ಪೆಟ್ರೋಲ್, ಡೀಸೆಲ್: ಸುಂಕ ತಗ್ಗಿಸಿದರೂ ಆದಾಯಕ್ಕಿಲ್ಲ ಕೊರತೆ

ನವದೆಹಲಿ: ಆದಾಯ ಸಂಗ್ರಹದ ಗುರಿಗೆ ತೊಂದರೆ ಆಗದಂತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ಲೀಟರ್ಗೆ ₹ 8.5ರವರೆಗೆ ತಗ್ಗಿಸಲು ಸರ್ಕಾರಕ್ಕೆ ಅವಕಾಶವಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಳೆದ ಒಂಬತ್ತು ತಿಂಗಳುಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳ ಆಗುತ್ತಿದೆ. ಈಗ ಇವೆರಡರ ಮಾರುಕಟ್ಟೆ ಬೆಲೆಯು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ಇದೆ. ಕೇಂದ್ರವು ಎಕ್ಸೈಸ್ ಸುಂಕವನ್ನು ತಗ್ಗಿಸಿ, ಗ್ರಾಹಕರ ಮೇಲಿನ ಹೊರೆಯನ್ನು ಕಡಿಮೆ ಮಾಡಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ.
‘ಆಟೊಮೊಬೈಲ್ ಇಂಧನಗಳ ಮೇಲಿನ ಎಕ್ಸೈಸ್ ಸುಂಕವನ್ನು ತಗ್ಗಿಸದೆ ಇದ್ದರೆ 2021–22ನೇ ಸಾಲಿನಲ್ಲಿ (2021ರ ಏಪ್ರಿಲ್ನಿಂದ 2022ರ ಮಾರ್ಚ್ 31ರವರೆಗೆ) ₹ 4.35 ಲಕ್ಷ ಕೋಟಿ ಸಂಗ್ರಹಿಸಬಹುದು ಎಂಬುದು ನಮ್ಮ ಅಂದಾಜು. ಆದರೆ, ಈ ಬಾರಿಯ ಬಜೆಟ್ ₹ 3.2 ಲಕ್ಷ ಕೋಟಿ ಸಂಗ್ರಹಿಸುವ ಗುರಿ ಹೊಂದಿದೆ. ಹಾಗಾಗಿ, ಈ ವರ್ಷದ ಏಪ್ರಿಲ್ 1ರಂದು ಅಥವಾ ಅದಕ್ಕೂ ಮೊದಲು ಎಕ್ಸೈಸ್ ಸುಂಕವನ್ನು ಲೀಟರ್ಗೆ ₹ 8.5ರಂತೆ ಇಳಿಸಿದರೆ, ಬಜೆಟ್ನಲ್ಲಿ ಮಾಡಿರುವ ಅಂದಾಜಿನ ಪ್ರಕಾರವೇ ಆದಾಯ ಸಂಗ್ರಹ ಆಗಲಿದೆ’ ಎಂದು ಐಸಿಐಸಿಐ ಸೆಕ್ಯುರಿಟೀಸ್ ಹೇಳಿದೆ.
ಬೇಡಿಕೆ ಹೆಚ್ಚಳ ಆಗುತ್ತಿರುವುದು ಹಾಗೂ ಹಣದುಬ್ಬರ ಹೆಚ್ಚಳ ಆಗಬಹುದು ಎಂಬ ಆತಂಕದ ಕಾರಣದಿಂದಾಗಿ ಸರ್ಕಾರವು ಎಕ್ಸೈಸ್ ಸುಂಕ ತಗ್ಗಿಸಬಹುದು ಎಂಬ ಆಶಾಭಾವನೆಯನ್ನು ಐಸಿಐಸಿಐ ಸೆಕ್ಯುರಿಟೀಸ್ ವ್ಯಕ್ತಪಡಿಸಿದೆ. ಆದರೆ, ಸುಂಕ ತಗ್ಗಿಸುವಿಕೆಯು ₹ 8.5ರಷ್ಟು ಇರಲಿಕ್ಕಿಲ್ಲ ಎಂದೂ ಹೇಳಿದೆ.
2020ರ ಮಾರ್ಚ್ ಹಾಗೂ ಮೇ ತಿಂಗಳ ನಡುವಿನ ಅವಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ಕ್ರಮವಾಗಿ ₹ 13 ಹಾಗೂ ₹ 16ರಷ್ಟು ಹೆಚ್ಚಿಸಲಾಯಿತು. ಈಗ ಲೀಟರ್ ಪೆಟ್ರೋಲ್ಗೆ ₹ 32.9ರಷ್ಟು, ಡೀಸೆಲ್ಗೆ ₹ 31.8ರಷ್ಟು ಎಕ್ಸೈಸ್ ಸುಂಕ ವಿಧಿಸಲಾಗುತ್ತಿದೆ.
ಇದನ್ನೂ ಓದಿ...
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಕಾರಣ ನೀಡಿದ ಧರ್ಮೇಂದ್ರ ಪ್ರಧಾನ್
ಪೆಟ್ರೋಲ್–ಡೀಸೆಲ್ ದರ ಏರಿಕೆ ಬಗ್ಗೆ ಜನ ಏನಂತಾರೆ?
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.