ನವದೆಹಲಿ: ಉತ್ಪಾದನೆ ಮತ್ತು ರೈತರ ಆದಾಯ ಹೆಚ್ಚಿಸಲು ಜಾರ್ಖಂಡ್ ಮತ್ತು ಛತ್ತೀಸ್‌ಗಢದ ನಕ್ಸಲ್‌ಪೀಡಿತ ಜಿಲ್ಲೆಗಳು ಹಾಗೂ ಬುಡಕಟ್ಟು ಸಮುದಾಯದವರು ಇರುವ ಪ್ರದೇಶದಲ್ಲಿ ಬೇಳೆಕಾಳು ಕೃಷಿಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಆಮದು ಪ್ರಮಾಣ ತಗ್ಗಿಸಲು ಪ್ರಾಯೋಗಿಕ ಯೋಜನೆಯ ಭಾಗವಾಗಿ ಸಾಂಪ್ರದಾಯಕವಲ್ಲದ ಪ್ರದೇಶದಲ್ಲಿ ಬೇಳೆಕಾಳು ಬೆಳೆಯಲಾಗುವುದು. ಈ ಯೋಜನೆ ಯಶಸ್ವಿಯಾದರೆ ನಂತರ ಇದನ್ನು ದೇಶದಾದ್ಯಂತ ವಿಸ್ತರಿಸಲಿದೆ. ರಾಷ್ಟ್ರೀಯ ಸಹಕಾರ ಗ್ರಾಹಕರ ಮಹಾಮಂಡಳ (ಎನ್‌ಸಿಸಿಎಫ್) ಯೋಜನೆ ಅನುಷ್ಠಾನಕ್ಕಾಗಿ ಜಾರ್ಖಂಡ್‌ನಲ್ಲಿ 4 ಮತ್ತು ಛತ್ತೀಸ್‌ಗಢದಲ್ಲಿ 5 ಜಿಲ್ಲೆಗಳನ್ನು ಪ್ರಾಯೋಗಿಕ ಯೋಜನೆಯ ಭಾಗವಾಗಿ ಗುರುತಿಸಿದೆ.
‘ಈ ಆಯ್ದ ಪ್ರದೇಶಗಳಲ್ಲಿ ತೊಗರಿ ಮತ್ತು ಉದ್ದುವನ್ನು ಮುಂಗಾರು ಋತುವಿನಲ್ಲಿ ಉತ್ಪಾದನೆ ಮಾಡಲು ಉತ್ತೇಜಿಸುತ್ತಿದ್ದೇವೆ’ ಎಂದು ಎನ್‌ಸಿಸಿಎಫ್ ವ್ಯವಸ್ಥಾಪಕ ನಿರ್ದೇಶಕ ಅನಿಸ್ ಜೋಸೆಫ್ ಚಂದ್ರ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಪ್ರಸಕ್ತ ಮಂಗಾರು ಋತುವಿಗೆ ಹೈಬ್ರಿಡ್ ಬೀಜಗಳನ್ನು ವಿತರಿಸಲಾಗಿದೆ. ರೈತರು ತಮ್ಮ ಉತ್ಪನ್ನಗಳನ್ನು ಸಹಕಾರಿ ಸಂಸ್ಥೆಗೆ ಮಾರಾಟ ಮಾಡಲು ಎನ್‌ಸಿಸಿಎಫ್‌ನ ಇ-ಸಂಯುಕ್ತಿ ಪೋರ್ಟಲ್‌ನಲ್ಲಿ ಮುಂಗಡವಾಗಿ ನೋಂದಾಯಿಸಲು ಪ್ರೋತ್ಸಾಹಿಸಲಾಗುತ್ತಿದೆ. ಎನ್‌ಸಿಸಿಎಫ್ ಕೊಯ್ಲು ಮಾಡಿದ ಬೇಳೆಕಾಳುಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್‌ಪಿ) ಸಂಗ್ರಹಿಸುತ್ತದೆ. ಆದರೆ ಮಾರುಕಟ್ಟೆ ದರವು ಎಂಎಸ್‌ಪಿಗಿಂತ ಹೆಚ್ಚಿದ್ದರೆ ರೈತರು ಖಾಸಗಿ ವ್ಯಾಪಾರಿಗಳಿಗೆ ಮಾರಾಟ ಮಾಡಬಹುದಾಗಿದೆ ಎಂದು ಹೇಳಿದ್ದಾರೆ.