ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿರ್ಮಲಾ ಸೀತಾರಾಮನ್‌ ಅಧ್ಯಕ್ಷತೆಯಲ್ಲಿ ಜಿಎಸ್‌ಟಿ ಮಂಡಳಿ ಸಭೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅಧ್ಯಕ್ಷತೆಯಲ್ಲಿ ಸಭೆ
Published : 8 ಸೆಪ್ಟೆಂಬರ್ 2024, 14:38 IST
Last Updated : 8 ಸೆಪ್ಟೆಂಬರ್ 2024, 14:38 IST
ಫಾಲೋ ಮಾಡಿ
Comments

ನವದೆಹಲಿ (ಪಿಟಿಐ): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಅಧ್ಯಕ್ಷತೆಯಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ 54ನೇ ಸಭೆ ಸೋಮವಾರ ನಡೆಯಲಿದೆ.

ಈ ಸಭೆಯು ರಾಜ್ಯಗಳ ಹಣಕಾಸು ಸಚಿವರನ್ನು ಒಳಗೊಂಡಿರಲಿದೆ. ವಿಮಾ ಕಂತುಗಳ ಮೇಲಿನ ತೆರಿಗೆ, ಜಿಎಸ್‌ಟಿ ಬೆಲೆ ಇಳಿಕೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವರ ಸಲಹೆಗಳ ಬಗ್ಗೆ ಮತ್ತು ಆನ್‌ಲೈನ್ ಗೇಮಿಂಗ್ ಕುರಿತ ವಾಸ್ತವಿಕ ವರದಿಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.   

ಕೇಂದ್ರ ಮತ್ತು ರಾಜ್ಯ ತೆರಿಗೆ ಅಧಿಕಾರಿಗಳನ್ನು ಒಳಗೊಂಡ (ಫಿಟ್‌ಮೆಂಟ್‌) ಸಮಿತಿಯು ಸಭೆಯಲ್ಲಿ, ಜೀವ ಮತ್ತು ಆರೋಗ್ಯ ವಿಮೆಯ ಕಂತುಗಳ ಮೇಲೆ ಮತ್ತು ಮರುವಿಮೆಯ ಮೇಲೆ ವಿಧಿಸಲಾಗಿರುವ ಜಿಎಸ್‌ಟಿ ಮತ್ತು ಅದರ ಹಣಕಾಸಿನ ಪರಿಣಾಮಗಳ ಬಗ್ಗೆ ವರದಿ ಪ್ರಸ್ತುತಪಡಿಸಲಿದೆ ಎಂದೂ ಮೂಲಗಳು ತಿಳಿಸಿವೆ. 

ಸದ್ಯ ಆರೋಗ್ಯ ವಿಮೆಯ ಕಂತುಗಳ ಮೇಲೆ ಶೇ 18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದ್ದು, ಅದರಲ್ಲಿ ಕಡಿತ ಮಾಡಬೇಕೇ ಅಥವಾ ಹಿರಿಯ ನಾಗರಿಕರಂತಹ ಕೆಲವು ವರ್ಗಗಳಿಗೆ ಮಾತ್ರ ವಿನಾಯಿತಿ ನೀಡಬೇಕೇ ಎಂಬುದನ್ನು ಸಭೆಯು ನಿರ್ಧರಿಸಲಿದೆ. ಜೀವ ವಿಮೆಯ ಕಂತುಗಳ ಮೇಲಿನ ಜಿಎಸ್‌ಟಿ ಇಳಿಸುವ ಸಂಬಂಧ ಕೂಡ ಸಭೆಯಲ್ಲಿ ಚರ್ಚೆ ಮಾಡುವ ಸಾಧ್ಯತೆ ಇದೆ.

2023–24ರ ಹಣಕಾಸು ವರ್ಷದಲ್ಲಿ ಆರೋಗ್ಯ ವಿಮೆಯ ಕಂತುಗಳ ಮೇಲಿನ ಜಿಎಸ್‌ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ₹8,262 ಕೋಟಿ ಜಿಎಸ್‌ಟಿ ಸಂಗ್ರಹಿಸಿವೆ. ಮರು ವಿಮೆಯ ಕಂತುಗಳ ಮೇಲಿನ ಜಿಎಸ್‌ಟಿಯಿಂದ ₹1,484 ಕೋಟಿ ಸಂಗ್ರಹಿಸಲಾಗಿದೆ.

ಸಂಸತ್ತಿನ ಕಲಾಪದ ವೇಳೆ ವಿರೋಧ ಪಕ್ಷದ ಸದಸ್ಯರು ಜೀವ ಮತ್ತು ಆರೋಗ್ಯ ವಿಮೆಯ ಕಂತುಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು. ಕೇಂದ್ರ ಸಚಿವ ನಿತಿನ್‌ ಗಡ್ಕರಿ ಕೂಡ ಈ ವಿಚಾರವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಪತ್ರ ಬರೆದಿದ್ದರು.

ಹಣಕಾಸು ಮಸೂದೆಯ ಮೇಲಿನ ಚರ್ಚೆ ವೇಳೆ ಈ ಬಗ್ಗೆ ಪ್ರಸ್ತಾಪಿಸಿದ್ದ ಕೇಂದ್ರ ಹಣಕಾಸು ಸಚಿವರು, ಜಿಎಸ್‌ಟಿ ಸಂಗ್ರಹದ ಶೇ 75ರಷ್ಟು ರಾಜ್ಯಗಳಿಗೆ ಹೋಗುತ್ತದೆ; ವಿರೋಧ ಪಕ್ಷದ ಸದಸ್ಯರು ತಮ್ಮ ರಾಜ್ಯಗಳ ಹಣಕಾಸು ಸಚಿವರಿಗೆ ಈ ಕುರಿತು ಜಿಎಸ್‌ಟಿ ಮಂಡಳಿಯಲ್ಲಿ ಪ್ರಸ್ತಾವ ತರುವಂತೆ ತಿಳಿಸಿದ್ದರು.

ಸದ್ಯ ಜಿಎಸ್‌ಟಿ ಅಡಿಯಲ್ಲಿ ಶೇ 5, ಶೇ 12, ಶೇ 18, ಶೇ 28 ಹೀಗೆ ನಾಲ್ಕು ಹಂತದ ತೆರಿಗೆ ದರ ನಿಗದಿಪಡಿಸಲಾಗಿದ್ದು, ಕೇಂದ್ರವು ಸದ್ಯಕ್ಕೆ ಅದನ್ನೇ ಮುಂದುವರೆಸಿಕೊಂಡು ಹೋಗುವ ಸಾಧ್ಯತೆ ಇದೆ. ಆದರೆ, ಜಿಎಸ್‌ಟಿ ಇಳಿಕೆಗೆ ಅವಕಾಶ ಇದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸುವಂತೆ ಕೇಂದ್ರವು ಫಿಟ್‌ಮೆಂಟ್ ಸಮಿತಿಗೆ ಸೂಚಿಸಿದೆ. 

2023ರ ಆಗಸ್ಟ್‌ನಲ್ಲಿ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಆನ್‌ಲೈನ್‌ ಗೇಮಿಂಗ್‌ ವೇದಿಕೆಗಳು ಶೇ 28ರಷ್ಟು ತೆರಿಗೆಯನ್ನು ಪಾವತಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿತ್ತು. ಇದಕ್ಕಾಗಿ ಕೇಂದ್ರವು ಜಿಎಸ್‌ಟಿ ಕಾನೂನಿಗೆ ತಿದ್ದುಪಡಿ ಮಾಡಿತ್ತು.

ವಿದೇಶಿ ಗೇಮಿಂಗ್‌ ವೇದಿಕೆಗಳು ಜಿಎಸ್‌ಟಿ ಪ್ರಾಧಿಕಾರದ ಬಳಿ ನೋಂದಾಯಿಸುವುದು ಹಾಗೂ ತೆರಿಗೆ ಪಾವತಿಸುವುದು ಕಡ್ಡಾಯ. ಇಲ್ಲದ್ದಿದ್ದರೆ, ಸರ್ಕಾರ ಅಂತಹ ವೇದಿಕೆಗಳನ್ನು ನಿರ್ಬಂಧಿಸುತ್ತದೆ. ಆನ್‌ಲೈನ್ ಗೇಮಿಂಗ್ ವಲಯದ ಮೇಲಿನ ತೆರಿಗೆಯನ್ನು ಅದರ ಅನುಷ್ಠಾನದ ಆರು ತಿಂಗಳ ನಂತರ ಪರಿಶೀಲಿಸಲಾಗುವುದು ಎಂದು ಮಂಡಳಿ ನಂತರ ನಿರ್ಧರಿಸಿತ್ತು. 

ಮಂಡಳಿಯಲ್ಲಿ ಜಿಎಸ್‌ಟಿ ಅಧಿಕಾರಿಗಳು ನಕಲಿ ಜಿಎಸ್‌ಟಿ ನೋಂದಣಿ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಯ ಯಶಸ್ಸು ಮತ್ತು ಅಂತಹ ಘಟಕಗಳ ವಿರುದ್ಧ ತೆಗೆದುಕೊಂಡ ಕ್ರಮಗಳ ಬಗ್ಗೆ ಸಭೆಗೆ ಮಾಹಿತಿ ನೀಡಲಿದ್ದಾರೆ. ಇದೇ ವೇಳೆ ಜಿಎಸ್‌ಟಿ ಕಟ್ಟದೇ ವಂಚಿಸಲಾಗಿರುವ ಒಟ್ಟು ಮೊತ್ತವನ್ನು ಸಭೆಗೆ ತಿಳಿಸುವ ಸಾಧ್ಯತೆ ಇದೆ.

ದೇಶದಾದ್ಯಂತ ಆಗಸ್ಟ್ 16ರಿಂದ ಅಕ್ಟೋಬರ್‌ 15ರ ವರೆಗೆ ಜಿಎಸ್‌ಟಿ ಅಧಿಕಾರಿಗಳು ನಕಲಿ ಕಂಪನಿಗಳ ನೋಂದಣಿ ವಿರುದ್ಧ ಎರಡನೇ ಹಂತದ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಳೆದ ವರ್ಷದ ಮೇ ತಿಂಗಳಿನಲ್ಲಿ ನಡೆದ ಮೊದಲ ಹಂತದ ಕಾರ್ಯಾಚರಣೆಯಲ್ಲಿ 21,791 ನಕಲಿ ಕಂಪನಿಗಳನ್ನು ಪತ್ತೆ ಹಚ್ಚಲಾಗಿತ್ತು. ಒಟ್ಟು ₹24,010 ಕೋಟಿ ವಂಚನೆ ಬೆಳಕಿಗೆ ಬಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT