ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಡಿಜಿಟಲೀಕರಣಕ್ಕೆ ಗೂಗಲ್‌ ₹75,000 ಕೋಟಿ ಹೂಡಿಕೆ: ಸುಂದರ್‌ ಪಿಚೈ

Last Updated 13 ಜುಲೈ 2020, 19:53 IST
ಅಕ್ಷರ ಗಾತ್ರ

ನವದೆಹಲಿ: ಇಂಟರ್‌ನೆಟ್‌ನ ದೈತ್ಯ ಸಂಸ್ಥೆ ಗೂಗಲ್‌, ಭಾರತದಲ್ಲಿ ಮುಂದಿನ ಐದರಿಂದ ಏಳು ವರ್ಷಗಳಲ್ಲಿ ₹ 75 ಸಾವಿರ ಕೋಟಿ ಮೊತ್ತದ ಬಂಡವಾಳ ಹೂಡಿಕೆ ಮಾಡಲಿದೆ.

’ಈ ಬಂಡವಾಳ ಹೂಡಿಕೆಯು ಭಾರತದ ಭವಿಷ್ಯ ಮತ್ತು ಅದರ ಡಿಜಿಟಲ್‌ ಆರ್ಥಿಕತೆ ಕುರಿತು ಕಂಪನಿ ಹೊಂದಿರುವ ದೃಢ ವಿಶ್ವಾಸದ ಪ್ರತೀಕವಾಗಿದೆ. ಡಿಜಿಟಲ್‌ ತಂತ್ರಜ್ಞಾನ ಅಳವಡಿಕೆಗೆ ವೇಗ ನೀಡುವುದು ಇದರ ಉದ್ದೇಶವಾಗಿದೆ’ ಎಂದು ಕಂಪನಿಯ ಸಿಇಒ ಆಗಿರುವ ಭಾರತದ ಸಂಜಾತ ಸುಂದರ ಪಿಚೈ ಹೇಳಿದ್ದಾರೆ.

ಸೋಮವಾರ ಇಲ್ಲಿ ನಡೆದ ‘ಭಾರತಕ್ಕಾಗಿ ಗೂಗಲ್‌’ ವಿಡಿಯೊ ಕಾನ್ಫರನ್ಸ್‌ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು. ‘ಗೂಗಲ್‌ ಫಾರ್‌ ಇಂಡಿಯಾ ಡಿಜಿಟೈಷೇನ್‌ ಫಂಡ್‌’ ಮೂಲಕ ₹ 75 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಲಾಗುವುದು’ ಎಂದು ಹೇಳಿದ್ದಾರೆ.

4 ವಲಯಗಳಲ್ಲಿ ಹೂಡಿಕೆ
ನಾಲ್ಕು ಪ್ರಮುಖ ವಲಯಗಳಲ್ಲಿ ಈ ಹೂಡಿಕೆ ಇರಲಿದೆ.ಪ್ರತಿಯೊಬ್ಬ ಭಾರತೀಯನಿಗೆ ಆತನ ಮಾತೃಭಾಷೆಯಲ್ಲಿ ಮಾಹಿತಿಯನ್ನು ಸುಲಭವಾಗಿ ಕೈಗೆಟುಕುವಂತೆ ಮಾಡುವುದು. ಭಾರತದ ವಿಶಿಷ್ಟ ಅಗತ್ಯಗಳನ್ನು ಪೂರೈಸಲು ಹೊಸ ಉತ್ಪನ್ನ ಮತ್ತು ಸೇವೆಗಳನ್ನು ಒದಗಿಸುವುದು. ಡಿಜಿಟಲ್‌ ಬದಲಾವಣೆ ಅಳವಡಿಸಿಕೊಳ್ಳಲು ಉದ್ದಿಮೆಗಳನ್ನು ಸಶಕ್ತಗೊಳಿಸುವುದು ಮತ್ತು ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಕೃಷಿ ಕ್ಷೇತ್ರದಲ್ಲಿ ಸಮಾಜದ ಒಳಿತಿಗಾಗಿ ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನದ ಬಳಕೆ ಹೆಚ್ಚಿಸಲು ಈ ಬಂಡವಾಳ ಹೂಡಿಕೆಯಾಗಲಿದೆ ಎಂದು ಪಿಚೈ ಹೇಳಿದ್ದಾರೆ.

ಷೇರು ಹೂಡಿಕೆ, ಪಾಲುದಾರಿಕೆ ಒಪ್ಪಂದ , ಡಿಜಿಟಲ್‌ ಮೂಲಸೌಕರ್ಯಗಳ ಅಭಿವೃದ್ಧಿ ಯೋಜನೆಗಳಲ್ಲಿ ಈ ಹೂಡಿಕೆ ನಡೆಯಲಿದೆ.

ಮೋದಿ, ಪಿಚೈ ಮಾತುಕತೆ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಸುಂದರ್‌ ಪಿಚೈ ಜತೆ ವರ್ಚುವಲ್‌ ಸಂವಾದ ನಡೆಸಿದರು.

ರೈತರು ಹಾಗೂ ಯುವ ಸಮುದಾಯದ ಬದುಕು ಬದಲಿಸಲು ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳುವ ಸಾಧ್ಯತೆ, ದತ್ತಾಂಶ ಸುರಕ್ಷತೆ ಮತ್ತು ಖಾಸಗಿತನದ ಬಗ್ಗೆ ವ್ಯಕ್ತವಾಗುತ್ತಿರುವ ಕಳವಳ ಬಗ್ಗೆ ಉಭಯತರು ಚರ್ಚೆ ನಡೆಸಿದರು. ‘ಇಂದು ಪಿಚೈ ಜತೆಗೆ ಫಲಪ್ರದವಾದ ಸಂವಾದ ನಡೆಸಿದೆ. ಹಲವು ವಿಚಾರಗಳ ಬಗ್ಗೆ ನಾವಿಬ್ಬರೂ ವಿಸ್ತೃತ ಚರ್ಚೆ ನಡೆಸಿದೆವು’ ಎಂದು ಪ್ರಧಾನಿ ಟ್ವೀಟ್‌ ಮಾಡಿದ್ದಾರೆ.

ಹೂಡಿಕೆಗೆ ಗುರುತಿಸಿರುವ ನಾಲ್ಕು ವಲಯಗಳು
1. ಪ್ರಾದೇಶಿಕ ಭಾಷೆಗಳಲ್ಲಿ ಸುಲಭ ಮಾಹಿತಿ
2. ಹೊಸ ಉತ್ಪನ್ನ, ಸೇವೆಗಳ ಅಭಿವೃದ್ಧಿ
3. ಉದ್ಯಮ, ವಹಿವಾಟು ಡಿಜಿಟಲೀಕರಣಕ್ಕೆ ಒತ್ತು
4. ಸಮುದಾಯದ ಒಳಿತಿಗೆ ತಂತ್ರಜ್ಞಾನದ ಸದ್ಬಳಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT