ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಬ್ರಿಡ್‌ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೆಚ್ಚಿದ ಹೂಡಿಕೆ

Last Updated 12 ಜುಲೈ 2021, 15:00 IST
ಅಕ್ಷರ ಗಾತ್ರ

ನವದೆಹಲಿ: ಹೈಬ್ರಿಡ್‌ ಮ್ಯೂಚುವಲ್‌ ಫಂಡ್‌ಗಳು ಹೂಡಿಕೆದಾರರನ್ನು ಹೆಚ್ಚು ಆಕರ್ಷಿಸುತ್ತಿದ್ದು, ಜೂನ್‌ ತ್ರೈಮಾಸಿಕದಲ್ಲಿ ಈ ಫಂಡ್‌ಗಳಲ್ಲಿ ₹ 27,220 ಕೋಟಿ ಹೂಡಿಕೆ ಆಗಿದೆ. ಮಾರ್ಚ್‌ ತ್ರೈಮಾಸಿಕದಲ್ಲಿ ಹೂಡಿಕೆ ಆಗಿದ್ದ ₹ 13,055 ಕೋಟಿಗೆ ಹೋಲಿಸಿದರೆ ಎರಡು ಪಟ್ಟು ಹೆಚ್ಚಳ ಆಗಿದೆ.

ಭಾರತೀಯ ಮ್ಯೂಚುವಲ್‌ ಫಂಡ್‌ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ಈ ಮಾಹಿತಿ ನೀಡಿದೆ. ಹೈಬ್ರಿಡ್‌ ಫಂಡ್‌ಗಳು ಹೂಡಿಕೆದಾರರ ಹಣವನ್ನು ಕಂಪನಿಗಳ ಷೇರುಗಳಲ್ಲಿ ಹಾಗೂ ಸಾಲಪತ್ರಗಳಲ್ಲಿ ಹೂಡಿಕೆ ಮಾಡುತ್ತವೆ. ಕೆಲವೊಮ್ಮೆ, ಚಿನ್ನದ ಮೇಲೆಯೂ ಹೂಡಿಕೆ ಮಾಡುವುದಿದೆ.

ಮಾರುಕಟ್ಟೆ ಸೂಚ್ಯಂಕಗಳು ಗರಿಷ್ಠ ಮಟ್ಟದಲ್ಲಿ ಇರುವುದರಿಂದ ಹೂಡಿಕೆದಾರರು ಹೈಬ್ರಿಡ್ ಫಂಡ್‌ಗಳಲ್ಲಿ ಯಾವುದು ಉತ್ತಮ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಕೆಲವು ಹೂಡಿಕೆದಾರರು ಮಾರುಕಟ್ಟೆ ಏರಿಳಿತಗಳ ಅಪಾಯದಿಂದ ದೂರವುಳಿಯಲು ಬಯಸುತ್ತಲೇ, ಮಾರುಕಟ್ಟೆಯಲ್ಲಿ ಪಾಳ್ಗೊಳ್ಳಲು ಕೂಡ ಬಯಸುತ್ತಾರೆ ಎಂದು ಮೈವೆಲ್ತ್‌ಗ್ರೋತ್‌.ಕಾಂ ಸಹ ಸ್ಥಾಪಕ ಹರ್ಷದ್‌ ಚೇತನ್ವಾಲಾ ತಿಳಿಸಿದ್ದಾರೆ. ಹೈಬ್ರಿಡ್ ಫಂಡ್‌ಗಳು ಸಾಲಪತ್ರಗಳಲ್ಲಿಯೂ ಹೂಡಿಕೆ ಮಾಡುವುದರಿಂದ, ಈಕ್ವಿಟಿ ಮಾರುಕಟ್ಟೆಯ ಏರಿಳಿತಗಳಿಂದ ತುಸು ಮಟ್ಟಿಗೆ ಅವರಿಗೆ ರಕ್ಷಣೆ ಇರುತ್ತದೆ.

ಹೂಡಿಕೆದಾರರಿಗೆ, ಹೈಬ್ರಿಡ್ ಫಂಡ್‌ಗಳು ಈಕ್ವಿಟಿ ಮಾರುಕಟ್ಟೆಯ ಹೂಡಿಕೆ ಅವಕಾಶಗಳ ಮೂಲಕ ಹೆಚ್ಚು ಲಾಭ ಗಳಿಸಲು ಸಹಾಯ ಮಾಡುತ್ತವೆ. ಹಾಗೆಯೇ, ಸಾಲ‍ಪತ್ರ ಮಾರುಕಟ್ಟೆಗಳ ಸ್ಥಿರತೆಯ ಪ್ರಯೋಜನವನ್ನು ಮತ್ತು ಹಲವು ರೂಪಗಳಲ್ಲಿ ಚಿನ್ನವನ್ನು ಖರೀದಿಸುವ ಆಯ್ಕೆಯನ್ನು ಒದಗಿಸುತ್ತವೆ. ಈಕ್ವಿಟಿ ಮತ್ತು ಸಾಲಪತ್ರಗಳಲ್ಲಿನ ಹೂಡಿಕೆಗಳು ಒಳ್ಳೆಯ ಗಳಿಕೆ ತಂದುಕೊಡದಿದ್ದರೆ, ಚಿನ್ನದ ಮೇಲಿನ ಹೂಡಿಕೆಯಿಂದಾಗಿ ಹೈಬ್ರಿಡ್‌ ಫಂಡ್‌ಗಳು ಬಂಡವಾಳವನ್ನು ಉಳಿಸಿಕೊಡುತ್ತವೆ ಎಂದು ಮಾರ್ನಿಂಗ್‌ಸ್ಟಾರ್‌ ಇಂಡಿಯಾದ ಸಹಾಯಕ ನಿರ್ದೇಶಕ ಹಿಮಾಂಶು ಶ್ರೀವಾಸ್ತವ ಹೇಳಿದ್ದಾರೆ.

ಹೊಸದಾಗಿ ಅಥವಾ ಮೊದಲ ಬಾರಿಗೆ ಹೂಡಿಕೆ ಮಾಡುವವರಿಗೆ ಹೈಬ್ರಿಡ್‌ ಫಂಡ್‌ಗಳು ವಿವೇಕಯುತ ಹೂಡಿಕೆ ಆಯ್ಕೆ ಎಂದೂ ಅವರು ತಿಳಿಸಿದ್ದಾರೆ. ‘ಹೈಬ್ರಿಡ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದರಿಂದ ಹೂಡಿಕೆದಾರರಿಗೆ ಈಕ್ವಿಟಿ, ಸಾಲಪತ್ರ ಹಾಗೂ ಇತರ ಆಯ್ಕೆಗಳು ಒಂದೇ ಕಡೆ ಲಭ್ಯವಾಗುತ್ತವೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ದಿನಗಳಲ್ಲಿ ಕೂಡ ಹೈಬ್ರಿಡ್‌ ಫಂಡ್‌ಗಳಲ್ಲಿ ಹೆಚ್ಚಿನ ಹಣ ಹೂಡಿಕೆ ಆಗಬಹುದು ಎಂದು ಚೇತನ್ವಾಲಾ ಅಂದಾಜಿಸಿದ್ದಾರೆ. ‘ಈಕ್ವಿಟಿ ಮಾರುಕಟ್ಟೆಗಳು ತೀರಾ ಮೇಲ್ಮಟ್ಟದಲ್ಲಿ ಇವೆ. ಸಾಲಪತ್ರ ಆಧಾರಿತ ಫಂಡ್‌ಗಳು ಮಾಮೂಲಿ ಹೂಡಿಕೆ ಉತ್ಪನ್ನಗಳಿಗಿಂತ ಹೆಚ್ಚಿನ ಲಾಭ ತಂದುಕೊಡಲು ಹೆಣಗಾಟ ನಡೆಸಿವೆ. ಹಾಗಾಗಿ ಹೂಡಿಕೆದಾರರು ಹೈಬ್ರಿಡ್‌ ಫಂಡ್‌ಗಳತ್ತ ಹೆಚ್ಚು ಆಕರ್ಷಿತರಾಗಬಹುದು’ ಎಂದು ಎಲ್‌ಎಕ್ಸ್‌ಎಂಇ ಸಂಸ್ಥಾಪಕಿ ಪ್ರೀತಿ ರತಿ ಗುಪ್ತ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT