ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದಾನಿ ಸಮೂಹದ ಲೆಕ್ಕಪತ್ರ ‘ವಂಚನೆ’: ಅಮೆರಿಕದ ಸಂಶೋಧನಾ ಸಂಸ್ಥೆಯ ವರದಿ

ಅಮೆರಿಕದ ಸಂಶೋಧನಾ ಸಂಸ್ಥೆಯ ವರದಿ l ಆರೋಪ ಅಲ್ಲಗಳೆದ ಸಮೂಹ
Last Updated 25 ಜನವರಿ 2023, 21:14 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅದಾನಿ ಸಮೂಹವು ‘ಯಾವ ಲಜ್ಜೆಯೂ ಇಲ್ಲದೆ ಷೇರು ಬೆಲೆಯ ಮೇಲೆ ಕೃತಕವಾಗಿ ಪರಿಣಾಮ ಬೀರುವ ಕೆಲಸದಲ್ಲಿ ಹಾಗೂ ಲೆಕ್ಕಪತ್ರಗಳ ವಂಚನೆಯಲ್ಲಿ ತೊಡಗಿದೆ’ ಎಂದು ಅಮೆರಿಕದ ಹೂಡಿಕೆ ಸಂಶೋಧನಾ ಸಂಸ್ಥೆ ‘ಹಿಂಡನ್‌ಬರ್ಗ್‌ ರಿಸರ್ಚ್‌’ ಆರೋಪಿಸಿದೆ.

ಸಂಸ್ಥೆಯ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅದಾನಿ ಸಮೂಹವು, ‘ಇದಕ್ಕೆ ಆಧಾರವಿಲ್ಲ, ಇದು ದುರುದ್ದೇಶದಿಂದ ಕೂಡಿದೆ, ಏಕಪಕ್ಷೀಯವಾಗಿದೆ ಹಾಗೂ ನಮ್ಮ ಷೇರು ಮಾರಾಟ ಪ್ರಕ್ರಿಯೆಯನ್ನು (ಎಫ್‌ಪಿಒ) ಹಾಳುಗೆಡಹುವ ಕೆಟ್ಟ ಉದ್ದೇಶ ಹೊಂದಿದೆ’ ಎಂದು ತಿರುಗೇಟು ನೀಡಿದೆ.

‘₹ 17.8 ಲಕ್ಷ ಕೋಟಿ ಮೌಲ್ಯದ ಅದಾನಿ ಸಮೂಹವು ದಶಕಗಳಿಂದ ಈ ರೀತಿ ಮಾಡಿಕೊಂಡು ಬಂದಿದೆ’ ಎಂಬುದು ತಾನು ಎರಡು ವರ್ಷಗಳಿಂದ ನಡೆಸಿದ ಸಂಶೋಧನೆಯಿಂದ ಗೊತ್ತಾ ಗಿದೆ ಎಂದು ಹಿಂಡನ್‌ಬರ್ಗ್‌ ಹೇಳಿದೆ.

ಅದಾನಿ ಸಮೂಹಕ್ಕೆ ಸೇರಿದ ಅದಾನಿ ಎಂಟರ್‌ಪ್ರೈಸಸ್ ಕಂಪನಿಯು ತನ್ನ ಷೇರುಗಳ ಮಾರಾಟ ಮೂಲಕ ₹ 20 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಮುಂದಾಗಿರುವ ಹೊತ್ತಿನಲ್ಲಿ ಸಂಸ್ಥೆ ಈ ವರದಿಯನ್ನು ಬಿಡುಗಡೆ ಮಾಡಿದೆ.

ಬಂಡವಾಳ ಸಂಗ್ರಹ ಉದ್ದೇಶದಿಂದ ಮಾಡುತ್ತಿರುವ ಷೇರು ಮಾರಾಟವು (ಎಫ್‌ಪಿಒ) ಜನವರಿ 27ರಿಂದ 31ರ
ವರೆಗೆ ಜಾರಿಯಲ್ಲಿ ಇರಲಿದೆ. ವಾಸ್ತವ ತಿಳಿದುಕೊಳ್ಳಲು ತನ್ನನ್ನು ಸಂಪರ್ಕಿಸುವ ಯಾವ ಯತ್ನವನ್ನೂ ಮಾಡದೆ ಈ ವರದಿ ಯನ್ನು ಬಹಿರಂಗಪಡಿಸಲಾಗಿದೆ ಎಂದು ಸಮೂಹವು ಆಕ್ರೋಶ ವ್ಯಕ್ತಪಡಿಸಿದೆ.

‘ತಪ್ಪು ಮಾಹಿತಿ, ಆಧಾರವಿಲ್ಲದ ಹಾಗೂ ವಿಶ್ವಾಸಾರ್ಹವಲ್ಲದ ಮಾಹಿತಿ ಯನ್ನು ಕೆಟ್ಟ ಉದ್ದೇಶದಿಂದ ಒಗ್ಗೂಡಿಸಿ ಈ ವರದಿ ಸಿದ್ಧಪಡಿಸಲಾಗಿದೆ. ಇಂತಹ ತಪ್ಪು ಮಾಹಿತಿಗಳು ದೇಶದ ಅತ್ಯುನ್ನತ ನ್ಯಾಯಾಲಯಗಳಲ್ಲಿ ಪರಿಶೀಲನೆಗೆ ಒಳಗಾಗಿ, ತಿರಸ್ಕೃತಗೊಂಡಿವೆ’ ಎಂದು ಸಮೂಹವು ಹೇಳಿದೆ.

ಎಫ್‌ಪಿಒ ಶುರುವಾಗುವ ಹೊತ್ತಿನಲ್ಲಿ ಪ್ರಕಟವಾಗಿರುವ ಈ ವರದಿಯು ‘ನಮ್ಮ ಸಮೂಹದ ಪ್ರತಿಷ್ಠೆಯನ್ನು ಹಾಳು
ಮಾಡುವ ಹಾಗೂ ಎಫ್‌ಪಿಒಗೆ ಧಕ್ಕೆ ತರುವ ಗುರಿ ಹೊಂದಿರುವ ಲಜ್ಜೆಗೇಡಿತನ ವನ್ನು, ಕೆಟ್ಟ ಉದ್ದೇಶವನ್ನು ಸ್ಪಷ್ಟವಾಗಿ ತೋರಿಸುತ್ತಿದೆ’ ಎಂದು ಕಿಡಿಕಾರಿದೆ.

‘ಅದಾನಿ ಸಮೂಹದ ಸಂಸ್ಥಾಪಕ ಹಾಗೂ ಅಧ್ಯಕ್ಷ ಗೌತಮ್ ಅದಾನಿ ಅವರ ಆಸ್ತಿಯ ಒಟ್ಟು ಮೌಲ್ಯವು ಸರಿಸುಮಾರು 120 ಬಿಲಿಯನ್ ಅಮೆರಿಕನ್ ಡಾಲರ್ (₹ 9.78 ಲಕ್ಷ ಕೋಟಿ). ಕಳೆದ ಮೂರು ವರ್ಷಗಳಲ್ಲಿ ಅವರ ಆಸ್ತಿ ಮೌಲ್ಯವು 100 ಬಿಲಿಯನ್‌ ಡಾಲರ್‌ಗಳಷ್ಟು (₹ 8.15 ಲಕ್ಷ ಕೋಟಿ) ಹೆಚ್ಚಾಗಿದೆ. ಇದಕ್ಕೆ ಪ್ರಮುಖ ಕಾರಣ ಈ ಅವಧಿಯಲ್ಲಿ ಏಳು ಪ್ರಮುಖ ಕಂಪನಿಗಳ ಷೇರುಮೌಲ್ಯದಲ್ಲಿ ಆದ ಹೆಚ್ಚಳ. ಈ ಕಂಪನಿಗಳ ಷೇರುಮೌಲ್ಯವು ಮೂರು ವರ್ಷಗಳಲ್ಲಿ ಸರಾಸರಿ ಶೇ 819ರಷ್ಟು ಹೆಚ್ಚಾಗಿದೆ’ ಎಂದು ವರದಿ ವಿವರಿಸಿದೆ.

ಕೆರಿಬಿಯನ್ ದೇಶಗಳು, ಮಾರಿ ಷಸ್, ಸಂಯುಕ್ತ ಅರಬ್ ಎಮಿರೇಟ್ಸ್ (ಯುಎಇ) ಸೇರಿದಂತೆ ತೆರಿಗೆ ವಂಚಕರ ಪಾಲಿಗೆ ಸ್ವರ್ಗವೆಂದು ಕರೆಸಿಕೊಂಡಿರುವ ಹಲವೆಡೆಗಳಲ್ಲಿ ಅದಾನಿ ಕುಟುಂಬ ಹೊಂದಿರುವ ಶೆಲ್‌ ಕಂಪನಿಗಳ ಬಗ್ಗೆಯೂ ವರದಿಯಲ್ಲಿ ಉಲ್ಲೇಖ ವಾಗಿದೆ. ಈ ಕಂಪನಿಗಳನ್ನು ಬಳಸಿ ಭ್ರಷ್ಟಾಚಾರ ಎಸಗಲಾಗಿದೆ, ಹಣದ ಅಕ್ರಮ ವರ್ಗಾವಣೆ ನಡೆಸಲಾಗಿದೆ, ಷೇರುಪೇಟೆಯಲ್ಲಿ ನೋಂದಾಯಿತವಾಗಿರುವ ಸಮೂಹದ ಕಂಪನಿಗಳಿಂದ ಹಣವನ್ನು ಅಕ್ರಮವಾಗಿ ಬೇರೆಡೆ ಒಯ್ಯಲಾಗಿದೆ ಎಂದು ಕೂಡ ವರದಿಯಲ್ಲಿ ಆರೋಪಿಸಲಾಗಿದೆ.

‘ಸಂಶೋಧನೆಯ ಭಾಗವಾಗಿ ನಾವು ಅದಾನಿ ಸಮೂಹದ ಮಾಜಿ ಹಿರಿಯ ಕಾರ್ಯನಿರ್ವಾಹಕರ ಜೊತೆ ಮಾತುಕತೆ ನಡೆಸಿದ್ದೇವೆ, ಸಹಸ್ರಾರು ಕಡತಗಳನ್ನು ಪರಿಶೀಲಿಸಿದ್ದೇವೆ ಮತ್ತು ಸರಿಸುಮಾರು 6 ದೇಶಗಳಲ್ಲಿ ಕ್ಷೇತ್ರ ಭೇಟಿಯನ್ನು ಕೂಡ ಮಾಡಿದ್ದೇವೆ’ ಎಂದು ಸಂಸ್ಥೆ ತಿಳಿಸಿದೆ.

‘ನಮ್ಮ ಸಂಶೋಧನೆಯ ಮೂಲಕ ಕಂಡುಕೊಂಡಿದ್ದನ್ನು ಪಕ್ಕಕ್ಕೆ ಇಟ್ಟು, ಅದಾನಿ ಸಮೂಹದ ಹಣಕಾಸಿನ ಸ್ಥಿತಿಯನ್ನು ಗಮನಿಸಿದರೂ, ಸಮೂಹದ ಪ್ರಮುಖ ಏಳು ಕಂಪನಿಗಳ ಮೌಲ್ಯವು ಶೇ 85ರಷ್ಟು ಕುಸಿಯುವ ಸಾಧ್ಯತೆ ಇದೆ’ ಎಂದು ವರದಿ ತಿಳಿಸಿದೆ. ‘ಸಮೂಹದ ಪ್ರಮುಖ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಸಾಲ ಮಾಡಿವೆ, ಸಾಲಕ್ಕಾಗಿ ತಮ್ಮ ಹೆಚ್ಚಿನ ಬೆಲೆಯ ಷೇರುಗಳನ್ನು ಅಡಮಾನ ಇರಿಸಿವೆ, ಇಡೀ ಸಮೂಹದ ಹಣಕಾಸಿನ ಸ್ಥಿತಿಯನ್ನು ಅಪಾಯಕ್ಕೆ ನೂಕಿವೆ’ ಎಂದು ವರದಿಯಲ್ಲಿ ಬೊಟ್ಟು ಮಾಡಲಾಗಿದೆ.

ಸಾಲ: ಕಳವಳ ಅಲ್ಲಗಳೆದ ಸಮೂಹ

ನವದೆಹಲಿ: ಸಾಲಕ್ಕೆ ಸಂಬಂಧಿಸಿದ ಕಳವಳಗಳನ್ನು ಅದಾನಿ ಸಮೂಹವು ಮತ್ತೆ ಮತ್ತೆ ಅಲ್ಲಗಳೆಯುತ್ತ ಬಂದಿದೆ. ಸಮೂಹದ ಮುಖ್ಯ ಹಣಕಾಸು ಅಧಿಕಾರಿ ಜುಗೇಶಿಂದರ್ ಸಿಂಗ್ ಅವರು ಈಚೆಗೆ ಮಾಧ್ಯಮಗಳ ಬಳಿ, ‘ಈ ಕಳವಳವನ್ನು ನಮ್ಮ ಬಳಿ ಯಾರೂ ವ್ಯಕ್ತಪಡಿಸಿಲ್ಲ. ಒಬ್ಬನೇ ಒಬ್ಬ ಹೂಡಿಕೆದಾರ ಕೂಡ ಈ ಮಾತು ಹೇಳಿಲ್ಲ’ ಎಂದಿದ್ದರು.

ಬುಧವಾರ ನೀಡಿರುವ ಪ್ರತಿಕ್ರಿಯೆಯಲ್ಲಿ ಅದಾನಿ ಸಮೂಹವು, ‘ಹೂಡಿಕೆದಾರರ ಸಮೂಹವು ಅದಾನಿ ಸಮೂಹದಲ್ಲಿ ಯಾವತ್ತಿಗೂ ವಿಶ್ವಾಸ ಇರಿಸಿದೆ. ಹಣಕಾಸು ತಜ್ಞರು ಸಿದ್ಧಪಡಿಸಿದ ವಿಸ್ತೃತ ವರದಿಗಳು ಹಾಗೂ ವಿಶ್ಲೇಷಣೆಗಳು ಮತ್ತು ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆಗಳು ನೀಡುವ ಕ್ರೆಡಿಟ್ ರೇಟಿಂಗ್ ಆಧರಿಸಿ ಅವರು ವಿಶ್ವಾಸ ಇರಿಸಿದ್ದಾರೆ’ ಎಂದು ಹೇಳಿದೆ.

‘ಅಗತ್ಯ ಮಾಹಿತಿ ಹಾಗೂ ಜ್ಞಾನವನ್ನು ಹೊಂದಿರುವ ನಮ್ಮ ಹೂಡಿಕೆದಾರರು ಏಕಪಕ್ಷೀಯ, ಆಧಾರವಿಲ್ಲದ ಹಾಗೂ ಸ್ಥಾಪಿತ ಹಿತಾಸಕ್ತಿಗಳಿಂದ ಕೂಡಿರುವ ವರದಿಗಳಿಂದ ಪ್ರಭಾವಿತರಾಗುವುದಿಲ್ಲ’ ಎಂದು ಅದು ವಿಶ್ವಾಸ ವ್ಯಕ್ತಪಡಿಸಿದೆ.

ಸಮೂಹವು ಎಲ್ಲ ಕಾನೂನುಗಳನ್ನು ಪಾಲಿಸುತ್ತ ಬಂದಿದೆ. ಕಾರ್ಪೊರೇಟ್ ಆಡಳಿತದಲ್ಲಿ ಅತ್ಯುನ್ನತ ಮಟ್ಟವನ್ನು ಕಾಯ್ದುಕೊಂಡಿದೆ ಎಂದೂ ಹೇಳಿದೆ.

ಫಿಚ್ ಸಮೂಹದ ಅಂಗಸಂಸ್ಥೆಯಾಗಿರುವ ಕ್ರೆಡಿಟ್‌ಸೈಟ್ಸ್‌ ಸೆಪ್ಟೆಂಬರ್ ತಿಂಗಳಲ್ಲಿ ವರದಿಯೊಂದರಲ್ಲಿ, ‘ಸಮೂಹವು ಅತಿಯಾದ ಸಾಲದಲ್ಲಿ ಇದೆ’ ಎಂದು ಹೇಳಿತ್ತು. ನಂತರ ತನ್ನ ಕೆಲವು ತಪ್ಪು ಲೆಕ್ಕಾಚಾರಗಳನ್ನು ಅದು ತಿದ್ದಿಕೊಂಡಿತ್ತು. ಆದರೆ ಸಮೂಹದ ಸಾಲದ ವಿಚಾರವಾಗಿ ಕಳವಳ ಇದ್ದೇ ಇದೆ ಎಂದು ಸ್ಪಷ್ಟಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT