ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಾರಾಷ್ಟ್ರದಿಂದ ಈರುಳ್ಳಿ ಆವಕ ಹೆಚ್ಚಳ: : ತಗ್ಗುವುದೇ ಚಿಲ್ಲರೆ ದರ?

Published : 11 ಸೆಪ್ಟೆಂಬರ್ 2024, 14:32 IST
Last Updated : 11 ಸೆಪ್ಟೆಂಬರ್ 2024, 14:32 IST
ಫಾಲೋ ಮಾಡಿ
Comments

ಬೆಂಗಳೂರು: ಕಳೆದ ಎರಡು ದಿನದಿಂದ ಇಲ್ಲಿನ ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಗೆ ಮಹಾರಾಷ್ಟ್ರದಿಂದ ಈರುಳ್ಳಿ ಆವಕ ಹೆಚ್ಚಾಗುತ್ತಿದೆ.

ಬುಧವಾರ 46 ಸಾವಿರ ಚೀಲ (ಪ್ರತಿ ಚೀಲ 50 ಕೆ.ಜಿ) ಪೂರೈಕೆಯಾಗಿದೆ. ಹಾಗಾಗಿ, ಇನ್ನೊಂದು ವಾರದೊಳಗೆ ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಇಳಿಕೆಯ ಪಥದಲ್ಲಿ ಸಾಗುವ ಸಾಧ್ಯತೆಯಿದೆ ಎಂದು ಸಗಟು ವ್ಯಾಪಾರಿಗಳು ಹೇಳುತ್ತಾರೆ.

ಪ್ರಸ್ತುತ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ‘ಎ’ ಗ್ರೇಡ್‌ ಈರುಳ್ಳಿಗೆ ₹6‌0 ಧಾರಣೆಯಿದೆ. ತಳ್ಳುವ ಗಾಡಿ ಹಾಗೂ ಸರಕು ಸಾಗಣೆ ಆಟೊಗಳಲ್ಲಿ ವ್ಯಾಪಾರಿಗಳು ‘ಸಿ’ ಗ್ರೇಡ್‌ ಈರುಳ್ಳಿಯನ್ನು ₹100ಕ್ಕೆ ಮೂರು ಕೆ.ಜಿ ಲೆಕ್ಕದಲ್ಲಿ ಮಾರಾಟ ಮಾಡುತ್ತಿದ್ದಾರೆ.

ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ನಿಯಂತ್ರಿಸಲು ಮೊದಲ ಹಂತದಲ್ಲಿ ದೆಹಲಿ ಮತ್ತು ಮುಂಬೈನಲ್ಲಿ ಪ್ರತಿ ಕೆ.ಜಿ ಈರುಳ್ಳಿಗೆ ₹35ರಂತೆ ಕೇಂದ್ರ ಸರ್ಕಾರವು ರಿಯಾಯಿತಿ ದರದಡಿ ಮಾರಾಟ ಆರಂಭಿಸಿದೆ. ಎರಡನೇ ಹಂತದಲ್ಲಿ ಕೋಲ್ಕತ್ತ, ಗುವಾಹಟಿ, ಹೈದರಾಬಾದ್‌, ಚೆನ್ನೈ, ಬೆಂಗಳೂರು ಹಾಗೂ ಅಹಮದಾಬಾದ್‌ನಲ್ಲಿ ಮಾರಾಟ ಆರಂಭಿಸುವ ಉದ್ದೇಶ ಹೊಂದಿದೆ.

ಹಾಗಾಗಿಯೇ, ಕಳೆದ ವರ್ಷದ ಮಾರ್ಚ್‌ ಮತ್ತು ಏಪ್ರಿಲ್‌ನಲ್ಲಿ ದಾಸ್ತಾನು ಮಾಡಿಟ್ಟುಕೊಂಡಿದ್ದ ಈರುಳ್ಳಿಯ ಮಾರಾಟಕ್ಕೆ ಮಹಾರಾಷ್ಟ್ರದ ವ್ಯಾಪಾರಿಗಳು ಮುಂದಾಗಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿ ಆವಕ ಏರಿಕೆಯಾಗುತ್ತಿದೆ ಎನ್ನುತ್ತಾರೆ ವ್ಯಾಪಾರಿಗಳು.

ಪ್ರಸ್ತುತ ಬೆಂಗಳೂರು ಮಾರುಕಟ್ಟೆಗೆ ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹಿರಿಯೂರು, ಚಿತ್ರದುರ್ಗದಿಂದ ಈರುಳ್ಳಿ ಪೂರೈಕೆಯಾಗುತ್ತಿದೆ. ಬಿಸಿಲ ಝಳ ಕಡಿಮೆ ಇರುವುದು ಹಾಗೂ ಮಳೆಯಿಂದಾಗಿ ಹಸಿ ಸರಕು ಹೆಚ್ಚು ಪೂರೈಕೆಯಾಗುತ್ತಿದೆ. ಈ ಈರುಳ್ಳಿಗೆ ಬೆಲೆ ಕಡಿಮೆಯಿದೆ ಎಂಬುದು ಅವರ ವಿವರಣೆ.

ರಾಜ್ಯದ ವಿವಿಧೆಡೆಯಿಂದ ಪೂರೈಕೆಯಾಗುವ ಪ್ರತಿ ಕ್ವಿಂಟಲ್‌ ‘ಎ’ ಗ್ರೇಡ್‌ ಈರುಳ್ಳಿಯ ಸಗಟು ದರ ₹3,200ರಿಂದ ₹3,600 ಇದೆ. ಮಹಾರಾಷ್ಟ್ರದಿಂದ ಪೂರೈಕೆಯಾಗುವ ಈರುಳ್ಳಿಗೆ ₹3,500ರಿಂದ ₹4,500 ಸಗಟು ದರವಿದೆ. ಗುಣಮಟ್ಟದ ಈರುಳ್ಳಿಯು ಯಶವಂತಪುರ ಮಾರುಕಟ್ಟೆಯಿಂದ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಆಂಧ್ರ‍ಪ್ರದೇಶಕ್ಕೆ ಪೂರೈಕೆಯಾಗುತ್ತಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

‘ಕೇಂದ್ರ ಸರ್ಕಾರವು ಚಿಲ್ಲರೆ ಮಾರುಕಟ್ಟೆಯಲ್ಲಿ ರಿಯಾಯಿತಿ ದರದಡಿ ಈರುಳ್ಳಿ ಮಾರಾಟಕ್ಕೆ ಮುಂದಾಗಿದೆ. ಇದರಿಂದ ಮಹಾರಾಷ್ಟ್ರದ ವರ್ತಕರಿಗೆ ಬೆಲೆ ಕುಸಿಯುವ ಆತಂಕ ಕಾಡುತ್ತಿದೆ. ಹಾಗಾಗಿ, ಬೆಂಗಳೂರು ಮಾರುಕಟ್ಟೆಗೆ ಹೆಚ್ಚು ಪೂರೈಕೆ ಮಾಡುತ್ತಿದ್ದಾರೆ. ಮುಂಬರುವ ವಾರಗಳಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ದರ ಇಳಿಕೆಯಾಗುವ ಸಾಧ್ಯತೆಯಿದೆ’ ಎಂದು ಯಶವಂತಪುರ ಎಪಿಎಂಸಿ ವರ್ತಕ ಜಿ. ಲೋಕಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT