ಬುಧವಾರ, ಜನವರಿ 19, 2022
27 °C

ಪೆಟ್ರೋಲ್, ಡೀಸೆಲ್‌ ಮೇಲಿನ ಎಕ್ಸೈಸ್‌ ಸುಂಕ ಸಂಗ್ರಹ ಕಳೆದ ವರ್ಷಕ್ಕಿಂತ ದುಪ್ಪಟ್ಟು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಎಕ್ಸೈಸ್‌ ಸುಂಕ ಸಂಗ್ರಹವು 2019–20ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ 2020–21ನೇ ಹಣಕಾಸು ವರ್ಷದಲ್ಲಿ ಎರಡು ಪಟ್ಟು ಹೆಚ್ಚಾಗಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್‌ ಚೌಧರಿ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.

2019–20ರಲ್ಲಿ ಎಕ್ಸೈಸ್‌ ಸುಂಕದಿಂದ ₹ 1.78 ಲಕ್ಷ ಕೋಟಿ ವರಮಾನ ಸಂಗ್ರಹಿಸಲಾಗಿತ್ತು. ಇದು 2020–21ರಲ್ಲಿ ₹ 3.72 ಲಕ್ಷ ಕೋಟಿಗಳಿಗೆ ಏರಿಕೆ ಆಗಿದೆ ಎಂದು ಅವರು ತಿಳಿಸಿದ್ದಾರೆ.

ಪೆಟ್ರೋಲ್‌, ಡೀಸೆಲ್‌ ಮೇಲಿನ ತೆರಿಗೆ ಹೆಚ್ಚಳ ಮಾಡಿರುವುದೇ ಸುಂಕ ಸಂಗ್ರಹದಲ್ಲಿ ಹೆಚ್ಚಳ ಆಗಲು ಕಾರಣ. 2019ರಲ್ಲಿ ಪೆಟ್ರೋಲ್‌ ಮೇಲಿನ ಎಕ್ಸೈಸ್‌ ಸುಂಕ ಪ್ರತಿ ಲೀಟರಿಗೆ ₹ 19.98ರಷ್ಟು ಇತ್ತು. ಕೇಂದ್ರ ಸರ್ಕಾರವು ಕಳೆದ ವರ್ಷ ಇದನ್ನು ಪ್ರತಿ ಲೀಟರಿಗೆ ₹ 32.98ಕ್ಕೆ ಹೆಚ್ಚಿಸಿತು. ಅದೇ ರೀತಿ ಡೀಸೆಲ್‌ ಮೇಲಿನ ಎಕ್ಸೈಸ್‌ ಸುಂಕವನ್ನು ಸಹ ಪ್ರತಿ ಲೀಟರಿಗೆ ₹ 15.83 ರಷ್ಟು ಇದ್ದಿದ್ದು ₹ 31.83ಕ್ಕೆ ಏರಿಕೆ ಆಯಿತು. ಆ ಬಳಿಕ ಈ ವರ್ಷದ ಬಜೆಟ್‌ನಲ್ಲಿ ಪೆಟ್ರೋಲ್‌ ಮೇಲಿನ ಸುಂಕವನ್ನು ಪ್ರತಿ ಲೀಟರಿಗೆ ₹ 32.90 ಮತ್ತು ಡೀಸೆಲ್‌ ಮೇಲಿನ ಸುಂಕವನ್ನು ಪ್ರತಿ ಲೀಟರಿಗೆ ₹ 31.80ಕ್ಕೆ ಅಲ್ಪ ಇಳಿಕೆ ಮಾಡಲಾಯಿತು.

ದೇಶದಾದ್ಯಂತ ಪೆಟ್ರೋಲ್‌ ಮತ್ತು ಡೀಸೆಲ್ ದರಗಳು ಗರಿಷ್ಠ ಮಟ್ಟಕ್ಕೆ ತಲುಪಿದ್ದರಿಂದ ಕೇಂದ್ರ ಸರ್ಕಾರವು ನವೆಂಬರ್‌ನಲ್ಲಿ ಪೆಟ್ರೋಲ್‌ ಮೇಲಿನ ಸುಂಕವನ್ನು ಲೀಟರಿಗೆ ₹ 5 ಮತ್ತು ಡೀಸೆಲ್‌ ಮೇಲಿನ ಸುಂಕವನ್ನು ಲೀಟರಿಗೆ ₹ 10ರಷ್ಟು ಇಳಿಕೆ ಮಾಡಿತು. ಇದರಿಂದಾಗಿ ಸದ್ಯ ಪೆಟ್ರೋಲ್‌ ಮೇಲಿನ ಎಕ್ಸೈಸ್‌ ಸುಂಕ ಲೀಟರಿಗೆ ₹ 27.90 ಮತ್ತು ಡೀಸೆಲ್‌ ಮೇಲಿನ ಎಕ್ಸೈಸ್‌ ಸುಂಕ ಲೀಟರಿಗೆ ₹ 21.80 ಇದೆ.

2020–21ನೇ ಹಣಕಾಸು ವರ್ಷದಲ್ಲಿ ಎಕ್ಸೈಸ್‌ ಸುಂಕದಿಂದ ಸಂಗ್ರಹ ಆಗಿರುವ ಒಟ್ಟಾರೆ ಮೊತ್ತದಲ್ಲಿ ರಾಜ್ಯಗಳಿಗೆ ₹ 19,972 ಕೋಟಿ ನೀಡಲಾಗಿದೆ ಎಂದು ಚೌಧರಿ ತಿಳಿಸಿದ್ದಾರೆ. ಕೇಂದ್ರವು ಸಂಗ್ರಹಿಸುವ ಸುಂಕದಲ್ಲಿ ಮೂಲ ಎಕ್ಸೈಸ್‌ ಸುಂಕದ ಪಾಲು ಮಾತ್ರವೇ ರಾಜ್ಯಗಳಿಗೆ ಸಿಗುತ್ತದೆ. ಸದ್ಯ ಲೀಟರಿಗೆ ಪೆಟ್ರೋಲ್‌ ಮೇಲಿನ ಮೂಲ ಎಕ್ಸೈಸ್‌ ಸುಂಕ ₹ 1.40 ಮತ್ತು ಡೀಸೆಲ್‌ ಮೇಲಿನ ಮೂಲ ಎಕ್ಸೈಸ್‌ ಸುಂಕ ಲೀಟರಿಗೆ ₹ 1.80 ಇದೆ.

ಅಂಕಿ–ಅಂಶ

ಸುಂಕ ಸಂಗ್ರಹ ವಿವರ (₹ ಲಕ್ಷ ಕೋಟಿಗಳಲ್ಲಿ)

2018–19; 2.13

2019–20; 1.78

2020–21; 3.72

 

ಎಕ್ಸೈಸ್‌ ಸುಂಕ (ಪ್ರತಿ ಲೀಟರಿಗೆ)

ಪೆಟ್ರೋಲ್‌; ₹ 27.90

ಡೀಸೆಲ್‌; ₹ 21.80

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು