ಸೋಮವಾರ, ಜನವರಿ 18, 2021
21 °C

ನವೆಂಬರ್‌ ಜಿಎಸ್‌ಟಿ ಸಂಗ್ರಹ ₹1.04 ಲಕ್ಷ ಕೋಟಿ: ಹಣಕಾಸು ಸಚಿವಾಲಯ

ಪಿಟಿಐ Updated:

ಅಕ್ಷರ ಗಾತ್ರ : | |

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯ ಅಡಿಯಲ್ಲಿ ನವೆಂಬರ್ ತಿಂಗಳಲ್ಲಿ ₹1.04 ಲಕ್ಷ ಕೋಟಿ ಆದಾಯ ಸಂಗ್ರಹ ಆಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಅಕ್ಟೋಬರ್‌ ತಿಂಗಳಲ್ಲಿ ಜಿಎಸ್‌ಟಿ ಮೂಲಕ ಒಟ್ಟು ₹1.05 ಲಕ್ಷ ಕೋಟಿ ಆದಾಯ ಸಂಗ್ರಹ ಆಗಿತ್ತು.

ಹಾಲಿ ಹಣಕಾಸು ವರ್ಷದಲ್ಲಿ ಜಿಎಸ್‌ಟಿ ಸಂಗ್ರಹವು ಇದೇ ಮೊದಲ ಬಾರಿಗೆ ಎರಡು ತಿಂಗಳುಗಳಿಂದ ಸತತವಾಗಿ ಒಂದು ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಿನ ಮಟ್ಟದಲ್ಲಿದೆ. ಈ ಬಾರಿಯ ನವೆಂಬರ್‌ ತಿಂಗಳಲ್ಲಿ ಆಗಿರುವ ಸಂಗ್ರಹವು ಹಿಂದಿನ ವರ್ಷದ ನವೆಂಬರ್‌ ತಿಂಗಳಲ್ಲಿ ಆಗಿದ್ದ ಸಂಗ್ರಹಕ್ಕೆ ಹೋಲಿಸಿದರೆ ಶೇಕಡ 1.4ರಷ್ಟು ಹೆಚ್ಚು.

‘ನವೆಂಬರ್‌ ತಿಂಗಳಿನಲ್ಲಿ ಉತ್ಪನ್ನಗಳ ಆಮದಿನಿಂದ ಬಂದಿರುವ ಆದಾಯ ಕೂಡ ಕಳೆದ ವರ್ಷದ ನವೆಂಬರ್‌ಗೆ ಹೋಲಿಸಿದರೆ ಶೇಕಡ 4.9ರಷ್ಟು ಹೆಚ್ಚು’ ಎಂದು ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ನವೆಂಬರ್‌ ತಿಂಗಳಲ್ಲಿ ಸಂಗ್ರಹವಾಗಿರುವ ಒಟ್ಟು ಮೊತ್ತದಲ್ಲಿ ಕೇಂದ್ರ ಜಿಎಸ್‌ಟಿ ‍ಪಾಲು ₹ 19 ಸಾವಿರ ಕೋಟಿ, ರಾಜ್ಯ ಜಿಎಸ್‌ಟಿ ಪಾಲು ₹ 25 ಸಾವಿರ ಕೋಟಿ, ಏಕೀಕೃತ ಜಿಎಸ್‌ಟಿ ಪಾಲು ₹ 51 ಸಾವಿರ ಕೋಟಿ, ಸೆಸ್‌ನ ಪಾಲು ₹ 8 ಸಾವಿರ ಕೋಟಿ ಎಂದು ಸಚಿವಾಲಯ ಹೇಳಿದೆ.

ಲಾಕ್‌ಡೌನ್‌ ನಿಯಮಗಳು ಕಠಿಣವಾಗಿದ್ದ ಏಪ್ರಿಲ್‌ ತಿಂಗಳಲ್ಲಿ ಜಿಎಸ್‌ಟಿ ವ್ಯವಸ್ಥೆಯ ಮೂಲಕ ಕೇವಲ ₹ 32,172 ಕೋಟಿ ಸಂಗ್ರಹ ಆಗಿತ್ತು. ಅದಾದ ನಂತರ, ಲಾಕ್‌ಡೌನ್‌ ನಿಯಮಗಳಲ್ಲಿ ಸಡಿಲಿಕೆ ತಂದಂತೆಲ್ಲ ಜಿಎಸ್‌ಟಿ ಅಡಿ ಸಂಗ್ರಹ ಆಗುತ್ತಿರುವ ಮೊತ್ತದಲ್ಲಿ ಹೆಚ್ಚಳ ಕಂಡುಬಂದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು