ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ಸಿಎನ್‌ಜಿ ವಾಹನ ಮಾಲೀಕರಿಗೆ ವಿಶೇಷ ಯೋಜನೆ: ಗೇಲ್‌ ಗ್ಯಾಸ್

Last Updated 15 ಸೆಪ್ಟೆಂಬರ್ 2021, 15:08 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಸಾಂದ್ರೀಕೃತ ನೈಸರ್ಗಿಕ ಅನಿಲ (ಸಿಎನ್‌ಜಿ) ವಾಹನಗಳ ಬಳಕೆ ಉತ್ತೇಜಿಸಲು ಗೇಲ್ ಗ್ಯಾಸ್ ಲಿಮಿಟೆಡ್ ಕಂಪನಿಯು ‘ಸಿಎನ್‌ಜಿ ಉತ್ತೇಜನ ಯೋಜನೆ’ ಆರಂಭಿಸಿದೆ.

ಯಾವುದೇ ವ್ಯಕ್ತಿ ಅಥವಾ ಸಂಘ–ಸಂಸ್ಥೆಯು ಸಿಎನ್‌ಜಿ ಸೌಲಭ್ಯದ ಹೊಸ ಕಾರು, ಆಟೊ, ಟ್ಯಾಕ್ಸಿ, ಎಲ್‌ಸಿವಿ, ಎಚ್‌ಸಿವಿ ಖರೀದಿಸಿದರೆ ಅಥವಾ ಹಾಲಿ ಇರುವ ವಾಹನವನ್ನು ಸಿಎನ್‌ಜಿಗೆ ಪರಿವರ್ತಿಸಿದರೆ ಈ ಯೋಜನೆಯ ಪ್ರಯೋಜನ ಪಡೆಯಬಹುದು.

ಯೋಜನೆಯ ಅಡಿಯಲ್ಲಿ, ಗೇಲ್ ಗ್ಯಾಸ್ ಲಿಮಿಟೆಡ್ ಕಂಪನಿಯು ₹ 14 ಸಾವಿರದಿಂದ ₹ 25 ಸಾವಿರದವರೆಗಿನ ಮೌಲ್ಯದ ಸಿಎನ್‌ಜಿ ಪ್ರೀಪೇಯ್ಡ್ ಕಾರ್ಡ್ಅನ್ನುಸಿಎನ್‌ಜಿ ವಾಹನ ಮಾಲೀಕರಿಗೆ ನೀಡಲಿದೆ. ಈ ಕಾರ್ಡ್ ಬಳಸಿ ಬೆಂಗಳೂರಿನ ಯಾವುದೇ ಸಿಎನ್‌ಜಿ ಕೇಂದ್ರದಲ್ಲಿ ಗ್ಯಾಸ್ ಭರ್ತಿ ಮಾಡಿಸಬಹುದು. ದಿನದ ಗರಿಷ್ಠ ಬಳಕೆ ಮೊತ್ತದ ಮಿತಿಯು ₹ 150ರಿಂದ ₹ 300ರವರೆಗೆ ಇರಲಿದೆ.

ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಸಾರಿಗೆ ಸಚಿವ ಬಿ. ಶ್ರೀರಾಮುಲು, ‘ಪರಿಸರ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರವು ಸಹಕಾರ ನೀಡಲು ಸಿದ್ಧವಿದೆ. ಬೆಂಗಳೂರಿನಲ್ಲಿ ಸಿಎನ್‌ಜಿ ಜಾಲವನ್ನು ವಿಸ್ತರಿಸುವ ಪ್ರಯತ್ನಗಳು ನಡೆಯುತ್ತಿವೆ. ಬೆಂಗಳೂರಿನಲ್ಲಿ ಶುದ್ಧ ಇಂಧನ ಬಳಕೆ ಮಾಡುವಂತೆ ಜನರನ್ನು ಉತ್ತೇಜಿಸುವಲ್ಲಿ ಈ ಯೋಜನೆಯು ಒಂದು ಪ್ರಮುಖ ಹೆಜ್ಜೆ’ ಎಂದರು.

ಗೇಲ್ ಗ್ಯಾಸ್ ಕಂಪನಿಯು ಸದ್ಯಬೆಂಗಳೂರಿನಲ್ಲಿ 49 ಸಿಎನ್‌ಜಿ ಕೇಂದ್ರಗಳನ್ನು ಹೊಂದಿದ್ದು, ಅವುಗಳಲ್ಲಿ 37 ಕೇಂದ್ರಗಳು ಕಾರ್ಯಾಚರಿಸುತ್ತಿವೆ. ಇನ್ನುಳಿದ 12 ಕೇಂದ್ರಗಳು ಅಕ್ಟೋಬರ್ ಕೊನೆಯೊಳಗೆ ಬಳಕೆಗೆ ಲಭ್ಯವಾಗಲಿವೆ. ಮುಂದಿನ ಹಣಕಾಸು ವರ್ಷದಲ್ಲಿ ಇನ್ನೂ 50 ಕೇಂದ್ರಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ ಎಂದು ಗೇಲ್ ಗ್ಯಾಸ್‌ನ ಸಿಇಒ ರಮಣ್ ಛಡ್ಡಾ ತಿಳಿಸಿದರು.

ಮಾರುತಿ ಸುಜುಕಿ, ಟಾಟಾ ಮೋಟರ್ಸ್, ಹುಂಡೈ ಮೋಟರ್ಸ್, ಬಜಾಜ್ ಆಟೊ, ಪಿಯಾಜಿಯೊ, ಮಹೀಂದ್ರ, ಟಿವಿಎಸ್ ಮೋಟರ್ಸ್, ಅಶೋಕ್ ಲೇಲ್ಯಾಂಡ್, ಏಷರ್ ಮೋಟರ್ಸ್ ಕಂಪನಿಗಳು ಸಿಎನ್‌ಜಿ ವಾಹನಗಳನ್ನು ನೀಡುತ್ತಿವೆ.

ಯೋಜನೆಯ ವಿವರ
ವಾಹನ;ಕಾರ್ಡ್ ಮೌಲ್ಯ;ದಿನದ ಬಳಕೆ ಮಿತಿ;ಕಾರ್ಡ್ ಬಳಕೆಯ ಗರಿಷ್ಠ ಅವಧಿ
ಹೊಸ ಪ್ರಯಾಣಿಕ ಆಟೊ ರಿಕ್ಷಾ (3 ಚಕ್ರ);₹14,000;₹150;180 ದಿನ
ಹೊಸ ಕಾರ್ಗೊ ಆಟೊ ರಿಕ್ಷಾ (3 ಚಕ್ರ);₹25,000;₹150;180 ದಿನ
ಹೊಸ ಟ್ಯಾಕ್ಸಿ/ಖಾಸಗಿ ಕಾರು;₹25,000;₹300;120 ದಿನ
ಹೊಸ ಎಲ್‌ಸಿವಿ/ಎಚ್‌ಸಿವಿ;₹25,000;₹300;120 ದಿನ
ರೆಟ್ರೊ ಫಿಟ್ಟೆಡ್ ಪ್ರಯಾಣಿಕ ಆಟೊ (3 ಚಕ್ರ);₹23,000;₹150;180 ದಿನ
ರೆಟ್ರೊ ಫಿಟ್ಟೆಡ್ ಟ್ಯಾಕ್ಸಿ;₹23,000;₹300;120 ದಿನ
ರೆಟ್ರೊ ಫಿಟ್ಟೆಡ್ ಖಾಸಗಿ ಕಾರ್;₹25,000;₹300;120 ದಿನ

ಮುಖ್ಯಾಂಶಗಳು


ಸೆಪ್ಟೆಂಬರ್ 10 ರಿಂದ ಅಕ್ಟೋಬರ್ 9ರ ಅವಧಿಯೊಳಗೆ ಖರೀದಿಸುವ ವೈಯಕ್ತಿಕ ಮತ್ತು ವಾಣಿಜ್ಯ ಬಳಕೆಯ ಉದ್ದೇಶದ ವಾಹನಗಳಿಗೆ ಅನ್ವಯ

ಬೆಂಗಳೂರು ವಲಯದಲ್ಲಿ ಇರುವ 16 ಆರ್‌ಟಿಒಗಳಲ್ಲಿ ಯಾವುದರಲ್ಲಾದರೂ ಒಂದರಲ್ಲಿ ನೋಂದಣಿ ಆಗಿರಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT