ನವದೆಹಲಿ: ಕಡಿಮೆ ಕಸ್ಟಮ್ಸ್ ಸುಂಕ ಜಾರಿಯಲ್ಲಿದ್ದ ವೇಳೆ ಆಮದು ಮಾಡಿಕೊಂಡಿರುವ 30 ಲಕ್ಷ ಟನ್‌ನಷ್ಟು ಖಾದ್ಯ ತೈಲ ದಾಸ್ತಾನಿದೆ. ಹಾಗಾಗಿ, ಖಾದ್ಯ ತೈಲ ಕಂಪನಿಗಳು ಚಿಲ್ಲರೆ ಮಾರಾಟ ದರವನ್ನು ಏರಿಕೆ ಮಾಡಬಾರದು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.
ದೇಶೀಯ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕಳೆದ ವಾರ ಸರ್ಕಾರವು ಕಚ್ಚಾ ಹಾಗೂ ಸಂಸ್ಕರಿಸಿದ ತಾಳೆ, ಸೂರ್ಯಕಾಂತಿ ಹಾಗೂ ಸೋಯಾಬಿನ್ ಎಣ್ಣೆ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಹೆಚ್ಚಿಸಿತ್ತು. ಹಾಗಾಗಿ, ಕಂಪನಿಗಳು ಚಿಲ್ಲರೆ ದರ ಏರಿಕೆ ಮಾಡುವ ಸಾಧ್ಯತೆ ಇರುವುದರಿಂದ ಈ ನಿರ್ದೇಶನ ನೀಡಿದೆ.
ಸದ್ಯ ದಾಸ್ತಾನು ಇರುವ ಎಣ್ಣೆಯು 40ರಿಂದ 45 ದಿನದವರೆಗೆ ದೇಶೀಯ ಬೇಡಿಕೆಗೆ ಸಾಕಾಗಲಿದೆ ಎಂದು ಹೇಳಿದೆ.
ಮಂಗಳವಾರ ಕೇಂದ್ರ ಆಹಾರ ಸಚಿವ ಸಂಜೀವ್ ಚೋಪ್ರಾ ಅವರು, ಭಾರತೀಯ ಎಣ್ಣೆ ಗಿರಣಿ ಮಾಲೀಕರ ಸಂಘ (ಎಸ್‌ಇಎ), ಭಾರತೀಯ ಸಸ್ಯಜನ್ಯ ತೈಲ ಉತ್ಪಾದಕರ ಸಂಘ ಹಾಗೂ ಸೋಯಾಬಿನ್ ಎಣ್ಣೆ ಉತ್ಪಾದಕರ ಸಂಘದ ಪ್ರತಿನಿಧಿಗಳ ಜೊತೆಗೆ ಈ ಕುರಿತು ಸಭೆ ಕೂಡ ನಡೆಸಿದ್ದಾರೆ.
ದಾಸ್ತಾನಿರುವ ಎಣ್ಣೆಯು ಮುಗಿಯುವವರೆಗೂ ಹಾಲಿ ದರದಲ್ಲಿಯೇ ಮಾರಾಟ ಮಾಡಲಾಗುವುದು. ಬಳಿಕ ಸಂಘದ ಸದಸ್ಯರ ಬಳಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವ ಬಗ್ಗೆ ಕಂಪನಿಗಳು ಭರವಸೆ ನೀಡಿವೆ ಎಂದು ಸಚಿವಾಲಯ ತಿಳಿಸಿದೆ.
ದೇಶೀಯ ಬೇಡಿಕೆಗೆ ಅನುಗುಣವಾಗಿ ಭಾರತವು ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ದೇಶೀಯ ಎಣ್ಣೆಕಾಳು ಬೆಳೆಗಾರರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕಸ್ಟಮ್ಸ್ ಸುಂಕದಲ್ಲಿ ಏರಿಕೆ ಮಾಡಿದೆ. ಅಕ್ಟೋಬರ್‌ಗೆ ಸೋಯಾಬಿನ್ ಮತ್ತು ಶೇಂಗಾ ಬೆಳೆಯು ಕಟಾವಿಗೆ ಬರುತ್ತದೆ ಎಂದು ತಿಳಿಸಿದೆ.
ಭಾರತವು ಮಲೇಷ್ಯಾ ಮತ್ತು ಇಂಡೊನೇಷ್ಯಾದಿಂದ ತಾಳೆ ಎಣ್ಣೆ, ಬ್ರೆಜಿಲ್ ಮತ್ತು ಅರ್ಜೆಂಟೀನಾದಿಂದ ಸೋಯಾಬಿನ್, ರಷ್ಯಾ ಮತ್ತು ಉಕ್ರೇನ್‌ನಿಂದ ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತದೆ.