ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆ ದರದತ್ತ ಶುಂಠಿ ಬೆಳೆ

ಪ್ರತಿ ಕ್ವಿಂಟಲ್‌ಗೆ ₹ 9 ಸಾವಿರದಿಂದ ₹ 9,500ರಂತೆ ಮಾರಾಟ
Last Updated 18 ಮೇ 2019, 20:00 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಶುಂಠಿ ಬೆಳೆಗಾರರಿಗೆ ಈ ಬಾರಿ ಅದೃಷ್ಟ ಒಲಿದಿದೆ. ಸದ್ಯದ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಕಡೆ ಮುಖ ಮಾಡಿರುವ ಶುಂಠಿ ಪ್ರತಿ ಕ್ವಿಂಟಲ್‌ಗೆ ₹ 9 ಸಾವಿರದಿಂದ ₹ 9,500ರಂತೆ ಬಿಕರಿಯಾಗುತ್ತಿದೆ.

ಮಲೆನಾಡು ಭಾಗದಲ್ಲಿ ಸುಮಾರು ಐದು ದಶಕಗಳಿಂದ ನೆಲೆ ಕಂಡುಕೊಂಡಿರುವ ಶುಂಠಿ ಬೆಳೆಯು ವಿಪರೀತ ಮಳೆ, ಪ್ರಕೃತಿ ವಿಕೋಪ ಹಾಗೂ ಹಲವು ರೋಗಗಳಿಗೆ ತುತ್ತಾಗುತ್ತದೆ. ನಾಲ್ಕಾರು ವರ್ಷಗಳಿಗೊಮ್ಮೆ ಮಾತ್ರ ಉತ್ತಮ ಧಾರಣೆ ಲಭಿಸುತ್ತದೆ.

ಕೇರಳ, ಕೊಡಗು, ಹಾಸನ, ಮಂಡ್ಯ, ಮೈಸೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿ ಕೊಳೆ ರೋಗಕ್ಕೆ ತುತ್ತಾಗುವುದರಿಂದ ಶುಂಠಿ ಬೆಳೆಯುವ ಉತ್ಸಾಹವನ್ನು ರೈತರು ಕಳೆದುಕೊಂಡಿದ್ದರು. ಮೂರು ವರ್ಷಗಳಿಂದ ಶುಂಠಿ ಬೆಳೆಗೆ ಹೆಚ್ಚಿನ ಧಾರಣೆಯೂ ಸಿಕ್ಕಿಲ್ಲ. ಹೀಗಾಗಿ ಶುಂಠಿ ಬೆಳೆಗಾರರು ನಷ್ಟವನ್ನು ಅನುಭವಿಸಿದ್ದೇ ಹೆಚ್ಚು.

ನಿರಂತರವಾಗಿ ಬೆಲೆ ಕುಸಿತ ಕಾಣುತ್ತಿರುವ ಶುಂಠಿಯನ್ನು ಬೆಳೆಯದೇ ಇರುವುದೇ ಲೇಸು ಎಂಬ ನಿರ್ಧಾರಕ್ಕೂ ಹಲವು ರೈತರು ಬಂದಿದ್ದರು. ಆದರೆ, ಕಳೆದ ಬೇಸಿಗೆಯಲ್ಲಿ ಹಸಿ ಶುಂಠಿ ಕ್ವಿಂಟಲ್ ಒಂದಕ್ಕೆ ದಿಢೀರನೆ ₹ 8 ಸಾವಿರಕ್ಕೆ ಏರಿ ರೈತರ ಮೊಗದಲ್ಲಿ ನಗು ಮೂಡಿಸಿತ್ತು. ಒಂದೇ ವಾರದಲ್ಲಿ ₹ 3 ಸಾವಿರಕ್ಕೆ ಕುಸಿದು ಮತ್ತೆ ಮೇಲೇರಿರಲಿಲ್ಲ. ಬೆಲೆ ಇನ್ನೂ ಏರಲಿದೆ ಎಂಬ ಸೂಚನೆ ದೊರಕಿದ ಕಾರಣಕ್ಕೆ ಹೆಚ್ಚಿನ ರೈತರು ಶುಂಠಿ ಬೆಳೆಯ ಆರೈಕೆಯಲ್ಲಿ ಮಗ್ನರಾಗಿದ್ದಾರೆ.

ಶುಂಠಿ ಮಡಿಯೊಳಗಿನ ಮಣ್ಣಲ್ಲಿ ಹದವಾಗಿ ಉಳಿದ ಬೆಳೆಯನ್ನು ಹಾಗೆಯೇ ಉಳಿಸಿಕೊಂಡು ಉತ್ತಮ ಬೆಲೆಗೆ ಮಾರಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಶೇ 70ರಷ್ಟು ಭಾಗದಲ್ಲಿ ಬೆಳೆದ ಬೆಳೆಯನ್ನು ಈಗಾಗಲೇ ಕಡಿಮೆ ಬೆಲೆಗೆ ಮಾರಾಟ ಮಾಡಿರುವ ರೈತರು ದಿಢೀರನೆ ಶುಂಠಿ ಬೆಲೆ ಹೆಚ್ಚಾಗಿರುವುದರಿಂದ ಬೇಸರಗೊಂಡಿದ್ದಾರೆ.

ಕೇರಳದಲ್ಲಿ ಸುರಿದ ಮಹಾಮಳೆಗೆ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಶುಂಠಿ ಬೆಳೆ ಮಹಾಕಾಳಿ ರೋಗಕ್ಕೆ ತುತ್ತಾಗಿದೆ. ಉತ್ಪಾದನೆ ಕಡಿಮೆ ಇರುವ ಕಾರಣ ಬೇಡಿಕೆ ಹೆಚ್ಚಾಗಿದೆ. ಶುಂಠಿ ಫಸಲನ್ನು ಉಳಿಸಿಕೊಂಡ ರೈತರಿಗೆ ಬಂಪರ್ ಬೆಲೆ ಲಭಿಸಿದೆ ಎಂಬ ಅಭಿಪ್ರಾಯ ಬೆಳೆಗಾರರಿಂದ ವ್ಯಕ್ತವಾಗಿದೆ.

‘ಹಿಂದೆ ಇದ್ದ ಆತಂಕ ಈಗಿಲ್ಲ’

‘ತಾಲ್ಲೂಕು ವ್ಯಾಪ್ತಿಯಲ್ಲಿ 65 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಶುಂಠಿ ಬೆಳೆಯಲಾಗಿದೆ. ಖುಷ್ಕಿ (ಒಣ ಭೂಮಿ) ಪ್ರದೇಶ ಶುಂಠಿ ಬೆಳೆಗೆ ಉತ್ತಮವಾಗಿದ್ದು, ಬಗರ್‌ಹುಕುಂ ಸಾಗುವಳಿಯ ಸುಮಾರು 100 ಹೆಕ್ಟೇರ್ ಪ್ರದೇಶಕ್ಕಿಂತ ಹೆಚ್ಚು ವಿಸ್ತೀರ್ಣದಲ್ಲಿ ಶುಂಠಿ ಬೆಳೆಯಲಾಗಿದೆ. ಶುಂಠಿ ಬೆಳೆಯುವುದರಿಂದ ಹೆಚ್ಚಿನ ಲಾಭ ಮಾಡಿಕೊಳ್ಳಬಹುದು. ಈ ಬೆಳೆಗೆ ಹಿಂದೆ ಇದ್ದ ಆತಂಕ ಈಗಿಲ್ಲ’ ಎನ್ನುತ್ತಾರೆ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕಟಿ.ಸಿದ್ದಲಿಂಗೇಶ್ವರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT