ಜೂನ್ ತಿಂಗಳಲ್ಲಿ ₹ 1 ಲಕ್ಷ ಕೋಟಿಗಿಂತ ಕಡಿಮೆ ಜಿಎಸ್‌ಟಿ ಸಂಗ್ರಹ

ನವದೆಹಲಿ: ಕೋವಿಡ್ ಸಾಂಕ್ರಾಮಿಕ ರೋಗದ ಎರಡನೇ ಅಲೆ ಮತ್ತು ಅದರ ಹಿನ್ನೆಲೆಯಲ್ಲಿ ಕೈಗೊಂಡ ಲಾಕ್‌ಡೌನ್ ನಿರ್ಧಾರಗಳಿಂದ ಆರ್ಥಿಕತೆ ಮೇಲೆ ಹೊಡೆತ ಬಿದ್ದಿದ್ದು, ಎಂಟು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಜಿಎಸ್‌ಟಿ ಸಂಗ್ರಹವು ಒಂದು ಲಕ್ಷ ಕೋಟಿ ರೂ.ಗಿಂತ ಕಡಿಮೆಯಾಗಿದೆ.
ಜೂನ್‌ನಲ್ಲಿ₹ 92,849 ಕೋಟಿ ಜಿಎಸ್‌ಟಿ ಸಂಗ್ರಹವಾಗಿದ್ದು, ಇದು ಕಳೆದ 10 ತಿಂಗಳಲ್ಲೇ ಕನಿಷ್ಠಮಟ್ಟದ್ದಾಗಿದೆ. 2020 ರ ಆಗಸ್ಟ್‌ನಲ್ಲಿ 86,449 ಜಿಎಸ್‌ಟಿ ಸಂಗ್ರಹವಾಗಿತ್ತು.
ಜೂನ್ 2021ರಲ್ಲಿನ ಜಿಎಸ್‌ಟಿ ಸಂಗ್ರಹವು ದೇಶದ ಹಲವು ರಾಜ್ಯಗಳು ವಿವಿಧ ಹಂತದ ಲಾಕ್‌ಡೌನ್ ಘೋಷಿಸಿದ್ದ ಮೇ ತಿಂಗಳ ಸಂದರ್ಭ ನಡೆದಿರುವ ವಹಿವಾಟುಗಳಾಗಿವೆ.
ಲಾಕ್‌ಡೌನ್ ಮತ್ತು ವ್ಯಾಪಾರ ವಹಿವಾಟು ನಿರ್ಬಂಧಗಳ ಮೇಲೆ ಗಮನಾರ್ಹವಾದ ಸಡಿಲಿಕೆ ಆಗಿರುವುದರಿಂದ ಮುಂಬರುವ ತಿಂಗಳುಗಳಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ನಿರ್ದಿಷ್ಟ ಹೆಚ್ಚಳವನ್ನು ನಿರೀಕ್ಷಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
2021ರ ಜೂನ್ ತಿಂಗಳಲ್ಲಿ ಸಂಗ್ರಹವಾದ ಒಟ್ಟು ಜಿಎಸ್‌ಟಿ ಆದಾಯ ₹ 92,849 ಕೋಟಿಯಾಗಿದ್ದು, ಅದರಲ್ಲಿ ಕೇಂದ್ರದ ಜಿಎಸ್‌ಟಿ ₹ 16,424 ಕೋಟಿ, ರಾಜ್ಯಗಳ ಜಿಎಸ್‌ಟಿ ₹ 20,397 ಕೋಟಿ, ಇಂಟಿಗ್ರೇಟೆಡ್ ಜಿಎಸ್‌ಟಿ ₹ 49,079 ಕೋಟಿ (ಸರಕುಗಳ ಆಮದಿನಲ್ಲಿ ಸಂಗ್ರಹಿಸಿದ ₹ 25,762 ಕೋಟಿ) ಮತ್ತು ಸೆಸ್ ₹ 6,949 ಕೋಟಿ (ಸರಕುಗಳ ಆಮದಿಗೆ ಸಂಗ್ರಹಿಸಿದ ₹ 809 ಕೋಟಿ ಸೇರಿ) ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಜೂನ್ 2020 ರಲ್ಲಿ ಸಂಗ್ರಹವಾದ ₹ 90,917 ಕೋಟಿಗೆ ಹೋಲಿಸಿದರೆ ಈ ವರ್ಷ ಶೇ. 2 ರಷ್ಟು ಹೆಚ್ಚಾಗಿದೆ.
ಜಿಎಸ್‌ಟಿ ಸಂಗ್ರಹವು ಸತತ ಎಂಟು ತಿಂಗಳ ಕಾಲ ₹ 1 ಲಕ್ಷ ಕೋಟಿಗಿಂತ ಮೇಲಿತ್ತು. 2021 ರ ಮೇ ತಿಂಗಳಲ್ಲಿ ₹ 1.02 ಲಕ್ಷ ಕೋಟಿ ಮತ್ತು ಜೂನ್‌ನಲ್ಲಿ ₹ 1 ಲಕ್ಷ ಕೋಟಿಗಿಂತ ಕಡಿಮೆ ಸಂಗ್ರಹವಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.