ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಸಿಂಗಪುರ ದ್ವಿಪಕ್ಷೀಯ ವ್ಯಾ‍ಪಾರ ವೃದ್ಧಿ

Published 6 ಏಪ್ರಿಲ್ 2024, 16:09 IST
Last Updated 6 ಏಪ್ರಿಲ್ 2024, 16:09 IST
ಅಕ್ಷರ ಗಾತ್ರ

ಸಿಂಗಪುರ: 2022–23ನೇ ಆರ್ಥಿಕ ವರ್ಷದಲ್ಲಿ ಭಾರತ ಮತ್ತು ಸಿಂಗಪುರದ ನಡುವಿನ ದ್ವಿಪಕ್ಷೀಯ ವ್ಯಾಪಾರವು ₹2.96 ಲಕ್ಷ ಕೋಟಿಗೆ ಮುಟ್ಟಿದೆ. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ 18.2ರಷ್ಟು ಏರಿಕೆಯಾಗಿದೆ.

ಭಾರತವು ಸಿಂಗಪುರದ ಎಂಟನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದ್ದು, ಒಟ್ಟಾರೆ ಪಾಲು ಶೇ 3.1ರಷ್ಟಿದೆ ಎಂದು ಭಾರತೀಯ ಹೈಕಮಿಷನರ್‌ ಕಚೇರಿಯ ಕಾರ್ಯದರ್ಶಿ (ವಾಣಿಜ್ಯ) ಟಿ. ಪ್ರಭಾಕರ್‌ ಹೇಳಿದ್ದಾರೆ.

ಇನ್‌ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟೆರಿಸ್ ಆಫ್ ಇಂಡಿಯಾದಿಂದ (ಐಸಿಎಸ್‌ಐ) ಶನಿವಾರ ನಡೆದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು. 

2022–23ರಲ್ಲಿ ಸಿಂಗಪುರದಿಂದ ಭಾರತದ ಆಮದು ಮೊತ್ತ ₹1.96 ಲಕ್ಷ ಕೋಟಿ ದಾಟಿದೆ. ಒಟ್ಟಾರೆ ಆಮದಿನಲ್ಲಿ ಶೇ 24.4ರಷ್ಟು ಹೆಚ್ಚಳವಾಗಿದೆ. ರಫ್ತು ಪ್ರಮಾಣವು ಶೇ 7.6ರಷ್ಟು ಏರಿಕೆಯಾಗಿದ್ದು, ಈ ಅವಧಿಯಲ್ಲಿ ₹99,948 ಕೋಟಿಗೆ ಮುಟ್ಟಿದೆ ಎಂದು ವಿವರಿಸಿದರು.

ಸಿಂಗಪುರಕ್ಕೆ ಸರಕುಗಳನ್ನು ರಫ್ತು ಮಾಡುವ ದೇಶಗಳ ‍ಪೈಕಿ ಭಾರತವು ಆರನೇ ಸ್ಥಾನದಲ್ಲಿದ್ದರೆ, ಆಮದು ಮಾಡಿಕೊಳ್ಳುವ ದೇಶಗಳ ಪೈಕಿ ಎಂಟನೇ ಸ್ಥಾನದಲ್ಲಿದೆ. ಉಭಯ ದೇಶಗಳು ವಾಣಿಜ್ಯ ಸರಕುಗಳ ವಹಿವಾಟಿಗಷ್ಟೇ  ಸೀಮಿತವಾಗಿಲ್ಲ. ಈ ಅವಧಿಯಲ್ಲಿ ಭಾರತಕ್ಕೆ ₹1.43 ಲಕ್ಷ ಕೋಟಿಯಷ್ಟು ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಹರಿದು ಬಂದಿದೆ. 2000ರ ಏಪ್ರಿಲ್‌ನಿಂದ 2023ರ ಡಿಸೆಂಬರ್‌ವರೆಗೆ ಒಟ್ಟು ₹12.96 ಲಕ್ಷ ಕೋಟಿ ಎಫ್‌ಡಿಐ ಹರಿದು ಬಂದಿದೆ ಎಂದು ತಿಳಿಸಿದರು.

ಕೃತಕ ಬುದ್ಧಿಮತ್ತೆ ಮತ್ತು ಹಸಿರು ಇಂಧನ ಕ್ಷೇತ್ರದಲ್ಲಿ ಎರಡೂ ದೇಶಗಳು ಪರಸ್ಪರ ಸಹಕಾರದ ಕಾರ್ಯತಂತ್ರ ಅನುಸರಿಸುತ್ತಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT