ಶನಿವಾರ, ಮೇ 15, 2021
23 °C

ಸಿಎಂಐಇ ಅಧ್ಯಯನ ವರದಿ: ಲಾಕ್‌ಡೌನ್‌ ಪರಿಣಾಮ ಕೌಟುಂಬಿಕ ಆದಾಯ ಕುಸಿತ

ವಿಜಯ್ ಜೋಷಿ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್–19 ಹರಡುವುದನ್ನು ತಡೆಯುವ ಉದ್ದೇಶದಿಂದ ಜಾರಿಗೊಳಿಸಿದ ಲಾಕ್‌ಡೌನ್‌ ಪರಿಣಾಮವಾಗಿ ದೇಶದ ಕೌಟುಂಬಿಕ ಆದಾಯದಲ್ಲಿ ಕುಸಿತ ಕಂಡುಬಂದಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಸಂಸ್ಥೆ ಹೇಳಿದೆ.

ದೇಶದಲ್ಲಿ ಜಾರಿಗೆ ತಂದ ಲಾಕ್‌ಡೌನ್‌ನಿಂದ ಕುಟುಂಬಗಳ ಮಟ್ಟದಲ್ಲಿ ಆದ ನಷ್ಟ ಏನು ಎಂಬುದನ್ನು ಅಂದಾಜು ಮಾಡುವ ಪ್ರಯತ್ನ ನಡೆಸಿದ ಸಂಸ್ಥೆಯು ಅದಕ್ಕೆ ಸಂಬಂಧಿಸಿದ ವರದಿಯನ್ನು ಈಚೆಗೆ ಪ್ರಕಟಿಸಿದೆ. ‘ಲಾಕ್‌ಡೌನ್‌ ಕಾರಣದಿಂದಾಗಿ ಕುಟುಂಬಗಳ ಸರಾಸರಿ ಆದಾಯವು ಕಳೆದ ವರ್ಷದ ಮಾರ್ಚ್‌ನಲ್ಲಿ ಶೇಕಡ 9.2ರಷ್ಟು, ಏಪ್ರಿಲ್‌ನಲ್ಲಿ ಶೇ 27.9ರಷ್ಟು ಕುಸಿಯಿತು’ ಎಂದು ಅದು ಅಂದಾಜು ಮಾಡಿದೆ.

2020ರ ಅಕ್ಟೋಬರ್‌ ತಿಂಗಳವರೆಗೂ ಕೌಟುಂಬಿಕ ಆದಾಯವು ಲಾಕ್‌ಡೌನ್‌ ಪೂರ್ವದ ಸ್ಥಿತಿಗೆ ಮರಳಿಲ್ಲ. ಆದಾಯಕ್ಕೆ ಸಂಬಂಧಿಸಿದ ಅಕ್ಟೋಬರ್‌ ನಂತರದ ಮಾಹಿತಿ ಲಭ್ಯವಿಲ್ಲ ಎಂದು ಸಿಎಂಐಇ ಹೇಳಿದೆ. 2020ರ ಅಕ್ಟೋಬರ್‌ನಲ್ಲಿನ ಸರಾಸರಿ ಕೌಟುಂಬಿಕ ಆದಾಯವು ಹಿಂದಿನ ವರ್ಷದ ಅಕ್ಟೋಬರ್‌ನಲ್ಲಿದ್ದ ಆದಾಯಕ್ಕೆ ಹೋಲಿಸಿದರೆ ಶೇ 12ರಷ್ಟು ಕಡಿಮೆ ಇತ್ತು. 

2020ರ ಫೆಬ್ರುವರಿಯಲ್ಲಿ ಇದ್ದ ಉದ್ಯೋಗ ಸಂಖ್ಯೆಗೆ ಹೋಲಿಸಿದರೆ ಈ ವರ್ಷದ ಫೆಬ್ರುವರಿಯಲ್ಲಿನ ಉದ್ಯೋಗದ ಸಂಖ್ಯೆಯು 70 ಲಕ್ಷದಷ್ಟು ಕಡಿಮೆ ಇದೆ. 2020ರ ಫೆಬ್ರುವರಿಯಲ್ಲಿ 40.6 ಕೋಟಿ ಉದ್ಯೋಗಗಳು ಇದ್ದವು. ಆದರೆ, ಈ ವರ್ಷದ ಫೆಬ್ರುವರಿಯಲ್ಲಿ ಉದ್ಯೋಗಗಳ ಸಂಖ್ಯೆಯು 39.9 ಕೋಟಿಯಷ್ಟು ಇದೆ ಎಂದು ಸಿಎಂಐಇ ಹೇಳಿದೆ.

‘ಲಾಕ್‌ಡೌನ್‌ ಕಾರಣದಿಂದಾಗಿ ಇದುವರೆಗೆ ತೆತ್ತಿರುವ ಬೆಲೆಯೆಂದರೆ ಒಟ್ಟು 1.1 ಕೋಟಿ ಉದ್ಯೋಗಗಳ ನಷ್ಟ. ವ್ಯಾಪಾರದಲ್ಲಿ ತೊಡಗಿದ್ದವರು, ವೇತನ ಪಡೆಯುತ್ತಿದ್ದವರು ಮತ್ತು ದಿನಗೂಲಿ ನೌಕರರ ವಲಯದಲ್ಲಿ ಇಷ್ಟು ಉದ್ಯೋಗ ನಷ್ಟ ಆಗಿದೆ’ ಎಂದು ಸಿಎಂಐಇ ಹೇಳಿದೆ. ಲಸಿಕೆ ಲಭ್ಯವಾಗಿರುವ ಕಾರಣ, ಕೋವಿಡ್–19 ಹರಡುವುದನ್ನು ತಡೆಯಲು ಲಾಕ್‌ಡೌನ್‌ ತರಬೇಕಾಗಿಲ್ಲ ಎಂದು ಸಂಸ್ಥೆ ಪ್ರತಿಪಾದಿಸಿದೆ.

ಉದ್ಯೋಗ ಗುಣಮಟ್ಟ ಇಳಿಕೆ

ಉದ್ಯೋಗಗಳ ಗುಣಮಟ್ಟ ಕೂಡ ಹಿಂದಿನ ವರ್ಷ ಇದ್ದ ಮಟ್ಟದಲ್ಲಿ ಈಗ ಇಲ್ಲ ಎಂದು ಸಂಸ್ಥೆಯು ಅಭಿಪ್ರಾಯ ವ್ಯಕ್ತಪಡಿಸಿದೆ. ‘2021ರಲ್ಲಿನ ಉದ್ಯೋಗವು 2020ರಲ್ಲಿನ ಉದ್ಯೋಗದ ಗುಣಮಟ್ಟಕ್ಕೆ ತಕ್ಕಂತೆ ಇಲ್ಲ. ಈಗಿನ ಉದ್ಯೋಗದಿಂದ ಸಿಗುವ ಪ್ರತಿಫಲವು ಕಡಿಮೆ ಇದೆ’ ಎಂದು ಸಿಎಂಐಇ ಹೇಳಿದೆ.

ಉದ್ಯೋಗಗಳ ಸಂಖ್ಯೆಯಲ್ಲಿನ ಪುನಶ್ಚೇತನವು ಸ್ಥಗಿತಗೊಂಡಿರುವಂತೆ ಕಾಣಿಸುತ್ತಿದೆ ಎಂದೂ ಅದು ಹೇಳಿದೆ.

***

ಲಾಕ್‌ಡೌನ್‌ ಬೇಡವೇ ಬೇಡ. ಮೊದಲ ಬಾರಿಯ ಲಾಕ್‌ಡೌನ್‌ಗೆ ಒಂದು ಸಮರ್ಥನೆ ಇತ್ತು. ಈಗ ಬೇಕಾಗಿರುವುದು ಸ್ವಯಂಶಿಸ್ತು. ಇದನ್ನು ರಾಜಕಾರಣಿಗಳು, ನಾಯಕರು ಪಾಲಿಸಿದರೆ ಇತರರೂ ಪಾಲಿಸುತ್ತಾರೆ. ಮತ್ತೆ ಲಾಕ್‌ಡೌನ್‌ ಜಾರಿಗೊಳಿಸಿದರೆ ಎಂಎಸ್‌ಎಂಇ ಉದ್ಯಮ ವಲಯ ಸತ್ತುಹೋಗುತ್ತದೆ

- ಸಂಪತ್ ರಾಮನ್, ಉದ್ಯಮಿ

***

ಲಾಕ್‌ಡೌನ್‌ ಜಾರಿಗೊಳಿಸಿದರೆ ಕಾಯಿಲೆಯಿಂದ ಆಗುವುದಕ್ಕಿಂತ ಹೆಚ್ಚು ಗಂಭೀರ ಪರಿಣಾಮ ಉಂಟಾಗಬಹುದು. ಜೀವವನ್ನೂ ಕಾಪಾಡಬೇಕು, ಜೀವನೋಪಾಯವನ್ನೂ ಕಾಪಾಡಬೇಕು. ಇವೆರಡರಲ್ಲಿ ಯಾವುದೋ ಒಂದನ್ನು ಮಾತ್ರ ಕಾಪಾಡಲಾಗುತ್ತದೆ ಎನ್ನುವಂತಿಲ್ಲ

– ಕ್ಯಾಪ್ಟನ್ ಜಿ.ಆರ್. ಗೋ‍‍ಪಿನಾಥ್, ಉದ್ಯಮಿ

***

30 ಲಕ್ಷ - ವ್ಯಾಪಾರಿ ವರ್ಗದಲ್ಲಿನ ಉದ್ಯೋಗ ನಷ್ಟ

38 ಲಕ್ಷ - ವೇತನ ಪಡೆಯುತ್ತಿದ್ದ ವರ್ಗದಲ್ಲಿನ ಉದ್ಯೋಗ ನಷ್ಟ

42 ಲಕ್ಷ - ದಿನಗೂಲಿ ನೌಕರ ವರ್ಗದಲ್ಲಿನ ಉದ್ಯೋಗ ನಷ್ಟ

(2019–20ರ ಸರಾಸರಿ ಉದ್ಯೋಗ ಸಂಖ್ಯೆಗೆ ಹೋಲಿಸಿದರೆ 2021ರ ಫೆಬ್ರುವರಿಯಲ್ಲಿ ಆಗಿರುವ ಉದ್ಯೋಗ ನಷ್ಟ ಇದು)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು