ಮುಂಬೈ: ‘2024–25ನೇ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆಯು ಶೇ 6.7ರಷ್ಟು ಪ್ರಗತಿ ಕಾಣಲಿದೆ. 2030–31ರ ವೇಳೆಗೆ ಭಾರತವು ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ’ ಎಂದು ಎಸ್ ಆ್ಯಂಡ್ ಪಿ ಗ್ಲೋಬಲ್ ಸಂಸ್ಥೆಯ ವರದಿ ಗುರುವಾರ ಹೇಳಿದೆ.
2023–24ನೇ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ 8.2ರಷ್ಟು ಪ್ರಗತಿ ಕಂಡಿದೆ. ವಾಣಿಜ್ಯ ವಹಿವಾಟುಗಳ ಸುಧಾರಣೆ, ಖಾಸಗಿ ವಲಯದಲ್ಲಿ ಹೂಡಿಕೆ ಹೆಚ್ಚಳ ಮತ್ತು ಸಾರ್ವಜನಿಕ ಬಂಡವಾಳದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಒತ್ತು ನೀಡಬೇಕಿದೆ ಎಂದು ಹೇಳಿದೆ.
ಕರಾವಳಿ ತೀರಗಳ ಅಭಿವೃದ್ಧಿ ಸೇರಿ ಭಾರತವು ಮೂಲಸೌಕರ್ಯದ ಅಭಿವೃದ್ಧಿಗೆ ಒತ್ತು ನೀಡಬೇಕಿದೆ. ಭೌಗೋಳಿಕ ಕಾರ್ಯತಂತ್ರ ಪ್ರದೇಶದ ಮೂಲಕ ಗರಿಷ್ಠ ವ್ಯಾಪಾರದ ಲಾಭವನ್ನು ಪಡೆಯಬೇಕಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ದೇಶದ ಶೇ 90ರಷ್ಟು ವ್ಯಾಪಾರವು ಸಾಗರೋತ್ತರ ಪ್ರದೇಶವನ್ನು ಅವಲಂಬಿಸಿದೆ. ಹಾಗಾಗಿ, ರಫ್ತು ಪ್ರಮಾಣ ಹೆಚ್ಚಿಸಲು ಬಂದರುಗಳ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಬೇಕು ಎಂದು ಹೇಳಿದೆ.