ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ವರ್ಷಗಳಲ್ಲಿ ಹೊಸದಾಗಿ 122 ಯೂನಿಕಾರ್ನ್‌

Last Updated 29 ಜೂನ್ 2022, 16:09 IST
ಅಕ್ಷರ ಗಾತ್ರ

ಬೆಂಗಳೂರು: ಮುಂದಿನ ಎರಡರಿಂದ ನಾಲ್ಕು ವರ್ಷಗಳಲ್ಲಿ ದೇಶದಲ್ಲಿ ಹೊಸದಾಗಿ 122 ಯೂನಿಕಾರ್ನ್‌ಗಳು ಸೃಷ್ಟಿಯಾಗಲಿವೆ ಎಂದು ಹುರೂನ್ ಇಂಡಿಯಾ ವರದಿಯೊಂದು ಹೇಳಿದೆ.

1 ಬಿಲಿಯನ್ ಅಮೆರಿಕನ್ ಡಾಲರ್‌ಗಿಂತ (ಅಂದಾಜು ₹ 7,895 ಕೋಟಿ) ಹೆಚ್ಚಿನ ಮಾರುಕಟ್ಟೆ ಬಂಡವಾಳ ಹೊಂದಿರುವ ನವೋದ್ಯಮ ಕಂಪನಿಯನ್ನು ‘ಯೂನಿಕಾರ್ನ್‌’ ಎಂದು ಗುರುತಿಸಲಾಗುತ್ತದೆ.

ಮುಂದಿನ ಎರಡು ವರ್ಷಗಳಲ್ಲಿ ಯೂನಿಕಾರ್ನ್‌ ಆಗುವ ಸಾಧ್ಯತೆ ಇರುವ, ಸರಕು ಸಾಗಣೆ ವಲಯದ ನವೋದ್ಯಮ ಕಂಪನಿ ‘ಶಿಪ್‌ರಾಕೆಟ್‌’ ಅತ್ಯಂತ ಹೆಚ್ಚಿನ ಮಾರುಕಟ್ಟೆ ಮೌಲ್ಯ ಹೊಂದಿದೆ ಎಂದು ‘ಆಸ್ಕ್‌ ಪ್ರೈವೇಟ್‌ ವೆಲ್ತ್ ಹುರೂನ್ ಇಂಡಿಯಾ ಫ್ಯೂಚರ್ ಯೂನಿಕಾರ್ನ್‌ ಇಂಡೆಕ್ಸ್’ ಹೆಸರಿನ ಈ ವರದಿ ಹೇಳಿದೆ.

ದೇಶದ ನವೋದ್ಯಮಗಳ ರಾಜಧಾನಿ ಎಂಬ ಹೆಗ್ಗಳಿಕೆಯು ಈಗಲೂ ಬೆಂಗಳೂರಿಗೇ ಇದೆ. ಯೂನಿಕಾರ್ನ್‌ ಆಗಬಹುದಾದ 46 ನವೋದ್ಯಮಗಳು ಬೆಂಗಳೂರಿನಲ್ಲಿವೆ. ದೆಹಲಿ ಹಾಗೂ ಮುಂಬೈನಲ್ಲಿ ಇರುವ ಇಂತಹ ನವೋದ್ಯಮಗಳ ಸಂಖ್ಯೆ ಕ್ರಮವಾಗಿ 25 ಹಾಗೂ 16 ಎಂದು ವರದಿ ಹೇಳಿದೆ.

ಈ ವರದಿಯಲ್ಲಿ ಸ್ಥಾನ ಪಡೆದಿರುವ ನವೋದ್ಯಮಗಳು ಒಟ್ಟು 82 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸಿವೆ.

‘ದೇಶದ ನವೋದ್ಯಮ ವ್ಯವಸ್ಥೆಯು ಹಿಂದೆಂದೂ ಕಾಣದ ರೀತಿಯಲ್ಲಿ ವಿಸ್ತರಣೆ ಕಾಣುತ್ತಿವೆ. ಸಾಂಪ್ರದಾಯಿಕ ಉದ್ಯಮಗಳಲ್ಲಿ ಬದಲಾವಣೆಗೆ ಸಾಂಕ್ರಾಮಿಕವು ಕಾರಣವಾಗಿದೆ. ಇದು ನವೋದ್ಯಮಗಳು ಪ್ರವರ್ಧಮಾನಕ್ಕೆ ಬರಲು ಕೂಡ ಕಾರಣವಾಗುತ್ತಿದೆ’ ಎಂದು ಹುರೂನ್‌ ಇಂಡಿಯಾ ಸಂಸ್ಥೆಯ ಮುಖ್ಯ ಸಂಶೋಧಕ ಅನಸ್ ರೆಹ್ಮಾನ್ ಜುನೈದ್ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ತಂತ್ರಜ್ಞಾನ ಆಧಾರಿತ ಉದ್ದಿಮೆಗಳನ್ನು ಪೋಷಿಸುವ ಸಂಸ್ಕೃತಿಯು ಬೆಂಗಳೂರಿನಲ್ಲಿ ಇದೆ. ಇನ್ಫೊಸಿಸ್‌ ಸ್ಥಾಪನೆ ಆದ ಕಾಲದಿಂದಲೂ ಈ ವ್ಯವಸ್ಥೆ ಇದೆ. ನವೋದ್ಯಮಗಳನ್ನು ಪೋಷಿಸಲು ಬೇಕಿರುವ ಸಮುದಾಯ, ಹೂಡಿಕೆದಾರರು ಮತ್ತು ಸರ್ಕಾರದ ನೀತಿಗಳು ಕೂಡ ಇಲ್ಲಿವೆ ಎಂದು ಜುನೈದ್ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT