ನವದೆಹಲಿ: ಭಾರತದಿಂದ ಮೊದಲ ಬಾರಿಗೆ ಅಂಜೂರ ಹಣ್ಣಿನ ರಸವನ್ನು ಪೋಲೆಂಡ್‌ಗೆ ರಫ್ತು ಮಾಡಲು ನಿರ್ಧರಿಸಲಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಶನಿವಾರ ತಿಳಿಸಿದೆ.
ದೇಶದಲ್ಲಿ ಕೃಷಿ ಉತ್ಪನ್ನಗಳ ರಫ್ತು ಪ್ರಮಾಣ ಹೆಚ್ಚಿಸಲು ಈ ಕ್ರಮವಹಿಸಲಾಗಿದೆ. ಕೃಷಿ ಮತ್ತು ಆಹಾರ ಸಂಸ್ಕರಣಾ ರಫ್ತು ಅಭಿವೃದ್ಧಿ ಪ್ರಾಧಿಕಾರವು (ಎಪಿಇಡಿಎ) ಈ ನಿಟ್ಟಿನಲ್ಲಿ ಸಿದ್ಧತೆ ನಡೆಸಿದೆ ಎಂದು ವಿವರಿಸಿದೆ.
ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪುರಂದರ ತಾಲ್ಲೂಕಿನ ಬೆಳೆಯುವ ಅಂಜೂರ ಹಣ್ಣಿಗೆ ಭೌಗೋಳಿಕ ಸೂಚ್ಯಂಕ ಪಟ್ಟ (ಜಿಐ ಟ್ಯಾಗ್) ಲಭಿಸಿದೆ. ಅಲ್ಲಿನ ಪುರಂದರ ಹೈಲ್ಯಾಂಡ್ ರೈತ ಉತ್ಪಾದಕರ ಕಂಪನಿಯಿಂದ ತಯಾರಿಸುವ ಅಂಜೂರ ಹಣ್ಣಿನ ರಸವು ಪ್ರಸಿದ್ಧಿ ಪಡೆದಿದೆ.
ವಿಶೇಷ ಮಹತ್ವ ಹೊಂದಿದ ಪದಾರ್ಥಗಳ ಉತ್ಪಾದನೆಗೆ ಭೌಗೋಳಿಕ ಸೀಮೆ ಗುರುತಿಸಿ ಅದಕ್ಕೆ ಆ ಸ್ಥಳದ ಮೊಹರು ಒತ್ತಲಾಗುತ್ತದೆ. ಜಿಐ ನೋಂದಣಿಯಾದ ಉತ್ಪನ್ನಗಳಿಗೆ ಕಾನೂನಾತ್ಮಕ ರಕ್ಷಣೆ ದೊರೆಯುತ್ತದೆ. ಅನಧಿಕೃತವಾಗಿ ಇದರ ಬಳಕೆಗೆ ಕಡಿವಾಣ ಬೀಳಲಿದೆ. ಅಲ್ಲದೆ, ಈ ಉತ್ಪನ್ನದ ರಫ್ತಿಗೆ ಹೆಚ್ಚು ಉತ್ತೇಜನ ಸಿಗಲಿದೆ.
ಅಂಜೂರ ಹಣ್ಣಿನ ರಸದ ರವಾನೆಯು ಜಾಗತಿಕ ಮಟ್ಟದಲ್ಲಿ ಭಾರತದ ಕೃಷಿ ಉತ್ಪನ್ನಗಳ ಉತ್ಕೃಷ್ಟತೆಗೆ ಕನ್ನಡಿ ಹಿಡಿದಿದೆ ಎಂದು ಸಚಿವಾಲಯವು ತಿಳಿಸಿದೆ.