ಬುಧವಾರ, ಫೆಬ್ರವರಿ 26, 2020
19 °C
ಇನ್ವೆಸ್ಟ್‌ ಕರ್ನಾಟಕ: 90 ಸಾವಿರ ಜನರಿಗೆ ಉದ್ಯೋಗ ನಿರೀಕ್ಷೆ

₹72 ಸಾವಿರ ಕೋಟಿ ಹೂಡಿಕೆಗೆ ಒಪ್ಪಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಹುಬ್ಬಳ್ಳಿ: ಇಲ್ಲಿ ನಡೆದ ಇನ್ವೆಸ್ಟ್‌ ಕರ್ನಾಟಕ ಹುಬ್ಬಳ್ಳಿ ಸಮಾವೇಶದಲ್ಲಿ ಒಂದು ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗುವ ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಉದ್ಘಾಟನಾ ಸಮಾರಂಭದಲ್ಲಿ ಹೇಳಿದ್ದರು. ದಿನದ ಅಂತ್ಯಕ್ಕೆ 51 ಕಂಪನಿಗಳು ₹72 ಸಾವಿರ ಕೋಟಿ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದವು. 90 ಸಾವಿರ ಜನರಿಗೆ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.

ಇಲ್ಲಿನ ಡೆನಿಸನ್ಸ್‌ ಹೋಟೆಲ್‌ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ವಿವಿಧ ಕಂಪನಿಗಳ ಮಾಲೀಕರು ಹಾಗೂ ಸಿಇಒಗಳೊಂದಿಗೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತ ಅವರು ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು.

ಧಾರವಾಡಕ್ಕೆ ಸಿಂಹಪಾಲು: ಬಂಡವಾಳ ಹೂಡಿಕೆಯಲ್ಲಿ ಧಾರವಾಡ ಜಿಲ್ಲೆ ಸಿಂಹಪಾಲು ಪಡೆದಿದೆ. ಬೆಂಗಳೂರಿನ ರಾಜೇಶ್‌ ಎಕ್ಸ್‌ಪೋರ್ಟ್ಸ್ ಲಿಮಿಟೆಡ್‌ ಕಂಪನಿಯು ಎಲೆಕ್ಟ್ರಿಕಲ್‌ ವೆಹಿಕಲ್‌ ಹಾಗೂ ಲಿಥಿಯಂ ಬ್ಯಾಟರಿ ತಯಾರಿಕಾ ಘಟಕ ಆರಂಭಿಸಲು ₹50,000 ಕೋಟಿ ಹೂಡಿಕೆಗೆ ಮುಂದಾಗಿದೆ. ಇದರಿಂದ 10 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ.

ದೆಹಲಿ ಮೂಲದ ನ್ಯಾಟ್‌ಕ್ಯಾಪ್‌ ಪವರ್‌ ಪ್ರೈವೇಟ್‌ ಕಂಪನಿಯು ಹುಬ್ಬಳ್ಳಿಯಲ್ಲಿ ₹3,000 ಕೋಟಿ, ದಾವಣಗೆರೆಯಲ್ಲಿ ಹೈದರಾಬಾದ್‌ನ ಸನಾಲಿ ಪವರ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಪವನ ಹಾಗೂ ಸೋಲಾರ ಮೂಲಕ ವಿದ್ಯುತ್‌ ಉತ್ಪಾದನೆಗೆ ₹4,800 ಕೋಟಿ ಹೂಡಿಕೆ ಮಾಡುತ್ತಿವೆ.

ಧಾರವಾಡದಲ್ಲಿ ಗುವಾಹಟಿಯ ಜೆಟ್‌ವಿಂಗ್ಸ್ ಏರೋಸ್ಪೇಸ್‌ ಆ್ಯಂಡ್‌ ಏವಿಯೇಷನ್‌ ಕಂಪನಿಯು ₹2,060 ಕೋಟಿ, ಬೆಂಗಳೂರಿನ ಆಯಾನ್‌ ರಿನಿವೇಬಲ್‌ ಪವರ್‌ ಪ್ರೈವೇಟ್‌ ಕಂಪನಿ ₹3,000 ಕೋಟಿ ಹೂಡಿಕೆಗೆ ಒಪ್ಪಂದ ಮಾಡಿಕೊಂಡಿವೆ. ಚಿತ್ರದುರ್ಗ, ದಾವಣಗೆರೆ, ಮೈಸೂರು ಜಿಲ್ಲೆಗಳಲ್ಲಿಯೂ ಹೂಡಿಕೆಗೆ ಒಪ್ಪಂದ ಮಾಡಿಕೊಂಡಿದ್ದಾರೆ.

ಸಮಾವೇಶ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಬೆಂಗಳೂರು ಹೊರತು ಪಡಿಸಿ ಎರಡು ಹಾಗೂ ಮೂರನೇ ಹಂತದ ನಗರಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಕೊಪ್ಪಳದಲ್ಲಿ ಕರಕುಶಲ ಆಟಿಕೆಗಳಿಗೆ, ಬಳ್ಳಾರಿಯಲ್ಲಿ ಟೆಕ್ಸ್‌ಟೈಲ್ಸ್‌ಗೆ, ಕಲಬುರ್ಗಿಯಲ್ಲಿ ಸೌರ ವಿದ್ಯುತ್‌ ಸರಕುಗಳ ಮತ್ತು ಬೀದರ್‌ನಲ್ಲಿ ಕೃಷಿ ಉಪಕರಣಗಳ ಕ್ಲಸ್ಟರ್‌ ತೆರೆಯಲಾಗುವುದು. ರಾಜ್ಯವು ಕೈಗಾರಿಕಾ ಸ್ನೇಹಿಯಾಗಿದ್ದು, ಹೂಡಿಕೆಗೆ ಮುಂದೆ ಬರಬೇಕು ಎಂದು ಉದ್ಯಮಿಗಳಿಗೆ ಮನವಿ ಮಾಡಿದರು.

ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಮಾತನಾಡಿ, ‘ಹುಬ್ಬಳ್ಳಿಯಲ್ಲಿ ಶೀಘ್ರವೇ ಎಫ್‌ಎಂಸಿಜಿ ಕ್ಲಸ್ಟರ್ ಅಸ್ತಿತ್ವಕ್ಕೆ ಬರಲಿದೆ. ದಾಖಲೆ ಪ್ರಮಾಣದಲ್ಲಿ ಹೂಡಿಕೆಗೆ ಒಪ್ಪಂದ ಮಾಡಿಕೊಂಡಿದ್ದು, ಹೂಡಿಕೆಯ ಪ್ರಕ್ರಿಯೆ ಪೂರ್ಣವಾಗುವವರೆಗೂ ಫಾಲೋ ಅಪ್‌’ ಮಾಡಲಾಗುವುದು ಎಂದರು.

ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ಅವರು, ’ಹುಬ್ಬಳ್ಳಿಯಲ್ಲಿ ‘ಸಿಪೆಟ್‌’ ಕೇಂದ್ರ ಆರಂಭಿಸಲಾಗುವುದು’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು