾರಿಕಾ ಜಾಲವನ್ನು ವಿಸ್ತರಿಸುವಂತೆ ಉದ್ಯಮಿಗಳಿಗೆ ಮನವಿ ಮಾಡಿದ್ದಾರೆ.

ಶೇ 90ರಷ್ಟು ವಾಣಿಜ್ಯೋದ್ಯಮಗಳು ದೊಡ್ಡ ನಗರಗಳು ಮತ್ತು ಮಹಾನಗರಗಳ ಕಡೆಗೆ ಮಾತ್ರವೇ ಗಮನ ಹರಿಸುತ್ತಿವೆ ಎನ್ನುವುದು ವಿಷಾದನೀಯ. ಗ್ರಾಮೀಣ, ಬುಡಕಟ್ಟು ಮತ್ತು ಹಿಂದುಳಿದ ಪ್ರದೇಶಗಳ ಬಗ್ಗೆಯೂ ವಾಣಿಜ್ಯೋದ್ಯಮಿಗಳು ಗಮನ ಹರಿಸುವಂತೆ ಸಲಹೆ ನೀಡಿದ್ದಾರೆ. ಇದಕ್ಕಾಗಿ ಎಲ್ಲಾ ರೀತಿಯ ನೆರವನ್ನೂ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.

ಆಮದು ಕಡಿಮೆ ಮಾಡುವ ಮೂಲಕ ರಫ್ತು ಹೆಚ್ಚಿಸಲು ಸಾಧ್ಯವಿರುವ ವಲಯಗಳನ್ನು ಗುರುತಿಸುವಂತೆ ಸಿಐಐಗೆ ಸೂಚನೆ ನೀಡಿದ್ದಾರೆ. ದೇಶದಲ್ಲಿ ತಯಾರಿಕೆಗೆ ಉತ್ತೇಜನ ನೀಡಲು ಕೆಲವು ವಲಯಗಳಲ್ಲಿ ಆಮದು ಸುಂಕ ಹೆಚ್ಚಿಸಬೇಕಾಗಿದೆ’ ಎಂದು ತಿಳಿಸಿದ್ದಾರೆ.

ಉದ್ಯೋಗ ಸೃಷ್ಟಿಯ ತುರ್ತು ಅಗತ್ಯ: ‘ದೇಶದಲ್ಲಿ ಉದ್ಯೋಗ ಸೃಷ್ಟಿಸುವ ತುರ್ತು ಅಗತ್ಯ ಇದೆ. ಗ್ರಾಮೀಣ, ಕೃಷಿ, ಬುಡಕಟ್ಟು ಮತ್ತು ಹಳ್ಳಿಗಳತ್ತ ಗಮನ ಹರಿಸಬೇಕಿದೆ. ಜನದಟ್ಟಣೆ ಇರುವ ನಗರಗಳಿಂದ ಶೇ 7–8ರಷ್ಟನ್ನು ಸ್ಮಾರ್ಟ್‌ ಸಿಟಿ ಮತ್ತು ಹಳ್ಳಿಗಳಿಗೆ ವರ್ಗಾಯಿಸುವ ಗುರಿ ಹೊಂದಲಾಗಿದೆ’ ಎಂದೂ ಹೇಳಿದ್ದಾರೆ.

ಚೀನಾದಿಂದ ಆಮದು

₹ 7.50 ಲಕ್ಷ ಕೋಟಿ: ಪೀಠೋಪಕರಣ ಮತ್ತು ಅದಕ್ಕೆ ಸಂಬಂಧಿಸಿದ ವಸ್ತುಗಳು

₹ 6.30 ಲಕ್ಷ ಕೋಟಿ: ಪ್ಲಾಸ್ಟಿಕ್‌ ಉತ್ಪನ್ನಗಳು

₹ 5.58 ಲಕ್ಷ ಕೋಟಿ: ವಾಹನಗಳು

₹ 5.01 ಲಕ್ಷ ಕೋಟಿ: ಬಟ್ಟೆಗಳು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು