ಆದಾಯಕ್ಕೆ ಅನುಗುಣವಾಗಿ ಗೃಹಸಾಲ

7
ಹಣಕಾಸು ಸಾಕ್ಷರತೆ

ಆದಾಯಕ್ಕೆ ಅನುಗುಣವಾಗಿ ಗೃಹಸಾಲ

Published:
Updated:

‘ಬೆಚ್ಚನೆಯ ಮನೆಯಿರಲು, ವೆಚ್ಚಕ್ಕೆ ಹೊನ್ನಿರಲು, ಇಚ್ಛೆಯನರಿತು ನಡೆವ ಸತಿಯಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ’...ಹೌದು ನಮ್ಮದೇ ಒಂದು ಬೆಚ್ಚನೆಯ ಸೂರಿರಬೇಕು ಎನ್ನುವುದು ಎಲ್ಲ ವರ್ಗದ ಜನರ ಕನಸು. ಆ ಕನಸನ್ನು ನನಸು ಮಾಡಿಕೊಳ್ಳಲು ಗೃಹ ಸಾಲದ ನೆರವು ಅಗತ್ಯ. ಗೃಹ ಸಾಲ ಪಡೆದುಕೊಳ್ಳಬೇಕಾದರೆ ಬ್ಯಾಂಕ್‌ಗಳು ಮುಖ್ಯವಾಗಿ ಪರಿಗಣಿಸುವ ಅಂಶ ನಿಮ್ಮ ಮಾಸಿಕ ಆದಾಯ ಎಷ್ಟು ಎನ್ನುವುದು. ಮಾಸಿಕ ಆದಾಯ ಉತ್ತಮವಾಗಿದ್ದರಷ್ಟೇ ದೊಡ್ಡ ಮೊತ್ತದ ಸಾಲ ಸುಲಭದಲ್ಲಿ ಸಿಗುತ್ತದೆ.

ಬ್ಯಾಂಕ್‌ಗಳು ಗೃಹ ಸಾಲ ನೀಡುವಾಗ ಇತರೆ ಸಂಗತಿಗಳನ್ನೂ ಗಣನೆಗೆ ತೆಗೆದುಕೊಳ್ಳುತ್ತವೆ. ಸಾಲ ಮರು ಪಾವತಿ ಸಾಮರ್ಥ್ಯ, ಅರ್ಜಿದಾರರ ವಯಸ್ಸು, ಆರ್ಥಿಕ ಸ್ಥಿತಿಗತಿ, ಈ ಹಿಂದೆ ಸಾಲ ಪಡೆದಿರುವ ಇತಿಹಾಸ (ಕ್ರೆಡಿಟ್ ಸ್ಕೋರ್), ಆಸ್ತಿಯ ದಾಖಲೆಗಳನ್ನು ಪರಿಶೀಲಿಸುತ್ತವೆ. ಈ ಎಲ್ಲ ವಿವರಗಳು ಸರಿಯಿದ್ದಲ್ಲಿ ಮಾತ್ರ ಸಾಲದ ಮಂಜೂರಾತಿ ಸಲಿಸಾಸುಗುತ್ತದೆ. ಉದಾಹರಣೆಗೆ ನಿಮ್ಮ ತಿಂಗಳ ಒಟ್ಟು ಆದಾಯ ₹ 50 ಸಾವಿರ ಎಂದು ಇಟ್ಟುಕೊಳ್ಳಿ. ಅದನ್ನು ಆಧರಿಸಿದರೆ ನಿಮಗೆ 15 ವರ್ಷಗಳವರೆಗೆ ಶೇ 8.4 ರ ಬಡ್ಡಿದರದಂತೆ ಸುಮಾರು ₹ 22 ಲಕ್ಷ ಸಾಲ ಸಿಗಬಹುದು. ಇಷ್ಟು ಮೊತ್ತದ ಸಾಲ ಸಿಕ್ಕರೆ ಪ್ರತಿ ತಿಂಗಳೂ ನೀವು ₹ 22,500ಗಳನ್ನು ಸಾಲ ಮರುಪಾವತಿಗೆ ಮೀಸಲಿಡಬೇಕಾಗುತ್ತದೆ. ಎಷ್ಟು ಆದಾಯವಿದ್ದರೆ ಎಷ್ಟು ಸಾಲ ಲಭ್ಯ ಎನ್ನುವುದನ್ನು ಇಲ್ಲಿರುವ ಪಟ್ಟಿಯಲ್ಲಿ ವಿವರಿಸಲಾಗಿದೆ.

ಗೃಹ ಸಾಲ ಹೆಚ್ಚಿಗೆ ಪಡೆಯಲು ಹೀಗೆ ಮಾಡಿ
*ಸಾಲ ಮಂಜೂರಾತಿಗೆ ಕ್ರೆಡಿಟ್ ಸ್ಕೋರ್ ಬಹಳ ಮುಖ್ಯ. ಕ್ರೆಡಿಟ್ ಸ್ಟೋರ್‌ನಲ್ಲಿ ಲೋಪಗಳಿದ್ದರೆ ಸರಿಪಡಿಸಿಕೊಳ್ಳಿ. 750 ಕ್ಕಿಂತ ಹೆಚ್ಚು ಕ್ರೆಡಿಟ್ ಸ್ಕೋರ್ ಇದ್ದರೆ ಸಾಲ ಸಿಗುವುದು ಸುಲಭ

* ಒಬ್ಬರ ಸಂಬಳ ಕಡಿಮೆ ಇದ್ದಲ್ಲಿ ತಿಂಗಳ ಸಂಬಳ ಪಡೆಯುತ್ತಿರುವ ಮತ್ತೊಬ್ಬ ಕುಟುಂಬ ಸದಸ್ಯನನ್ನು ಗೃಹ ಸಾಲಕ್ಕಾಗಿ ಸಹ ಅರ್ಜಿದಾರನನ್ನಾಗಿ ಸೇರಿಸಿ

* ಹೆಚ್ಚುವರಿ ಆದಾಯದ ವಿವರಗಳನ್ನು ಬ್ಯಾಂಕ್‌ಗೆ ಒದಗಿಸಿ

* ಈಗಾಗಲೇ ಇರುವ ಸಾಲಗಳನ್ನು ತೀರಿಸುವ ಜತೆಗೆ ಅಲ್ಪಾವಧಿ ಸಾಲಗಳನ್ನು ತೀರಿಸಿ

* ವ್ಯವಸ್ಥಿತಿ ಮರುಪಾವತಿ ಯೋಜನೆ ರೂಪಿಸಿ

* ಹೂಡಿಕೆ ಮೂಲಕ ಪ್ರತಿ ತಿಂಗಳೂ ಸ್ಥಿರ ಆದಾಯ ಬರುವಂತೆ ಮಾಡಿಕೊಳ್ಳಿ

ಪೇಟೆಯಲ್ಲಿ ಜಾಗತಿಕ ವಿದ್ಯಮಾನಗಳ ಪ್ರಭಾವ
ಹೊಸ ವರ್ಷದಲ್ಲಿ ಜಾಗತಿಕ ವಿದ್ಯಮಾನಗಳ ಪ್ರಭಾವದಿಂದಾಗಿ ವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ 1.06 ರಷ್ಟು (35,695) ಕುಸಿತ ದಾಖಲಿಸಿದ್ದರೆ, ನಿಫ್ಟಿ ಶೇ 1.22 ರಷ್ಟು (10,727) ಇಳಿಕೆ ಕಂಡಿದೆ.

ಅಮೆರಿಕ- ಚೀನಾ ನಡುವಣ ವ್ಯಾಪಾರ ಬಿಕ್ಕಟ್ಟು ಬಗೆಹರಿಯದಿರುವುದು ಮತ್ತು ಡಿಸೆಂಬರ್ ತಿಂಗಳಲ್ಲಿ ಚೀನಾ ಉತ್ಪಾದನಾ ವಲಯ ಪ್ರಗತಿ ಕಾಣದಿರುವುದು ಜಾಗತಿಕ ಮಾರುಕಟ್ಟೆಗೆ ನಕಾರಾತ್ಮಕ ಅಂಶವಾಗಿದೆ. ಡಿಸೆಂಬರ್ 2018ಕ್ಕೆ ಕೊನೆಯಾಗಿರುವ ತ್ರೈಮಾಸಿಕ ಅವಧಿಯಲ್ಲಿ ಕಂಪನಿಯ ವಹಿವಾಟು ನಿರೀಕ್ಷೆಗಿಂತ ಕಡಿಮೆಯಾಗಲಿದೆ ಎಂದು  ಆ್ಯಪಲ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಟಿಮ್ ಕೂಕ್ ನೀಡಿರುವ ಹೇಳಿಕೆಯ ಪರಿಣಾಮ ಅಮೆರಿಕ ಷೇರುಪೇಟೆ ನಾಸ್ದಾಕ್‌ ಶೇ 3 ರಷ್ಟು ಕುಸಿಯಿತು. ಇದರ ನೇರ ಪ್ರಭಾವ ‘ನಿಫ್ಟಿ’ಯ ಐ.ಟಿ ವಲಯದ ಷೇರುಗಳ ಮೇಲೂ ಆಯಿತು.

ಜಾಗತಿಕ ವಿದ್ಯಮಾನಗಳ ಪ್ರಭಾವದಿಂದ ಭಾರತದ ಷೇರುಪೇಟೆಯೂ ಮಾರಾಟದ ಒತ್ತಡಕ್ಕೆ ಒಳಗಾಯಿತು. ‘ನಿಫ್ಟಿ’ಯ 11 ವಲಯಗಳ ಪೈಕಿ 7 ವಲಯಗಳು ಭಾರಿ ಹಿನ್ನಡೆ ಅನುಭವಿಸಿದವು. ಡಿಸೆಂಬರ್ 2018 ರಲ್ಲಿ ವಾಹನ ಮಾರಾಟ  ಕುಸಿದ ಕಾರಣ ‘ನಿಫ್ಟಿ’ಯ ವಾಹನ ತಯಾರಿಕಾ ವಲಯ ಶೇ 4.5 ರಷ್ಟು ಕುಸಿತ ದಾಖಲಿಸಿತು.

ಬ್ಯಾಂಕ್ ವಿಲೀನ, ಷೇರು ಹಂಚಿಕೆ: ಬ್ಯಾಂಕ್ ಆಫ್‌ ಬರೋಡಾ ಜತೆಗೆ ವಿಜಯ ಬ್ಯಾಂಕ್‌ ಹಾಗೂ ದೇನಾ ಬ್ಯಾಂಕ್‌ಗಳನ್ನು ವಿಲೀನಗೊಳಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.

ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್‌ನ ಹೂಡಿಕೆದಾರರು ಹೊಂದಿರುವ ಪ್ರತಿ ಸಾವಿರ ಷೇರುಗಳಿಗೆ ಪ್ರತಿಯಾಗಿ ಕ್ರಮವಾಗಿ 402 ಮತ್ತು 110 ಈಕ್ವಿಟಿ ಷೇರುಗಳು ಸಿಗಲಿವೆ ಎಂದು ಬ್ಯಾಂಕ್ ಆಫ್ ಬರೋಡಾ ತಿಳಿಸಿದೆ.

ವಾರದ ಪ್ರಮುಖ ಬೆಳವಣಿಗೆ: ಬ್ಯಾಂಕ್ ಆಫ್ ಬರೋಡಾ ಜತೆ ದೇನಾ ಬ್ಯಾಂಕ್ ವಿಲೀನಗೊಳ್ಳುವ ನಿರ್ಧಾರ ಪ್ರಕಟಗೊಂಡ ಬೆನ್ನಲ್ಲೇ ದೇನಾ ಬ್ಯಾಂಕ್ ನ ಷೇರುಗಳು ಶೇ 16 ರಷ್ಟು ಕುಸಿತ ಕಂಡವು.

ಐಷರ್ ಮೋಟರ್ಸನ ಷೇರುಗಳು ಈ ವಾರ ನಿಫ್ಟಿಯಲ್ಲಿ ಶೇ 13 ರಷ್ಟು ಕುಸಿತ ಕಂಡಿವೆ. ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಮಾರಾಟದಲ್ಲಿ ವಾರ್ಷಿಕವಾಗಿ ಶೇ 13 ರಷ್ಟು ಕುಸಿತ ಕಂಡಿರುವ ಕಾರಣ ಐಷರ್ ಮೋಟರ್ಸ್‌ನ ಷೇರುಗಳ ಬೆಲೆ ಈಗ ₹ 20,103 ರ ಆಸುಪಾಸಿನಲ್ಲಿದೆ. ಇದು 2009 ರ ಅಕ್ಟೋಬರ್ ನಂತರದಲ್ಲಿ ವಾರದ ಅವಧಿಯಲ್ಲಿ ಕಂಡಿರುವ ಭಾರಿ ದೊಡ್ಡ ಹಿನ್ನಡೆಯಾಗಿದೆ.

ಜೆಟ್ ಏರ್‌ವೇಸ್ ಸಾಲದ ಕಂತನ್ನು ಮರುಪಾವತಿ ಮಾಡಿಲ್ಲ ಎಂದು ಹೇಳಿದ ಬೆನ್ನಲ್ಲೇ ಷೇರುಗಳ ಬೆಲೆ ಶೇ 11.35 ರಷ್ಟು ಕುಸಿದು, ಪ್ರತಿ ಷೇರಿನ ಬೆಲೆ ₹ 254 ಕ್ಕೆ ಇಳಿದಿದೆ.

ಮುನ್ನೋಟ: ಈ ವಾರದಲ್ಲಿ ಟಿಸಿಎಸ್ ಮತ್ತು ಇನ್ಫೊಸಿಸ್ ತ್ರೈಮಾಸಿಕ ವರದಿ ಪ್ರಕಟಿಸಲಿವೆ. ಐಟಿ ವಲಯದಲ್ಲಿ ಈ ವರದಿಗಳು ಪ್ರಭಾವ ಬೀರುವುದು ನಿಶ್ಚಿತ. ಜನವರಿ 7 ರಂದು ಕೇಂದ್ರ ಸರ್ಕಾರ ಜಿಡಿಪಿ ದತ್ತಾಂಶ ಪ್ರಕಟಿಸಲಿದೆ.

ಜಿಡಿಪಿ ಅಳೆಯಲು ಸರ್ಕಾರ ಹೊಸ ಮಾನದಂಡ ನಿಗದಿಪಡಿಸಿರುವುದರಿಂದ ಇದು ಸಾಕಷ್ಟು ಕುತೂಹಲ ಮೂಡಿಸಿದೆ. ಜನವರಿ 11 ರಂದು ಕೈಗಾರಿಕ ಉತ್ಪಾದನೆಯ ಅಂಕಿ-ಅಂಶ ಬಿಡುಗಡೆಯಾಗಲಿದೆ.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್‌ನ ಉಪಾಧ್ಯಕ್ಷ)

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !