ನವದೆಹಲಿ: ದೇಶದ ದುಡಿಯುವ ವರ್ಗದಲ್ಲಿ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರ ಅಂಗವಾಗಿ 14ರಿಂದ 18 ವಯೋಮಾನದ ಹೆಣ್ಣುಮಕ್ಕಳಿಗೆ ಸಾಂಪ್ರದಾಯಿಕವಲ್ಲದ ಹುದ್ದೆಗಳ ಬಗ್ಗೆ ತರಬೇತಿ ನೀಡುವ ಸಂಬಂಧ ಪ್ರಾಯೋಗಿಕ ಯೋಜನೆಯ ಅನುಷ್ಠಾನಕ್ಕೆ ಮುಂದಾಗಿದೆ.
ಶಿಕ್ಷಣದ ಜೊತೆಯಲ್ಲಿಯೇ ಡಿಜಿಟಲ್ ಕೌಶಲ, ಡಿಜಿಟಲ್ ಮಾರ್ಕೆಟಿಂಗ್ ಹಾಗೂ ಸಾಮಾನ್ಯ ವ್ಯಕ್ತಿತ್ವ ಕುರಿತು ತರಬೇತಿ ನೀಡಲಾಗುತ್ತದೆ. ದುಡಿಯುವ ವಲಯದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ.
ಹೆಣ್ಣುಮಕ್ಕಳು ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ರೂಪಿಸಿರುವ ಈ ವಿಶೇಷ ಯೋಜನೆಯಡಿ, ಹತ್ತಿರದ ಶಾಲೆಗಳು ಮತ್ತು ಮನೆಗಳಲ್ಲಿಯೇ ತರಬೇತಿ ನೀಡಲಾಗುತ್ತದೆ.
‘ಎರಡು ಅಥವಾ ಮೂರು ವಾರದೊಳಗೆ ಈ ಯೋಜನೆಗೆ ಅಧಿಕೃತಕವಾಗಿ ಚಾಲನೆ ನೀಡಲಾಗುವುದು’ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಅನಿಲ್ ಮಲಿಕ್ ಬುಧವಾರ ತಿಳಿಸಿದ್ದಾರೆ.
ಆರಂಭದಲ್ಲಿ 27 ಜಿಲ್ಲೆಯಲ್ಲಿ ಈ ಯೋಜನೆ ಜಾರಿಯಾಗಲಿದೆ. ಬಳಿಕ ಹಂತ ಹಂತವಾಗಿ 218 ಜಿಲ್ಲೆಗಳಿಗೆ ಇದರ ವಿಸ್ತರಣೆಗೆ ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ದೇಶದಲ್ಲಿ ಸಾಂಪ್ರದಾಯಿಕವಲ್ಲದ ಉದ್ಯೋಗಗಳಲ್ಲಿ ದುಡಿಯುವ ಪುರುಷರು ಮತ್ತು ಮಹಿಳೆಯರ ಪ್ರಮಾಣ ಶೇ 25ಕ್ಕಿಂತಲೂ ಕಡಿಮೆಯಿದೆ.
‘ತರಬೇತಿ ಸಂಬಂಧ ಕೇಂದ್ರ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವಾಲಯದ ಜೊತೆಗೆ ಒಡಂಬಡಿಕೆಗೆ ಸಹಿ ಹಾಕಲಾಗಿದೆ. ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆಯ ತರಬೇತುದಾರರು, ಜನ ಶಿಕ್ಷಣ ಸಂಸ್ಥಾನ ಹಾಗೂ ಸರ್ಕಾರಿ ಸಂಸ್ಥೆಗಳ ಮೂಲಕ ಸೂಕ್ತ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.