ನವದೆಹಲಿ: ರಿಲಯನ್ಸ್ ಕಮ್ಯುನಿಕೇಷನ್ಸ್ (ಆರ್‌ಕಾಂ) ಅಧ್ಯಕ್ಷ ಅನಿಲ್ ಅಂಬಾನಿ ವಿರುದ್ಧದ ದಿವಾಳಿ ಪ್ರಕ್ರಿಯೆಗೆ ದೆಹಲಿ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಆರ್‌ಕಾಂ ಮತ್ತು ರಿಲಯನ್ಸ್ ಇನ್‌ಫ್ರಾಟೆಲ್ ಕಂಪನಿಗಳಿಗೆ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) 2016ರ ಆಗಸ್ಟ್‌ನಲ್ಲಿ ಒಟ್ಟಾರೆ ₹ 1,200 ಕೋಟಿ ಸಾಲ ನೀಡಿತ್ತು. ಇದಕ್ಕೆ ಅನಿಲ್ ಅವರು ವೈಯಕ್ತಿಕ ಜಾಮೀನುದಾರ ಆಗಿದ್ದಾರೆ.
ಈ ಸಾಲ ವಸೂಲಿಗೆ ಅನಿಲ್ ವಿರುದ್ಧ ದಿವಾಳಿ ಪ್ರಕ್ರಿಯೆ ಜಾರಿಗೊಳಿಸಲು ಬ್ಯಾಂಕ್ ಮುಂದಾಗಿತ್ತು. ಇದಕ್ಕೆ ತಡೆ ನೀಡಿರುವ ಕೋರ್ಟ್, ಮುಂದಿನ ವಿಚಾರಣೆಯವರೆಗೂ ತಮ್ಮ ಸ್ವತ್ತುಗಳು ಅಥವಾ ಕಾನೂನು ಹಕ್ಕುಗಳನ್ನು ವರ್ಗಾಯಿಸದಂತೆ, ಪರಭಾರೆ ಮಾಡದಂತೆ ಅಥವಾ ವಿಲೇವಾರಿ ಮಾಡದಂತೆ ಅನಿಲ್ ಅವರಿಗೆ ಸೂಚನೆ ನೀಡಿದೆ.
ಅನಿಲ್ ವಿರುದ್ಧ ದಿವಾಳಿ ಪ್ರಕ್ರಿಯೆ ಜಾರಿಗೊಳಿಸುವಂತೆ ರಾಷ್ಟ್ರೀಯ ಕಂಪನಿ ಕಾಯ್ದೆ ಪ್ರಾಧಿಕಾರವು (ಎನ್‌ಸಿಎಲ್‌ಟಿ) ಆಗಸ್ಟ್ 20ರಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.
ಕಂಪನಿಗಳಿಗೆ ಸಂಬಂಧಿಸಿದಂತೆ ದಿವಾಳಿ ಪ್ರಕ್ರಿಯೆ ಮುಂದುವರಿಸಬಹುದು. ಈ ವೇಳೆ, ವೈಯಕ್ತಿಕ ಜಾಮೀನುದಾರರ ಹೊಣೆಗಾರಿಕೆಯನ್ನೂ ಪ್ರಶ್ನಿಸಬಹುದಾಗಿದೆ. ಆದರೆ, ದಿವಾಳಿ ಸಂಹಿತೆಯ (ಐಬಿಸಿ) ಪಾರ್ಟ್ 3ರ ಅನ್ವಯ ಅವರ ವಿರುದ್ಧದ ದಿವಾಳಿ ಪ್ರಕ್ರಿಯೆಗೆ ತಡೆ ಮುಂದುವರಿಯಲಿದೆ ಎಂದು ವಿವರಿಸಿದೆ.
ಕಾರ್ಪೊರೇಟ್ ಸಾಲಕ್ಕೆ ವೈಯಕ್ತಿಕ ಜಾಮೀನು ನೀಡಿದವರ ವಿರುದ್ಧ ದಿವಾಳಿ ಪ್ರಕ್ರಿಯೆ ಜಾರಿಗೊಳಿಸುವ ಕುರಿತು ಹಣಕಾಸು ನಷ್ಟ ಮತ್ತು ದಿವಾಳಿ ಮಂಡಳಿ (ಐಬಿಬಿಐ) ಕಾಯ್ದೆಯ ಸಾಂವಿಧಾನಿಕತೆಯನ್ನು ತಮ್ಮ ಅರ್ಜಿಯಲ್ಲಿ ಪ್ರಶ್ನಿಸಿದ್ದಾರೆ.
ಅಕ್ಟೋಬರ್ 6ಕ್ಕೆ ಮುಂದಿನ ವಿಚಾರಣೆ ನಡೆಯಲಿದ್ದು, ಈ ಅವಧಿಯೊಳಗೆ ಅರ್ಜಿಯ ಕುರಿತು ನಿಲುವು ತಿಳಿಸುವಂತೆ ಕೇಂದ್ರ ಸರ್ಕಾರ, ಐಬಿಬಿಐ ಮತ್ತು ಎಸ್‌ಬಿಐಗೆ ಹೈಕೋರ್ಟ್ ಸೂಚಿಸಿದೆ.