ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 3.1ರಷ್ಟು ಜಿಡಿಪಿ ಪ್ರಗತಿ ಕುಂಠಿತ

ಕೋವಿಡ್‌ ಪರಿಣಾಮ:: ವಾರ್ಷಿಕ ವೃದ್ಧಿ ದರ ಶೇ 4.2
Last Updated 29 ಮೇ 2020, 18:33 IST
ಅಕ್ಷರ ಗಾತ್ರ
ADVERTISEMENT
""

ನವದೆಹಲಿ : 2019-20ನೇ ಹಣಕಾಸು ವರ್ಷದ ಜನವರಿಯಿಂದ ಮಾರ್ಚ್‌ ಅವಧಿಯ ನಾಲ್ಕನೇ ತ್ರೈಮಾಸಿಕದಲ್ಲಿ ಆರ್ಥಿಕ ವೃದ್ಧಿ ದರವು (ಜಿಡಿಪಿ) ಶೇ 3.1ರಷ್ಟು ನಿಧಾನಗೊಂಡಿದೆ.

ದಶಕದ ಹಿಂದಿನ ಜಾಗತಿಕ ಹಣಕಾಸು ಬಿಕ್ಕಟ್ಟಿನ ನಂತರದ ಅತ್ಯಂತ ನಿಧಾನ ಗತಿಯ ಪ್ರಗತಿ ಇದಾಗಿದೆ. ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯಲ್ಲಿ ಮಾರ್ಚ್‌ ತ್ರೈಮಾಸಿಕದ ಕೊನೆಯಲ್ಲಿ ಲಾಕ್‌ಡೌನ್‌ ಜಾರಿಗೆ ತರಲಾಗಿತ್ತು. ಅದರ ಪರಿಣಾಮವು ಈಗಾಗಲೇ ಕಂಡು ಬಂದಿದೆ. ಕೋವಿಡ್‌ ಪಿಡುಗು ನಿಯಂತ್ರಣಕ್ಕೆ ದೇಶದಾದ್ಯಂತ ವಿಧಿಸಿರುವ ದಿಗ್ಬಂಧನವು ಜಿಡಿಪಿ ಮೇಲೆ ಬೀರಿರುವ ವ್ಯತಿರಿಕ್ತ ಪರಿಣಾಮದ ನೈಜ ಚಿತ್ರಣವು ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್‌– ಜೂನ್‌) ಪ್ರತಿಫಲನಗೊಳ್ಳಲಿದೆ.

ತಯಾರಿಕೆಯು ಶೇ 1.4ರಷ್ಟು, ನಿರ್ಮಾಣ ವಲಯದಲ್ಲಿನ ಪ್ರಗತಿ ಶೇ 2.2ರಷ್ಟು ಕುಸಿತ ದಾಖಲಿಸಿದೆ. ಕೃಷಿ ವಲಯ ಮಾತ್ರ ಶೇ 5.9ರಷ್ಟು ಪ್ರಗತಿ ಕಂಡಿದೆ. ಸದ್ಯಕ್ಕೆ ಲಭ್ಯ ಇರುವ ಅಂಕಿ ಅಂಶ ಆಧರಿಸಿ ಜಿಡಿಪಿ ಅಂದಾಜಿಸಲಾಗಿದೆ. ಈ ವಿವರ ಪರಿಷ್ಕರಣೆಗೊಳ್ಳಲಿದೆ ಎಂದು ಸಾಂಖ್ಯಿಕ ಮತ್ತು ಕಾರ್ಯಕ್ರಮ ಜಾರಿ ಸಚಿವಾಲಯವು ಮಾಹಿತಿ ನೀಡಿದೆ.

ವಾರ್ಷಿಕ ವೃದ್ಧಿ: 2019–20ನೇ ಹಣಕಾಸು ವರ್ಷದ ವೃದ್ಧಿ ದರವು ಶೇ 4.2ರಷ್ಟಾಗಿದ್ದು, ಇದು 11 ವರ್ಷಗಳಲ್ಲಿನ ಅತ್ಯಂತ ನಿಧಾನ ಗತಿಯ ಪ್ರಗತಿಯಾಗಿದೆ. ಇದು ಕೋವಿಡ್‌ ಪಿಡುಗಿನ ಮುಂಚೆ ಸರ್ಕಾರ ಅಂದಾಜಿಸಿದ್ದ ಶೇ 5ಕ್ಕಿಂತ ಕಡಿಮೆ ಇದೆ.

ಜಿಡಿಪಿಯಲ್ಲಿ ಶೇ 55ರಷ್ಟು ಪಾಲು ಹೊಂದಿರುವ ಸೇವಾ ವಲಯ ಮತ್ತು ತಯಾರಿಕೆ ವಲಯವು ಲಾಕ್‌ಡೌನ್‌ನಿಂದಾಗಿ ತೀವ್ರವಾಗಿ ಬಾಧಿತವಾಗಿವೆ. ಹೀಗಾಗಿ ಆರ್ಥಿಕ ಬೆಳವಣಿಗೆ ಮೇಲೆ ತೀಕ್ಷ್ಣ ಸ್ವರೂಪದ ವ್ಯತಿರಿಕ್ತ ಪರಿಣಾಮ ಕಂಡು ಬಂದಿದೆ.

ವಿತ್ತೀಯ ಕೊರತೆ ಹೆಚ್ಚಳ: ಆರ್ಥಿಕ ವೃದ್ಧಿ ದರದ ಪ್ರಗತಿ ನಿಧಾನಗೊಂಡಿರುವುದರಿಂದ ವಿತ್ತೀಯ ಕೊರತೆ ಗುರಿ ಸಾಧಿಸುವುದು ಕಷ್ಟವಾಗಲಿದೆ. ಸರ್ಕಾರದ ವೆಚ್ಚ ಮತ್ತು ವರಮಾನ ನಡುವಣ ವ್ಯತ್ಯಾಸವಾಗಿರುವ ವಿತ್ತೀಯ ಕೊರತೆಯು 2019–20ನೇ ಹಣಕಾಸು ವರ್ಷದಲ್ಲಿ ಜಿಡಿಪಿಯ ಶೇ 4.59ಕ್ಕೆ ಏರಿಕೆಯಾಗಲಿದೆ. ಬಜೆಟ್‌ನಲ್ಲಿ ಶೇ 3.8ರಷ್ಟಕ್ಕೆ ಗುರಿ ನಿಗದಿಪಡಿಸಲಾಗಿತ್ತು.

ಮೂಲ ಸೌಕರ್ಯ ವಲಯದ ಪ್ರಗತಿ ಕುಸಿತ

ಎಂಟು ಮೂಲ ಸೌಕರ್ಯ ವಲಯಗಳ ಉತ್ಪಾದನೆಯು ವರ್ಷದ ಹಿಂದಿನ ಮಟ್ಟಕ್ಕೆ ಹೋಲಿಸಿದರೆ ಏಪ್ರಿಲ್‌ನಲ್ಲಿ ಶೇ 38.1ಕ್ಕೆ ಕುಸಿದಿದೆ.

ಕಲ್ಲಿದ್ದಲು, ಕಚ್ಚಾ ತೈಲ, ವಿದ್ಯುತ್‌ ಸೇರಿದಂತೆ 8 ಮೂಲ ಸೌಕರ್ಯ ವಲಯಗಳ ಉತ್ಪಾದನೆಯು ದೇಶದ ಕೈಗಾರಿಕಾ ಉತ್ಪಾದನೆಯಲ್ಲಿ ಶೇ 40ರಷ್ಟು ಪಾಲು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT