ಭಾನುವಾರ, ಜೂನ್ 20, 2021
28 °C

28ಕ್ಕೆ ಜಿಎಸ್‌ಟಿ ಮಂಡಳಿ ಸಭೆ: ಕೋವಿಡ್‌ ಪರಿಕರಗಳ ಮೇಲಿನ ತೆರಿಗೆ ಕುರಿತು ಚರ್ಚೆ?

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಜಿಎಸ್‌ಟಿ ಮಂಡಳಿಯು ಇದೇ ತಿಂಗಳ 28ರಂದು ಸಭೆ ಸೇರಲಿದ್ದು, ಕೋವಿಡ್‌ಗೆ ಸಂಬಂಧಿಸಿದ ಔಷಧಗಳು, ಆಕ್ಸಿಜನ್‌ ಕಾನ್ಸನ್‌ಟ್ರೇಟರ್‌ ಮತ್ತು ಲಸಿಕೆ ಮೇಲಿನ ತೆರಿಗೆ ದರಗಳ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ.

ಪ್ರಸಕ್ತ ಹಣಕಾಸು ವರ್ಷಕ್ಕೆ ಜಿಎಸ್‌ಟಿ ವ್ಯವಸ್ಥೆಯಿಂದ ರಾಜ್ಯಗಳಿಗೆ ಆಗಲಿರುವ ವರಮಾನ ಕೊರತೆಯನ್ನು ಯಾವ ರೀತಿ ತುಂಬಿಕೊಡಬಹುದು ಎನ್ನುವುದೂ ಚರ್ಚೆಯ ಮುಖ್ಯ ವಿಷಯ ಆಗಿರುವ ಸಾಧ್ಯತೆ ಇದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ನೇತೃತ್ವದಲ್ಲಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಭೆ ನಡೆಯಲಿದೆ.

ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್‌, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಸಚಿವರು ಹಾಗು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ನಿರ್ಮಲಾ ಸೀತಾರಾಮನ್‌ ಅವರ ಕಚೇರಿಯು ಟ್ವೀಟ್‌ ಮಾಡಿದೆ.

ಕೋವಿಡ್‌–19 ಸಾಂಕ್ರಾಮಿಕದಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಢುವ ಜೀವ ಉಳಿಸುವ ಔಷಧಗಳು, ಸಾಧನಗಳು ಮತ್ತು ಉಪಕರಣಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡುವಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕಳೆದ ತಿಂಗಳು ಬೇಡಿಕೆ ಇಟ್ಟಿದ್ದರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಹ ಇದೇ ರೀತಿಯ ಬೇಡಿಕೆಯನ್ನು ಕೇಂದ್ರದ ಮುಂದಿಟ್ಟಿದ್ದರು. ಆದರೆ, ಕೋವಿಡ್ ಲಸಿಕೆ, ಔಷಧ ಹಾಗೂ ಆಮ್ಲಜನಕದ ಕಾನ್ಸನ್‌ಟ್ರೇಟರ್‌ಗಳಿಗೆ ಜಿಎಸ್‌ಟಿ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

‘ವಿನಾಯಿತಿ ನೀಡಿದರೆ, ಲಸಿಕೆ ತಯಾರಕರು ಕಚ್ಚಾ ವಸ್ತುಗಳಿಗೆ ಪಾವತಿಸಿರುವ ತೆರಿಗೆ ಸರಿದೂಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

ಸದ್ಯ, ಲಸಿಕೆಗೆ ಶೇ 5ರಷ್ಟು ತೆರಿಗೆ ಇದೆ. ಕೋವಿಡ್‌ಗೆ ಸಂಬಂಧಿಸಿದ ಔಷಧಿಗಳಿಗೆ, ಆಮ್ಲಜನಕದ ಕಾನ್ಸನ್‌ಟ್ರೇಟರ್‌ಗಳಿಗೆ ಶೇ 12ರಷ್ಟು ತೆರಿಗೆ ಇದೆ.

ಪರಿಹಾರ: ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ಬಾಕಿಯಾಗಿ ಕೆಂದ್ರ ಸರ್ಕಾರವು ಹಿಂದಿನ ಹಣಕಾಸು ವರ್ಷದಲ್ಲಿ ₹ 70 ಸಾವಿರ ಕೋಟಿ ಬಿಡುಗಡೆ ಮಾಡಿದೆ.  ವಿಶೇಷ ಸಾಲ ವ್ಯವಸ್ಥೆ ಅಡಿ ಬಿಡುಗಡೆ ಮಾಡಿರುವ ₹ 1.10 ಲಕ್ಷ ಕೋಟಿಗೂ ಹೆಚ್ಚಿನ ಮೊತ್ತ ಇದಾಗಿದೆ. ಹೀಗಿದ್ದರೂ 2020–21ಕ್ಕೆ ಕೇಂದ್ರವು ಇನ್ನೂ ₹ 63 ಸಾವಿರ ಕೋಟಿ ಮೊತ್ತವನ್ನು ರಾಜ್ಯಗಳಿಗೆ ನೀಡಬೇಕಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು