ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಜಾಂಬಿಕ್ ಬಂದರಿನಲ್ಲೇ ಉಳಿದ 1.5 ಲಕ್ಷ ಟನ್ ತೊಗರಿ: ಭಾರತದಲ್ಲಿ ಏರುತ್ತಿದೆ ಬೆಲೆ

Published 8 ನವೆಂಬರ್ 2023, 14:11 IST
Last Updated 8 ನವೆಂಬರ್ 2023, 14:11 IST
ಅಕ್ಷರ ಗಾತ್ರ

ಮುಂಬೈ: ಭಾರತಕ್ಕೆ ಬರಬೇಕಿರುವ 1.50 ಲಕ್ಷ ಟನ್‌ನಷ್ಟು ತೊಗರಿ ಬೇಳೆಯನ್ನು ಮೊಜಾಂಬಿಕ್‌ನ ಬಂದರಿನಲ್ಲಿ ಕಳೆದ ಕೆಲವು ವಾರಗಳಿಂದ ತಡೆಹಿಡಿಯಲಾಗಿದೆ. ರಫ್ತು ಅನುಮತಿ ನೀಡುವಂತೆ ಮನವಿ ಮಾಡಿದರೂ ಕಸ್ಟಮ್ಸ್‌ ಅಧಿಕಾರಿಗಳು ಕಿವಿಗೊಡುತ್ತಿಲ್ಲ ಎಂದು ಭಾರತದ ವಹಿವಾಟುದಾರರು ಬುಧವಾರ ಹೇಳಿದ್ದಾರೆ.

ಕಾನೂನು ರಿತ್ಯ ಅಗತ್ಯವಾದ ಎಲ್ಲ ರಫ್ತು ದಾಖಲೆಗಳನ್ನು ಹೊಂದಿದ್ದರೂ 200 ಕಂಟೈನರ್‌ಗಳು ಬಂದರಿನಲ್ಲಿಯೇ ಉಳಿಯುವಂತಾಗಿದೆ. ಮೊಜಾಂಬಿಕ್‌ನ ಕಸ್ಟಮ್ಸ್‌ ಅಧಿಕಾರಿಗಳು ಅನುಮತಿ ನೀಡುತ್ತಿಲ್ಲ. ಏಕೆ ಅನುಮತಿ ನೀಡುತ್ತಿಲ್ಲ ಎನ್ನುವುದಕ್ಕೆ ಯಾವುದೇ ಕಾರಣವನ್ನೂ ನೀಡುತ್ತಿಲ್ಲ ಎಂದು ಸರಕುಗಳ ಆಮದು, ರಫ್ತು ವಹಿವಾಟು ನಡೆಸುವ ಮೊಜ್‌ಗ್ರೇನ್‌ ಎಲ್‌ಡಿಎ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸುಹಾಸ್‌ ಚೌಗಲೆ ಹೇಳಿದ್ದಾರೆ.

ಮೊಜಾಂಬಿಕ್‌ನ ಬಂದರಿನಲ್ಲಿ ಇರುವ ಗೋದಾಮುಗಳಲ್ಲಿ ದಾಸ್ತಾನನ್ನು ಇಡಲಾಗಿದೆ. ಇದರಿಂದಾಗಿ ಮಾರಾಟಗಾರರು ಗರಿಷ್ಠ ಪ್ರಮಾಣದ ದಾಸ್ತಾನು ವೆಚ್ಚ ಭರಿಸುವಂತಾಗಿದೆ ಎಂದಿದ್ದಾರೆ. 

ಭಾರತವು ಆಮದು ಮಾಡಿಕೊಳ್ಳುತ್ತಿರುವ ತೊಗರಿಬೇಳೆಯಲ್ಲಿ ಶೇ 50ರಷ್ಟು ಮೊಜಾಂಬಿಕ್‌ನಿಂದಲೇ ಬರುತ್ತಿದೆ. ಆಮದು ವಿಳಂಬ ಆಗಿರುವುದರಿಂದ ದೇಶದಲ್ಲಿ ತೊಗರಿ ದರ ಏರಿಕೆ ಕಾಣುವಂತಾಗಿದೆ ಎಂದು ವಹಿವಾಟುದಾರರು ಹೇಳಿದ್ದಾರೆ.

ಕಳೆದ ತಿಂಗಳು ಭಾರತದಲ್ಲಿನ ಮೊಜಾಂಬಿಕ್‌ ಹೈಕಮಿಷನರ್‌ ಎರ್ಮಿಂದೊ ಎ. ಪೆರೈರಾ  ಜೊತೆಗಿನ ಭೇಟಿಯ ವೇಳೆ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್‌ ಸಿಂಗ್‌ ಅವರು ಆಮದು ವಿಳಂಬ ಆಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ್ದರು. ಭಾರತಕ್ಕೆ ತೊಗರಿ ಬೇಳೆ ರಫ್ತು ಸುಗಮವಾಗಿ ಆಗುವಂತೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಪೆರೈರಾ ಅವರು ಭರವಸೆ ನೀಡಿದ್ದಾರೆ ಎಂದು ಅಕ್ಟೋಬರ್ 27ರಂದು ಭಾರತ ಸರ್ಕಾರ ಹೊರಡಿಸಿರುವ ಪ್ರಕಟಣೆಯಲ್ಲಿ ಇದೆ.

ಮೊಜಾಂಬಿಕ್‌ ಭರವಸೆ ನೀಡಿದ ಬಳಿಕವೂ ಪರಿಸ್ಥಿತಿ ಸುಧಾರಿಸಿಲ್ಲ ಎಂದು ಭಾರತೀಯ ಬೇಳೆಕಾಳು ಮತ್ತು ಧಾನ್ಯಗಳ ಒಕ್ಕೂಟದ ಅಧ್ಯಕ್ಷ ಬಿಮಲ್ ಕೊಥಾರಿ ತಿಳಿಸಿದ್ದಾರೆ. ರಫ್ತು ತಡೆಹಿಡಿಯುವ ಮೂಲಕ ಭಾರತದ ಪೂರೈಕೆ ಕೊರತೆಯನ್ನು ಮೊಜಾಂಬಿಕ್‌ ದೇಶವು ತನ್ನ ಲಾಭಕ್ಕೆ ಬಳಸಿಕೊಳ್ಳುವಂತೆ ಕಾಣುತ್ತಿದೆ ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಇಳುವರಿ ಕಡಿಮೆ ಆಗಿದೆ. ಹೀಗಾಗಿ ಇಲ್ಲಿ ತೊಗರಿ ಬೇಳೆಯ ಅಗತ್ಯ ಎಷ್ಟಿದೆ ಎನ್ನುವುದು ಮೊಜಾಂಬಿಕ್‌ ದೇಶಕ್ಕೆ ಅರಿವಿದ್ದು ಪರಿಸ್ಥಿತಿಯ ಪ್ರಯೋಜನ ಪಡೆದುಕೊಳ್ಳುತ್ತಿದೆ
ಸತೀಶ್‌ ಉಪಾಧ್ಯಾಯ, ಮುಂಬೈ ಮೂಲದ ಬೇಳೆಕಾಳು ಆಮದುದಾರ

ಪೂರೈಕೆ ಕೊರತೆ: ಸಗಟು ದರ ಏರಿಕೆ

ದೇಶದಲ್ಲಿ ಬೇಡಿಕೆಯಷ್ಟು ಲಭ್ಯತೆ ಇಲ್ಲದೇ ಇರುವುದರಿಂದ ಎರಡು ತಿಂಗಳಿನಲ್ಲಿ ಸಗಟು ದರವು ಶೇ 10ರಷ್ಟು ಹೆಚ್ಚಾಗಿದೆ.  ಪೂರೈಕೆ ಕೊರತೆಯು ಬೆಲೆಯಲ್ಲಿ ಇನ್ನಷ್ಟು ಏರಿಕೆಗೆ ಕಾರಣವಾಗಬಹುದು ಎಂದು ವಹಿವಾಟುದಾರರು ಹೇಳಿದ್ದಾರೆ.  ಮೊಜಾಂಬಿಕ್‌ನಿಂದ ತೊಗರಿ ಬೇಳೆ ಪೂರೈಕೆ ಆಗುವುದು ವಿಳಂಬ ಆಗಿರುವುದರಿಂದ ಈಚಿನ ಕೆಲವು ವಾರಗಳಲ್ಲಿ ಪ್ರತಿ ಟನ್‌ಗೆ ₹ 8300ರಷ್ಟು ದರ ಏರಿಕೆ ಕಂಡಿದೆ ಎಂದು ಮುಂಬೈನ ಆಮದುದಾರ ಸತೀಶ್ ಉಪಾಧ್ಯಾಯ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT