ಭಾನುವಾರ, ಜನವರಿ 19, 2020
27 °C

ಚಿನ್ನಾಭರಣಕ್ಕೆ ಹಾಲ್‌ಮಾರ್ಕ್‌ 2021 ಜನವರಿಯಿಂದ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: 2021ರ ಜನವರಿ 15ರಿಂದ ಹಾಲ್‌ಮಾರ್ಕ್‌ ಇರುವ 14,18,22 ಕ್ಯಾರಟ್‌ನ ಚಿನ್ನಾಭರಣಗಳನ್ನು ಮಾತ್ರ ಮಾರಾಟ ಮಾಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ.

ಚಿನ್ನಾಭರಣಗಳ ಶುದ್ಧತೆ ಬಗ್ಗೆ ಚಿಂತಿತರಾದವರಿಗೆ ಇದು ನೆಮ್ಮದಿ ತರುವ ಸಂಗತಿಯಾಗಿದೆ. ಗ್ರಾಹಕರಿಗೆ ತಾವು ಖರೀದಿಸುವ ಚಿನ್ನಾಭರಣಗಳ ಶುದ್ಧತೆಯ ಪ್ರಮಾಣವು ಹಾಲ್‌ಮಾರ್ಕ್‌ನಿಂದ ಖಚಿತವಾಗಲಿದೆ.

‘ಈ ನಿಬಂಧನೆ ಉಲ್ಲಂಘಿಸುವವರು ದಂಡ ಪಾವತಿಸುವುದರ ಜತೆಗೆ ಒಂದು ವರ್ಷ ಜೈಲುಶಿಕ್ಷೆ ಅನುಭವಿಸಬೇಕಾಗುತ್ತದೆ. ಈ ಕುರಿತು ಗುರುವಾರ ಅಧಿಸೂಚನೆ ಹೊರಡಿಸಲಾಗುವುದು’ ಎಂದು ಗ್ರಾಹಕ ವ್ಯವಹಾರಗಳ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ಮಂಗಳವಾರ ಇಲ್ಲಿ ತಿಳಿಸಿದ್ದಾರೆ.

‘ಎಲ್ಲಾ ಚಿನ್ನಾಭರಣ ವರ್ತಕರು ಭಾರತೀಯ ಮಾನದಂಡ ಮಂಡಳಿಯಲ್ಲಿ (ಬಿಐಎಸ್‌) ನೋಂದಾಯಿಸಿಕೊಳ್ಳಬೇಕು. ಹಾಲ್‌ಮಾರ್ಕ್‌ ಇರುವ ಚಿನ್ನಾಭರಣಗಳನ್ನು ಮಾತ್ರವೇ ಮಾರಾಟ ಮಾಡಬೇಕು’ ಎಂದು ಹೇಳಿದ್ದಾರೆ.

2000ದಿಂದಲೂ ಹಾಲ್‌ಮಾರ್ಕ್‌ ಬಳಕೆ ಆರಂಭವಾಗಿದೆ. ಸದ್ಯ ಬಳಕೆಯಲ್ಲಿರುವ ಚಿನ್ನಾಭರಣಗಳಲ್ಲಿ ಶೇ 40ರಷ್ಟು ಹಾಲ್‌ಮಾರ್ಕ್‌ ಒಳಗೊಂಡಿವೆ. 

ಹಾಲ್‌ಮಾರ್ಕ್‌ ಹಾಕಿದ ಆಭರಣಗಳ ತೂಕ ಎಷ್ಟೇ ಇರಲಿ ಅವುಗಳಿಗೆ ಹೆಚ್ಚುವರಿಯಾಗಿ ₹ 30 ಬೆಲೆ ವಿಧಿಸಬೇಕಾಗುತ್ತದೆ. ಬ್ರ್ಯಾಂಡೆಡ್‌ ಆಭರಣ ಮಾರಾಟಗಾರರು ಈ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸುವಂತಿಲ್ಲ. ಆದರೆ, ಬ್ರ್ಯಾಂಡೆಡ್‌ರಹಿತ ಸ್ಥಳೀಯ ವರ್ತಕರು ಈ ವೆಚ್ಚವನ್ನು ಗ್ರಾಹಕರಿಂದ ವಸೂಲಿ ಮಾಡಬಹುದು.

‘ಶೇ 100ರಷ್ಟು ಬಿಐಎಸ್‌ ಹಾಲ್‌ಮಾರ್ಕ್‌ ಚಿನ್ನ ಮಾರಾಟದಲ್ಲಿ ನಾವು ಮುಂಚೂಣಿಯಲ್ಲಿ ಇದ್ದೇವೆ. ಹಾಲ್‌ಮಾರ್ಕ್‌ ಕಡ್ಡಾಯ ಮಾಡಿರುವುದನ್ನು ನಾವು ಸ್ವಾಗತಿಸುತ್ತೇವೆ. ಇದರಿಂದ ಸಂಘಟಿತ ವಲಯದ ಚಿನ್ನಾಭರಣ ಮಾರಾಟ ಹೆಚ್ಚಲಿದೆ’ ಎಂದು ಕಲ್ಯಾಣ ಜುವೆಲರ್ಸ್‌ನ ಅಧ್ಯಕ್ಷ ಟಿ. ಎಸ್‌. ಕಲ್ಯಾಣರಾಮನ್‌ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)