ರಾಯಿಟರ್ಸ್: ಆಹಾರ ಮತ್ತು ರಸಗೊಬ್ಬರ ಸಬ್ಸಿಡಿ ಮೇಲಿನ ವೆಚ್ಚವನ್ನು ಏಪ್ರಿಲ್‌ನಿಂದ ಶುರುವಾಗುವ ಆರ್ಥಿಕ ವರ್ಷದಲ್ಲಿ (2023–24) ₹ 3.70 ಲಕ್ಷ ಕೋಟಿಗೆ ಇಳಿಕೆ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಮೂಲಗಳು ಹೇಳಿವೆ. ಇದು 2022–23ರ ವೆಚ್ಚಕ್ಕೆ ಹೋಲಿಸಿದರೆ ಶೇಕಡ 26ರಷ್ಟು ಕಡಿಮೆ.
ವಿತ್ತೀಯ ಕೊರತೆಯನ್ನು ನಿಯಂತ್ರಿಸುವ ಉದ್ದೇಶದಿಂದ ಈ ಆಲೋಚನೆ ನಡೆದಿದೆ ಎಂದು ಗೊತ್ತಾಗಿದೆ.
ಆಹಾರ ಮತ್ತು ರಸಗೊಬ್ಬರಗಳಿಗೆ ನೀಡುವ ಸಬ್ಸಿಡಿಯು ಕೇಂದ್ರದ ಈ ವರ್ಷದ ಬಜೆಟ್‌ನ ಎಂಟನೆಯ ಒಂದರಷ್ಟು ಆಗುತ್ತದೆ. ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಆಹಾರ ಸಬ್ಸಿಡಿ ಮೊತ್ತವನ್ನು ಕಡಿಮೆ ಮಾಡುವುದು ರಾಜಕೀಯವಾಗಿ ಸೂಕ್ಷ್ಮ ತೀರ್ಮಾನವಾಗಲಿದೆ.
ಕೇಂದ್ರವು 2023–24ರಲ್ಲಿ ಆಹಾರ ಸಬ್ಸಿಡಿಗೆ ₹ 2.30 ಲಕ್ಷ ಕೋಟಿಯನ್ನು ಮೀಸಲಿಡುವ ಉದ್ದೇಶ ಹೊಂದಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆಹಾರ ಸಬ್ಸಿಡಿಗೆ ₹ 2.70 ಲಕ್ಷ ಕೋಟಿಯನ್ನು ಮೀಸಲಿಡಲಾಗಿದೆ ಎಂದು ಮೂಲಗಳು ಹೇಳಿವೆ.
ರಸಗೊಬ್ಬರ ಸಬ್ಸಿಡಿ ಮೊತ್ತವು ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹ 2.30 ಲಕ್ಷ ಕೋಟಿಯಷ್ಟು ಇದೆ. ಅದು ಮುಂದಿನ ಆರ್ಥಿಕ ವರ್ಷಕ್ಕೆ ₹ 1.40 ಲಕ್ಷ ಕೋಟಿಗೆ ಇಳಿಕೆಯಾಗಬಹುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ವಿಚಾರವಾಗಿ ಕೇಂದ್ರ ಹಣಕಾಸು ಸಚಿವಾಲಯವು ಪ್ರತಿಕ್ರಿಯಿಸಲು ನಿರಾಕರಿಸಿದೆ. ಆಹಾರ ಮತ್ತು ರಸಗೊಬ್ಬರ ಸಚಿವಾಲಯಗಳಿಂದ ಪ್ರತಿಕ್ರಿಯೆ ತಕ್ಷಣಕ್ಕೆ ಲಭ್ಯವಾಗಿಲ್ಲ.
ಕೋವಿಡ್ ಅವಧಿಯಲ್ಲಿ ಜಾರಿಗೆ ಬಂದ ಉಚಿತ ಆಹಾರ ಧಾನ್ಯ ವಿತರಣೆ ಯೋಜನೆಯನ್ನು ನಿಲ್ಲಿಸುವ ಮೂಲಕ ದೊಡ್ಡ ಮೊತ್ತ ಉಳಿತಾಯ ಮಾಡಬಹುದು. ಆ ಯೋಜನೆಯ ಬದಲಿಗೆ ಕಡಿಮೆ ವೆಚ್ಚದ ಇನ್ನೊಂದು ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ ಎಂದು ಗೊತ್ತಾಗಿದೆ. ಈ ಕ್ರಮಗಳಿಂದಾಗಿ, ಬಡವರಿಗೆ ವರ್ಷವೊಂದರಲ್ಲಿ ಸಿಗುವ ಉಚಿತ ಆಹಾರ ಧಾನ್ಯಗಳ ಪ್ರಮಾಣವು ಅರ್ಧದಷ್ಟು ಕಡಿಮೆಯಾಗಲಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸುವ ಸಂದರ್ಭದಲ್ಲಿ ಸಬ್ಸಿಡಿ ಕುರಿತು ಘೋಷಣೆ ಮಾಡಲಿದ್ದಾರೆ. ಕಚ್ಚಾ ತೈಲದ ಬೆಲೆಯು ಕಡಿಮೆ ಇರಲಿದೆ ಎಂಬ ಅಂದಾಜು ಕೂಡ ರಸಗೊಬ್ಬರ ಸಬ್ಸಿಡಿ ಮೊತ್ತವನ್ನು ತಗ್ಗಿಸುವ ಆಲೋಚನೆಯ ಹಿಂದಿದೆ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.