ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟುಂಬಗಳ ಸಾಲದ ಪ್ರಮಾಣ ಏರಿಕೆ

Last Updated 5 ಜುಲೈ 2021, 19:30 IST
ಅಕ್ಷರ ಗಾತ್ರ

ಮುಂಬೈ: ಕುಟುಂಬಗಳು ಹೊಂದಿರುವ ಸಾಲದ ಪ್ರಮಾಣವು 2020–21ನೆಯ ಸಾಲಿನಲ್ಲಿ ತೀವ್ರ ಏರಿಕೆ ಕಂಡಿದೆ. 2019–20ರಲ್ಲಿ ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಶೇಕಡ 32.5ರಷ್ಟು ಇದ್ದ ಸಾಲದ ಪ್ರಮಾಣವು, 2020–21ರಲ್ಲಿ ಶೇಕಡ 37.3ಕ್ಕೆ ಹೆಚ್ಚಳವಾಗಿದೆ.

ಇದು ಕೋವಿಡ್‌ನಿಂದ ಆಗಿರುವ ಹಣಕಾಸಿನ ಪರಿಣಾಮಗಳನ್ನು ತೋರಿಸುತ್ತಿದೆ. ಕೋವಿಡ್ ಎರಡನೆಯ ಅಲೆಯ ಪರಿಣಾಮವಾಗಿ ಸಾಲದ ಪ್ರಮಾಣವು ಪ್ರಸಕ್ತ ಹಣಕಾಸು ವರ್ಷದಲ್ಲಿ ಇನ್ನಷ್ಟು ಜಾಸ್ತಿ ಆಗಬಹುದು ಎಂದು ಎಸ್‌ಬಿಐ ಸಿದ್ಧಪಡಿಸಿರುವ ವರದಿಯು ಹೇಳಿದೆ.

ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯನ್ನು (ಜಿಎಸ್‌ಟಿ) 2017ರಲ್ಲಿ ಜಾರಿಗೆ ತಂದಾಗಿನಿಂದಲೂ ಕೌಟುಂಬಿಕ ಸಾಲದ ಪ್ರಮಾಣವು ಹೆಚ್ಚುತ್ತಲೇ ಇದೆ. 2017–18ರ ನಂತರದ ನಾಲ್ಕು ವರ್ಷಗಳಲ್ಲಿ ಕೌಟುಂಬಿಕ ಸಾಲದ ಪ್ರಮಾಣವು ಶೇ 7.2ರಷ್ಟು ಜಾಸ್ತಿ ಆಗಿದೆ. 2017–18ರಲ್ಲಿ ಶೇ 30.1ರಷ್ಟು ಇದ್ದ ಸಾಲದ ಪ್ರಮಾಣವು ಈಗ ಶೇ 37.3ಕ್ಕೆ ಏರಿದೆ ಎಂದು ಎಸ್‌ಬಿಐ ವರದಿ ಹೇಳಿದೆ.

ಬ್ಯಾಂಕ್‌ಗಳು, ಸಹಕಾರ ಸಂಘ, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಹಾಗೂ ಗೃಹ ಸಾಲ ಸಂಸ್ಥೆಗಳಿಂದ ಪಡೆದ ಸಣ್ಣ ಸಾಲಗಳು, ಬೆಳೆಸಾಲ, ವಾಣಿಜ್ಯ ಉದ್ದೇಶಕ್ಕಾಗಿ ಪಡೆದ ಸಾಲ ‘ಕೌಟುಂಬಿಕ ಸಾಲ’ ಎಂದು ಪರಿಗಣಿತವಾಗುತ್ತದೆ.

2020–21ರಲ್ಲಿ ಬ್ಯಾಂಕ್‌ಗಳಲ್ಲಿ ಠೇವಣಿ ಪ್ರಮಾಣ ಕಡಿಮೆ ಆಗಿದ್ದು, ಆರೋಗ್ಯಕ್ಕೆ ಸಂಬಂಧಿಸಿದ ವೆಚ್ಚಗಳು ಜಾಸ್ತಿ ಆಗಿದ್ದು ಕೂಡ ಕೌಟುಂಬಿಕ ಸಾಲದ ಪ್ರಮಾಣ ಹೆಚ್ಚಳ ಕಾಣಲು ಕಾರಣವಾಗಿದೆ ಎಂದು ಸೌಮ್ಯಕಾಂತಿ ಘೋಷ್ ಅವರು ಸಿದ್ಧಪಡಿಸಿರುವ ವರದಿಯು ವಿವರಿಸಿದೆ. ಆದರೆ ಶೇ 37.3ರಷ್ಟು ಸಾಲವು, ಇತರ ಹಲವು ದೇಶಗಳಲ್ಲಿನ ಕೌಟುಂಬಿಕ ಸಾಲದ ಪ‍್ರಮಾಣಕ್ಕಿಂತಲೂ ಕಡಿಮೆ ಎಂದು ಅದು ಹೇಳಿದೆ.

2020ರಲ್ಲಿ ಲಾಕ್‌ಡೌನ್‌ ಜಾರಿಗೆ ತಂದಾಗ ಎಲ್ಲ ವಾಣಿಜ್ಯ ಬ್ಯಾಂಕ್‌ಗಳಲ್ಲಿಯೂ ಹಣದ ಠೇವಣಿ ಪ್ರಮಾಣದಲ್ಲಿ ಜಾಸ್ತಿ ಆಯಿತು. ಏಕೆಂದರೆ ಆ ಸಂದರ್ಭದಲ್ಲಿ ಹಣ ಖರ್ಚು ಮಾಡಲು ಹೆಚ್ಚು ಅವಕಾಶ ಇರಲಿಲ್ಲ. ಆದರೆ, ಹಬ್ಬದ ತಿಂಗಳುಗಳಲ್ಲಿ ಠೇವಣಿ ಪ್ರಮಾಣ ತಗ್ಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT