ಮಂಗಳವಾರ, ಅಕ್ಟೋಬರ್ 19, 2021
24 °C

ಜಿಡಿಪಿ ಬೆಳವಣಿಗೆ ಅಂದಾಜು ಪರಿಷ್ಕರಿಸಿದ ಐಸಿಆರ್‌ಎ

ಪಿಟಿಐ Updated:

ಅಕ್ಷರ ಗಾತ್ರ : | |

ಒಟ್ಟು ಆಂತರಿಕ ಉತ್ಪಾದನೆ (ಜಿಡಿಪಿ)-ಪ್ರಾತಿನಿಧಿಕ ಚಿತ್ರ

ಮುಂಬೈ: ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಅರ್ಥ ವ್ಯವಸ್ಥೆಯ ಬೆಳವಣಿಗೆ ಪ್ರಮಾಣ ಎಷ್ಟಿರಬಹುದು ಎಂಬ ಅಂದಾಜನ್ನು ರೇಟಿಂಗ್ಸ್‌ ಸಂಸ್ಥೆ ಐಸಿಆರ್‌ಎ ಪರಿಷ್ಕರಿಸಿದೆ. ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ದರವು ಶೇಕಡ 8.5ರಷ್ಟು ಇರಲಿದೆ ಎಂದು ಈ ಮೊದಲು ಅಂದಾಜು ಮಾಡಿದ್ದ ಐಸಿಆರ್‌ಎ, ಈಗ ಅದು ಶೇ 9ರಷ್ಟು ಇರಬಹುದು ಎಂದು ಅಂದಾಜಿಸಿದೆ.

ಕೋವಿಡ್‌ ಲಸಿಕೆ ನೀಡುವ ಅಭಿಯಾನ ಚುರುಕು ಪಡೆದಿರುವುದು, ಹಿಂಗಾರು ಬೆಳೆ ಚೆನ್ನಾಗಿ ಆಗಬಹುದು ಎನ್ನುವ ಅಂದಾಜು ಮತ್ತು ಸರ್ಕಾರವು ಚುರುಕಿನಿಂದ ವೆಚ್ಚ ಮಾಡುತ್ತಿರುವುದು ಈ ಪರಿಷ್ಕರಣೆಗೆ ಕಾರಣ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ. ಆರ್‌ಬಿಐ ಅಂದಾಜಿನ ಪ್ರಕಾರ ಹಾಲಿ ಆರ್ಥಿಕ ವರ್ಷದಲ್ಲಿ ಜಿಡಿಪಿ ಬೆಳವಣಿಗೆ ದರವು ಶೇ 9.5ರಷ್ಟು ಇರಲಿದೆ.

‘ಕೋವಿಡ್‌ ಲಸಿಕೆ ನೀಡುತ್ತಿರುವುದು ಚುರುಕು ಪಡೆದಿರುವುದು ಜನರ ವಿಶ್ವಾಸ ಹೆಚ್ಚಿಸುವ ಸಾಧ್ಯತೆ ಇದೆ. ಇದರಿಂದಾಗಿ ಜನರ ನಡುವೆ ಸಂಪರ್ಕ ಹೆಚ್ಚಾಗಿರುವ ಸೇವಾ ವಲಯದ ಕೆಲವು ಚಟುವಟಿಕೆಗಳಿಗೆ ಇನ್ನಷ್ಟು ಬೇಡಿಕೆ ಬರಬಹುದು. ಸಾಂಕ್ರಾಮಿಕದಿಂದ ಪೆಟ್ಟು ತಿಂದಿರುವ ಅರ್ಥ ವ್ಯವಸ್ಥೆಯ ಪುನಶ್ಚೇತನಕ್ಕೆ ನೆರವಾಗಬಹುದು’ ಎಂದು ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದ್ದಾರೆ.

ಎದುರಾಗಬಹುದಾದ ಕೋವಿಡ್‌ ಮೂರನೆಯ ಅಲೆಯು ಪರಿಷ್ಕೃತ ಅಂದಾಜಿಗೆ ಇರುವ ಪ್ರಮುಖ ಅಪಾಯ ಎಂದು ಐಸಿಆರ್‌ಎ ಹೇಳಿದೆ. ಕೊರೊನಾ ವೈರಾಣುವು ಇನ್ನಷ್ಟು ರೂಪಾಂತರಗಳನ್ನು ಹೊಂದಿ, ಈಗಿರುವ ಲಸಿಕೆಗಳು ಆ ರೂಪಾಂತರಗೊಂಡ ವೈರಾಣುವಿನ ವಿರುದ್ಧ ಪರಿಣಾಮ ಕಳೆದುಕೊಂಡರೆ ತೊಂದರೆ ಆಗಬಹುದು ಎಂದು ಸಂಸ್ಥೆಯು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು