ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌದಿ ತೈಲ ಖರೀದಿ ತಗ್ಗಿಸಿದ ಭಾರತದ ಕಂಪನಿಗಳು

ಮೇ ತಿಂಗಳಿನಲ್ಲಿ ಶೇ 36ರಷ್ಟು ಕಡಿಮೆ ಖರೀದಿ: ಮೂಲಗಳ ಮಾಹಿತಿ
Last Updated 6 ಏಪ್ರಿಲ್ 2021, 15:36 IST
ಅಕ್ಷರ ಗಾತ್ರ

ನವದೆಹಲಿ/ಲಂಡನ್: ದೇಶದ ತೈಲ ಸಂಸ್ಕರಣಾ ಕಂಪನಿಗಳು ಸೌದಿ ಅರೇಬಿಯಾದಿಂದ ಸದ್ಯ ಖರೀದಿಸುತ್ತಿರುವ ಕಚ್ಚಾತೈಲದ ಪ್ರಮಾಣಕ್ಕೆ ಹೋಲಿಸಿದರೆ ಮೇ ತಿಂಗಳಲ್ಲಿ ಶೇಕಡ 36ರಷ್ಟು ಕಡಿಮೆ ತೈಲ ಖರೀದಿ ಮಾಡಲಿವೆ ಎಂದು ಮೂಲಗಳು ಹೇಳಿವೆ.

ಈ ಹಿಂದೆ ಯೋಜಿಸಲಾದ 1.08 ಕೋಟಿ ಬ್ಯಾರಲ್‌ಗೆ ಹೋಲಿಸಿದರೆ, ಮೇ ತಿಂಗಳಿನಲ್ಲಿ 95 ಲಕ್ಷ ಬ್ಯಾರಲ್‌ ತೈಲವನ್ನು ಮಾತ್ರ ಸೌದಿಯಿಂದ ಖರೀದಿಸಲು ಕಂಪನಿಗಳು ನಿರ್ಧರಿಸಿವೆ ಎಂದು ಮೂಲಗಳು ಮಾಹಿತಿ ನೀಡಿವೆ. ಈ ಕುರಿತು ಭಾರತದ ಕಂಪನಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸೌದಿ ಆರಾಮ್ಕೊ ಕಂಪನಿಯು ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.

ಇಂಡಿಯನ್‌ ಆಯಿಲ್ ಕಾರ್ಪೊರೇಷನ್‌, ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌, ಹಿಂದುಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಮತ್ತು ಮಂಗಳೂರು ರಿಫೈನರಿ ಆ್ಯಂಡ್‌ ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌ ಕಂಪನಿಗಳು ಒಂದು ತಿಂಗಳಿಗೆ ಸೌದಿಯಿಂದ ಸಾಮಾನ್ಯವಾಗಿ 1.48 ಕೋಟಿ ಬ್ಯಾರಲ್‌ ತೈಲ ಖರೀದಿಸುತ್ತವೆ.

ತೈಲ ಉತ್ಪಾದನೆಯನ್ನು ಕ್ರಮೇಣ ಹೆಚ್ಚಿಸಲು ಒಪೆಕ್‌ ಮತ್ತು ಅದರ ಮಿತ್ರರಾಷ್ಟ್ರಗಳು ಕಳೆದ ವಾರ ಒಪ್ಪಿಗೆ ನೀಡಿವೆ. ಹೀಗಿದ್ದರೂ ಕಚ್ಚಾ ತೈಲ ದರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಸೌದಿ ಅರೇಬಿಯಾ ಮಧ್ಯೆ ಅಸಮಾಧಾನ ಮೂಡಿರುವ ಕಾರಣ ಭಾರತವು ಈ ಕ್ರಮ ಕೈಗೊಂಡಿದೆ.

ದೇಶದ ಆರ್ಥಿಕತೆಯು ಕೋವಿಡ್‌–19 ಸಾಂಕ್ರಾಮಿಕದ ಬಿಕ್ಕಟ್ಟಿನಿಂದ ಚೇತರಿಕೆ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವಾಗ ಸೌದಿ ಮತ್ತು ಇತರೆ ತೈಲ ಉತ್ಪಾದನಾ ದೇಶಗಳು ಉತ್ಪಾದನೆ ತಗ್ಗಿಸುವ ಮೂಲಕ ಬೆಲೆ ಏರಿಕೆ ಆಗುವಂತೆ ಮಾಡಿವೆ ಎಂದು ಕೇಂದ್ರ ಸರ್ಕಾರ ಆರೋಪಿಸಿದೆ.

ಭಾರತದ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಸೌದಿಇಂಧನ ಸಚಿವ ರಾಜಕುಮಾರ ಅಬ್ದುಲ್‌ಅಜೀಜ್‌ ಬಿನ್‌ ಸಲ್ಮಾನ್‌ ಅವರು ಶನಿವಾರ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಆ ಬಳಿಕ ಕಡಿಮೆ ಪ್ರಮಾಣದಲ್ಲಿ ತೈಲ ಖರೀದಿಗೆ ನಿರ್ಧರಿಸಲಾಯಿತು. ಇಬ್ಬರು ಸಚಿವರ ಮಧ್ಯೆ ಯಾವೆಲ್ಲಾ ವಿಷಯಗಳ ಕುರಿತು ಮಾತುಕತೆ ನಡೆದಿದೆ ಎನ್ನುವುದು ಗೊತ್ತಾಗಿಲ್ಲ. ಶನಿವಾರದ ಮಾತುಕತೆ ಕುರಿತು ಅರಿತಿರುವ ಮೂಲಗಳ ಪ್ರಕಾರ ಮಾತುಕತೆಯು ಸಕಾರಾತ್ಮಕವಾಗಿತ್ತು.

ಸೌದಿ ಆರಾಮ್ಕೊ ಕಂಪನಿಯು ಏಷ್ಯಾದ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ತನ್ನ ತೈಲದ ಅಧಿಕೃತ ಮಾರಾಟ ಬೆಲೆಯನ್ನು (ಒಎಸ್‌ಪಿ) ಭಾನುವಾರ ಹೆಚ್ಚಿಸಿದೆ. ಆದರೆ, ಯುರೋಪ್‌ ಮತ್ತು ಅಮೆರಿಕದ ಮಾರುಕಟ್ಟೆಗಳಲ್ಲಿ ಬೆಲೆ ಇಳಿಕೆ ಮಾಡಿದೆ. ಏಷ್ಯಾದ ಮಾರುಕಟ್ಟೆಗೆ ಒಎಸ್‌ಪಿ ಹೆಚ್ಚಿಸಿ ಇತರೆ ಮಾರುಕಟ್ಟೆಗಳಿಗೆ ಒಎಸ್‌ಪಿ ಕಡಿತ ಮಾಡಿದ್ದು ಅಚ್ಚರಿ ಮೂಡಿಸಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT